ಅನುದಾನ ಬಳಕೆಗೆ ಶ್ರೀರಾಮುಲು ಹಿಂದೇಟು
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 28
ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಕೂಡ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಅವರು ಅನುದಾನ ಬಳಕೆಯಲ್ಲಿ ಆಸಕ್ತಿ ತೋರಿಲ್ಲ ಎಂಬುದು ಅಂಕಿ-ಸಂಖ್ಯೆಯಿಂದ ಸಾಬೀತಾಗುತ್ತದೆ. ಐದು ವರ್ಷಗಳ ಅವಧಿಯಲ್ಲಿ ಸುಮಾರು ರು. 4.50 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಕೇವಲ ರು. 2.71 ಕೋಟಿ ಖರ್ಚು ಮಾಡಿದ್ದಾರೆ.
ಶ್ರೀರಾಮುಲು ಅವರು ಕ್ಷೇತ್ರದ ವಿವಿಧ ರಸ್ತೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಈಗ ಅದೇ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದು, ಅನುದಾನ ಬಳಕೆ ಕುರಿತು ಆಸಕ್ತಿವಹಿಸಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕಿದೆ.
ಬಿಎಸ್ಸಾರ್ ಕಾಂಗ್ರೆಸ್ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿ, ರಾಜ್ಯ ರಾಜಕೀಯದಲ್ಲಿ ತನ್ನದೆಆದ ಛಾಪು ಮೂಡಿಸಲು ಹೊರಟಿದ್ದ ಶ್ರೀರಾಮುಲು ಅವರು ತಮ್ಮ ಕ್ಷೇತ್ರಕ್ಕೆ ಬಂದ ಅನುದಾನದ ಸಂಪೂರ್ಣ ಬಳಕೆ ಬಗ್ಗೆ ಕಾಳಜಿವಹಿಸಿಲ್ಲ ಎಂಬುದು ತಿಳಿಯುತ್ತದೆ. ಕಳೆದ ಮೂರು ವರ್ಷಗಳಲ್ಲಿಯೂ ತಮ್ಮ ಅನುದಾನ ಇನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿಲ್ಲ ಎಂಬುದು ಮತ್ತೊಂದು ಕಹಿ ಸತ್ಯ.
ರಸ್ತೆ ಅಭಿವೃದ್ಧಿಗೆ ಆದ್ಯತೆ: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಅವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಬಂದ ರು. 450 ಲಕ್ಷ ಒಟ್ಟು ಅನುದಾನದಲ್ಲಿ ರು. 232.02 ಲಕ್ಷ ಅಂದರೆ ಅರ್ಧದಷ್ಟು ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. 2008-09ನೇ ಸಾಲಿನಲ್ಲಿ ರು. 88.50 ಲಕ್ಷ, 2009-10ನೇ ಸಾಲಿನಲ್ಲಿ ರು. 21.12 ಲಕ್ಷ, 2010-11ನೇ ಸಾಲಿನಲ್ಲಿ ರು. 43.74 ಲಕ್ಷ ಬಳಕೆ ಮಾಡಿಕೊಂಡಿದ್ದಾರೆ. ಇನ್ನು 2011-12ನೇ ಸಾಲಿನಲ್ಲಿ ರು. 47.80 ಲಕ್ಷ, 2012-13ನೇ ಸಾಲಿನ ರು. 30.86 ಲಕ್ಷ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರೂ ಇನ್ನು ಅನುದಾನ ಸಂಪೂರ್ಣವಾಗಿ ಬಳಕೆ ಮಾಡಿಲ್ಲ ಎಂಬುದು ಅಸಮಾಧಾನದ ಸಂಗತಿ.
ವಾರ್ಷಿಕ ಅನುದಾನದ ಬಳಕೆ: ಶಾಸಕ ಬಿ. ಶ್ರೀರಾಮುಲು ಅವರಿಗೆ 5 ವರ್ಷದ ಅವಧಿಯಲ್ಲಿ ರು. 450 ಲಕ್ಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ರು. 271.82 ಲಕ್ಷ ಬಳಕೆ ಮಾಡಿಕೊಂಡಿದ್ದಾರೆ. 2008-09ರಲ್ಲಿ ರು. 150 ಲಕ್ಷ ಅನುದಾನದಲ್ಲಿ ರು. 144.27 ಲಕ್ಷ ಬಳಕೆ ಮಾಡಿದ್ದರೆ, 2009-10ನೇ ಸಾಲಿನಲ್ಲಿ ರು. 50 ಲಕ್ಷದಲ್ಲಿ ರು. 48.78 ಲಕ್ಷ ಬಳಕೆ ಮಾಡಿಕೊಂಡಿದ್ದಾರೆ. 2010-11ನೇ ಸಾಲಿನಲ್ಲಿ ಬಂದ ರು. 100 ಲಕ್ಷದಲ್ಲಿ ರು. 56.56 ಲಕ್ಷ ಬಳಸಿಕೊಂಡಿದ್ದು, ಇನ್ನೂ ರು. 43.33 ಲಕ್ಷ ಬಳಕೆ ಮಾಡಬೇಕಾಗಿದೆ. ಅದರಂತೆ 2011-12ರಲ್ಲಿ ಕೇವಲ ರು. 14.11 ಲಕ್ಷ ಮಾತ್ರ ಬಳಕೆ ಮಾಡಲಾಗಿದೆ. ಇನ್ನು ರು. 85.89 ಲಕ್ಷ ಬಳಕೆಯಾಗದೇ ಹಾಗೆ ಉಳಿದಿದೆ. ಇನ್ನು 2012-13ರಲ್ಲಿ ರು. 8.10 ಲಕ್ಷ ಬಳಕೆ ಮಾಡಿದ್ದು, ಇನ್ನು ರು. 91.9 ಲಕ್ಷ ಬಳಕೆ ಮಾಡಬೇಕಾಗಿದೆ. ಬಿ. ಶ್ರೀರಾಮುಲು ಅವರು ಇನ್ನುಳಿದ ಶಾಸಕರಂತೆ ಅನುದಾನ ಬಳಕೆಯಲ್ಲಿ ತಾವು ಬೇರೆಯಲ್ಲ ಎಂಬುದನ್ನು ಅನುದಾನ ಬಳಕೆ ಮಾಡದೇ ತೋರಿಸಿಕೊಟ್ಟಿದ್ದಾರೆ.
ಶಾಸಕರ ಅನುದಾನ ಹಂಚಿಕೆ ವಿವರ: ಶಾಸಕ ಬಿ. ಶ್ರೀರಾಮುಲು ಅವರು ತಮ್ಮ ಐದು ವರ್ಷಗಳ ಅನುದಾನದಲ್ಲಿ 9 ಕಾಮಗಾರಿಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಬಿಡುಗಡೆಯಾದ ಅನುದಾನದಲ್ಲಿ ಚರಂಡಿ ನಿರ್ಮಾಣಕ್ಕೆ ಎರಡನೇ ಆದ್ಯತೆ ನೀಡಿದ್ದಾರೆ. ಐದು ವರ್ಷಗಳ ಅನುದಾನದಲ್ಲಿ ಚರಂಡಿ ನಿರ್ಮಾಣಕ್ಕೆ ರು. 61.31 ಲಕ್ಷ ನೀಡಿದ್ದು, ಸಮುದಾಯ ಭವನ ನಿರ್ಮಾಣಕ್ಕೆ 45.51 ಲಕ್ಷ ನೀಡಿದ್ದಾರೆ. ಇನ್ನು ಬಸ್ ತಂಗುದಾಣಕ್ಕೆ ರು. 6.68 ಲಕ್ಷ, ಬೀದಿ ದೀಪ ಅಳವಡಿಸಲು ರು. 35 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 9.56 ಲಕ್ಷ, ಶಾಲೆಗಳ ಕೊಠಡಿ ನಿರ್ಮಾಣ, ಕಾಂಪೌಂಡ್ ಮತ್ತು ಮೈದಾನ ಅಭಿವೃದ್ಧಿಗೆ ರು. 13 ಲಕ್ಷ, ಉದ್ಯಾನವನಕ್ಕೆ ರು. 10 ಲಕ್ಷ, ಇತರೆ ಕಾಮಗಾರಿಗೆ ರು. 4.79 ಲಕ್ಷ ಹಂಚಿಕೆ ಮಾಡಿದ್ದಾರೆ.
ನೀರಿನ ಸಮಸ್ಯೆಗೆ ಆದ್ಯತೆ ಅಗತ್ಯ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಕೆಲ ಗ್ರಾಮಗಳು ಎದುರಿಸುತ್ತಿದ್ದು, ಶಾಸಕರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಬೇರೆ ಮೂಲಗಳಿಂದ ಕುಡಿಯುವ ನೀರಿಗಾಗಿ ಅನುದಾನ ಹರಿದು ಬರುತ್ತಿದ್ದರೂ, ಯೋಜನೆಯ ಅನುಷ್ಠಾನದಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಕ್ಷೇತ್ರದ ಜನರು ಉಪ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರೂ, ಅನಂತರ ಸಾರ್ವತ್ರಿಕ ಚುನಾವಣಯಲ್ಲಿ ಪುನರಾಯ್ಕೆ ಮಾಡಿರುವ ಕ್ಷೇತ್ರದ ಜನರ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ಅನುದಾನದ ಸಂಪೂರ್ಣ ಉಪಯೋಗಕ್ಕೆ ಆದ್ಯತೆ ನೀಡಬೇಕಾಗಿದೆ. ಈ ಬಾರಿಯಾದರೂ ಶಾಸಕರು ನಿಗದಿತ ಅವಧಿಯಲ್ಲಿ ಅನುದಾನ ಬಳಕೆ ಮಾಡುತ್ತಾರೆಯೇ ಎಂಬುದನ್ನು ಜನತೆ ಕಾದು ನೋಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆ, ನಗರ, ಗ್ರಾಮಾಂತರ ಕ್ಷೇತ್ರಗಳನ್ನು ಸಿಂಗಾಪುರ ಸಿಟಿಯನ್ನಾಗಿ ಮಾಡುತ್ತೇವೆ ಎಂದು ಸಾರ್ವಜನಿಕ ಸಮಾರಂಭಗಳಲ್ಲಿ ಹೇಳುತ್ತಲೇ ಬಂದ ಅವರು, ಸ್ವಕ್ಷೇತ್ರಕ್ಕೆ ಬಂದ ಅನುದಾನವನ್ನೇ ಸಮರ್ಪಕವಾಗಿ ಬಳಸದಿರುವುದು ಕ್ಷೇತ್ರದ ಜನತೆಯ ದುರಂತ. ಇನ್ನಾದರೂ ಎಚ್ಚೆತ್ತು ಸರ್ಕಾರ ನೀಡುವ ಅನುದಾನವನ್ನು ಜನ ಕಲ್ಯಾಣಕ್ಕೆ ಬಳಸಬೇಕೆಂಬುದು ಕ್ಷೇತ್ರದ ಜನರ ಆಶಾವಾದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

