ಇಂದು ಅವಿಶ್ವಾಸ: ಕಮಲಕ್ಕೆ ಕೈ ಪ್ರತಿತಂತ್ರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 27
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ವಿರುದ್ಧ ಇಂದು (ಆ. 28) ನಡೆಯುವ ಅವಿಶ್ವಾಸ ಮಂಡನೆಯ ವಿಶೇಷ ಸಭೆಯಲ್ಲಿ ಅವಿಶ್ವಾಸ ಮಂಡನೆ ಸಫಲವಾಗುವುದೇ ಅಥವಾ ವಿಫಲವಾಗುವುದೇ ಎಂಬುದು ಕುತೂಹಲ ಕೆರಳಿಸಿದೆ.
ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿ, ಕಾಂಗ್ರೆಸ್ನ ಅವಿಶ್ವಾಸ ಮಂಡನೆಯ ತಂತ್ರವನ್ನು ವಿಫಲ ಮಾಡಲು ಹೊರಟಿದ್ದರೆ, ಇತ್ತ ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರ ಹೂಡಲು ಸಕಲ ಸಿದ್ಧತೆ ಕೈಗೊಂಡಿದೆ. ಕಾಂಗ್ರೆಸ್ ಕೂಡ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿ, ಪ್ರತಿತಂತ್ರ ಹೂಡಿ, ಬಿಜೆಪಿ ವಿಪ್ ವಿಫಲವಾಗುವಂತೆ ಮಾಡಲು ತಂತ್ರಗಾರಿಕೆ ನಡೆಸಿದೆ.
ಜಿಪಂ ಸದಸ್ಯ ಭೀಮನಾಯ್ಕ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 36 ಸದಸ್ಯ ಬಲವುಳ್ಳ ಜಿಪಂ ಸದಸ್ಯರ ಸಂಖ್ಯೆ 35ಕ್ಕೆ ಇಳಿಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ನ 16, ಜೆಡಿಎಸ್ ಓರ್ವ, ಬಿಜೆಪಿ ಹಾಗೂ ಬಿಎಸ್ಸಾರ್ನ 18 ಸದಸ್ಯರನ್ನು ಹೊಂದಿವೆ. ಈಗಾಗಲೇ ಕಾಂಗ್ರೆಸ್ ಪಕ್ಷ ಬಿಜೆಪಿಯ ಕೆಲ ಸದಸ್ಯರನ್ನು ತನ್ನತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದರಿಂದ ಬಿಜೆಪಿಯು ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡುವ ಮೂಲಕ ಕಾಂಗ್ರೆಸ್ ತಂತ್ರವನ್ನು ವಿಫಲ ಮಾಡಲು ಮುಂದಾಗಿದೆ.
ಒಗ್ಗಟ್ಟಿನ ಮಂತ್ರ: ಬಿಜೆಪಿ ಹಾಗೂ ಬಿಎಸ್ಸಾರ್ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಭವಿಷ್ಯದಲ್ಲಿ ಹೊಂದಾಗುವ ಸೂಚನೆಯನ್ನು ನೀಡಿದಂತೆ ಕಾಣುತ್ತಿದೆ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ನೇಮಿರಾಜ ನಾಯ್ಕ ಅವರು ಪಕ್ಷದ ಚಿಹ್ನೆಯಡಿ ಗೆದ್ದ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡುತ್ತೇನೆ ಎಂದು ಹೇಳುವ ಕಾಂಗ್ರೆಸ್ನಲ್ಲಿರುವ ಬಿಜೆಪಿ ಸದಸ್ಯರಿಗೆ ಆತಂಕ ಮೂಡಿಸಿದ್ದಾರೆ. ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ತಂತ್ರವನ್ನು ಹೂಡಿದೆ. ಅವಿಶ್ವಾಸಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಯನ್ನು ಕಾಂಗ್ರೆಸ್ ಮಾಡಿಕೊಂಡಿದೆ ಎಂಬ ಮಾಹಿತಿಯನ್ನು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ವಿಪ್ ಉಲ್ಲಂಘನೆ: ಕಾಂಗ್ರೆಸ್ ತನ್ನ 16 ಸದಸ್ಯರಿಗೆ ವಿಪ್ ಜಾರಿ ಮಾಡಿ ಸದಸ್ಯರನ್ನು ತನ್ನಲ್ಲೇ ಉಳಿಸಿಕೊಂಡು, ಇತರ ಸದಸ್ಯರನ್ನು ಸೆಳೆದುಕೊಳ್ಳಲು ಬೇಕಾಗುವ ತಂತ್ರಗಳನ್ನು ಈಗಾಗಲೇ ಹೆಣೆದಿದೆ. ಬಿಜೆಪಿಯ ಓರ್ವ ಸದಸ್ಯರು ನೇರವಾಗಿ ಸಭೆಯಲ್ಲಿ ಪಾಲ್ಗೊಂಡು ವಿಪ್ ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಕೂಡ್ಲಿಗಿಯ ಇಬ್ಬರು ಸದಸ್ಯರು ಸಭೆಗೆ ಗೈರು ಹಾಜರಾಗುವ ಸಾಧ್ಯತೆ ಇದೆ. ಬಿಜೆಪಿ ಸದಸ್ಯರು ಗೈರು ಹಾಜರಾದರೆ ಬಿಜೆಪಿ ಮುಖಭಂಗ ಎದುರಿಸುವ ಸಾಧ್ಯತೆ ಇದೆ. ಅಲ್ಲದೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಹಿಡಿತದಲ್ಲಿದ್ದ ಜಿಪಂ ಆಡಳಿತ ಕಾಂಗ್ರೆಸ್ ಪಾಲಾಗಲಿದೆ.
ಬಿಎಸ್ಸಾರ್ಗೆ ನಿರಾಸೆ?: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಜಿಪಂ ಅಧಿಕಾರ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಇದರಲ್ಲಿ ಯಾರು ಗೆಲವು ಸಾಧಿಸುತ್ತಾರೆ ಎಂಬುದು ಕುತೂಹಲ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಅನುಮಾನದ ಮಾತುಗಳು ಕೇಳಿಬರುತ್ತವೆ. ಕಾಂಗ್ರೆಸ್ಗೆ ರಾಜ್ಯದಲ್ಲಿ ಆಡಳಿತವಿದ್ದರೆ, ಬಿಜೆಪಿ ಹಾಗೂ ಬಿಎಸ್ಸಾರ್ಗೆ ತನ್ನಲ್ಲಿರುವ ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಆಸಕ್ತಿದಾಯಕ. ಇನ್ನು ಪ್ರವಾಸ ಹೋಗಿದ್ದ ಕಾಂಗ್ರೆಸ್ ಸದಸ್ಯರು ತೋರಣಗಲ್ ರಾಕ್ ಹೋಟೆಲ್ನಲ್ಲಿ ಬಿಡಾರ ಹೂಡಿದ್ದು, ಬೆಳಗ್ಗೆ ನೇರವಾಗಿ ಅವಿಶ್ವಾಸ ಮಂಡನೆಯ ವಿಶೇಷ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

