ಬಳ್ಳಾರಿ

ಸ್ವದೇಶಿ ವಸ್ತು ಬಳಸಿ ರುಪಾಯಿ ಮೌಲ್ಯ ಹೆಚ್ಚಿಸಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 29
ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ವಿದೇಶಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವನ್ನು ಕಡಿಮೆ ಮಾಡಲು ಮುಂದಾಗಬೇಕು ಎಂದು ಕೊಟ್ಟೂರುಸ್ವಾಮಿ ಮಠದ ಶ್ರೀ ಸಂಗನಬಸವ ಸ್ವಾಮೀಜಿ ಜನತೆಗೆ ಸಲಹೆ ನೀಡಿದರು.
ತಾಲೂಕಿನ ಹೊಸೂರು ಗ್ರಾಮದ ಹೊಸೂರಮ್ಮ ದೇವಿಯ ದೇವಸ್ಥಾನದಲ್ಲಿ ಗುರುವಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿಯು ಹಮ್ಮಿಕೊಂಡಿದ್ದ ಕಲ್ಯಾಣ ಮಂಟಪದ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆಲ ದಿನಗಳಿಂದ ವಿದೇಶಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಗಾಢವಾದ ಪರಿಣಾಮ ಬೀರುತ್ತಿದೆ. ದೇಶದ ರುಪಾಯಿ ಮೌಲ್ಯವು ವಿದೇಶಿ ಡಾಲರ್ ಹಾಗೂ ಫೌಂಡ್‌ಗಳ ಎದುರು ಅಪಮೌಲ್ಯವಾಗುತ್ತಿದೆ. ಇದರಿಂದಾಗಿ ದೇಶದ ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿರುವುದರಿಂದ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೆಚ್ಚಳವಾಗಿ ಆಹಾರ ಧಾನ್ಯಗಳ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಲಿವೆ ಎಂದರು.
ಹೊರೆ ಹಾಕದಿರಿ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಮದುವೆಗಳಿಗೆ ಬಹುಮಹತ್ವದ ಸ್ಥಾನ ನೀಡಲಾಗುತ್ತಿದೆ. ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಮೂಲಕ ಸಂಪ್ರದಾಯಬದ್ಧ ಮತ್ತು ಸರಳವಾದ ರೀತಿಯಲ್ಲಿ ಮದುವೆಗಳು ನಡೆಯವಂತಾಗಬೇಕು. ಆಡಂಬರದ ಮದುವೆಗಳಿಂದ ನವದಂಪತಿಗಳ ಮೇಲೆ ಸಾಲದ ಹೊರೆ ಹೊರಿಸುವ ಬದಲು ಸರಳ ವಿವಾಹ ಕೈಗೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಗರಗ ನಾಗಲಾಪುರದ ಒಪ್ಪತ್ತೇಶ್ವರ ಮಠದ ಮರಿಮಹಾಂತ ಸ್ವಾಮೀಜಿ, ಹಂಪಿ ಕನ್ನಡ ವಿವಿ ಸಿಂಡಿಕೇಟ್ ಸದಸ್ಯ ಕೆ.ಬಿ.ಶ್ರೀನಿವಾಸ್ ರೆಡ್ಡಿ, ಶಾಸಕ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯ ಮುಖಂಡ ಕಿಡಿಗಣ್ಣಯ್ಯ ಸ್ವಾಮಿ, ಎಸ್. ಸಂಜೀವಪ್ಪ ಶೆಟ್ಟಿ, ಪೂಜಾರಿ ವೀರಣ್ಣ, ಬಾಣದ ಪರಶುರಾಮಪ್ಪ, ಗುಂಡಿ ಪ್ರಶಾಂತ್, ಕೆ. ಉಮೇಶಪ್ಪ, ಜಿ.ಎಸ್.ಕೆ. ಹನುಮಂತಪ್ಪ, ಜೆ. ರಮೇಶ್ ಶಾಸ್ತ್ರಿ, ಸಂತೋಷ್ ಸಿಂಗ್, ಬ್ಯಾಲಾಳ ಪಂಪಾಪತಿ, ಗೋಸಲ ಭರಮಪ್ಪ, ನಾಣಿಕೇರಿ ತಿಮ್ಮಯ್ಯ, ಎಚ್. ರಾಘವೇಂದ್ರರಾವ್, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿಸಿದ್ದಯ್ಯ ಸ್ವಾಮಿ, ಡಿ. ವಿರೂಪಾಕ್ಷಿ, ಕಿಚಿಡಿ ಲಕ್ಷ್ಮಣ, ಜಯಪದ್ಮಾ ಸೇರಿದಂತೆ ಇತರರು ಇದ್ದರು.
ಸುದರ್ಶನ ನಾಯಕ ಸ್ವಾಗತಿಸಿದರು. ಎಂ.ಎಚ್. ಪ್ರಕಾಶ್‌ರಾವ್ ಪ್ರಸ್ತಾವಿಕ ಮಾತನಾಡಿದರು. ವಕೀಲ ಎಚ್.ಪಿ. ಕಲ್ಲಂಭಟ್ ನಿರೂಪಿಸಿ, ವಂದಿಸಿದರು. ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.