ಆನೆಗೊಂದಿಯಲ್ಲಿ ಬೋಟ್ ಮಾಲೀಕರ ವಿವಾದ: ಪ್ರಕ್ಷುಬ್ಧ
ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಬೋಟ್ ಮಾಲೀಕರ ವಿವಾದದಿಂದ ಭಕ್ತರನ್ನು ನದಿ ದಾಟಿಸಲು ವಿಳಂಬವಾಗಿದ್ದರಿಂದ ಕೆಲ ಸಮಯ ಪ್ರಕ್ಷುಬ್ಧಗೊಂಡಿತ್ತು.
ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ 9 ಯತಿವರೇಣ್ಯರಲ್ಲಿ ಒಬ್ಬರಾದ ಶ್ರೀಪದ್ಮನಾಭತೀರ್ಥರ ಆರಾಧನೆ ನಿಮಿತ್ತ ನೂರಾರು ಭಕ್ತರು ತೆರಳುವ ಸಂದರ್ಭದಲ್ಲಿ ಬೋಟ್ ಮಾಲೀಕರ ವಿವಾದದಿಂದಾಗಿ ಕೆಲ ಸಮಯ ವಿಳಂಬವಾಗಿದ್ದಲ್ಲದೆ ಕೆಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು.
ಏನಿದು ವಿವಾದ?: ಆನೆಗೊಂದಿಯ ನವವೃಂದಾವನ ಗಡ್ಡೆ, ತಳವಾರ ಘಟ್ಟ ಮತ್ತು ವಿರೂಪಾಪುರ ಗಡ್ಡೆಯಿಂದ ಹಂಪಿಗೆ ತೆರಳುವ ನದಿ ಮಾರ್ಗಕ್ಕೆ ಬೋಟ್ಗಳ ನಿಯೋಜನೆಗಾಗಿ ಆನೆಗೊಂದಿ ಗ್ರಾಮ ಪಂಚಾಯಿತಿ ಪ್ರತಿವರ್ಷ ಟೆಂಡರ್ ಕರೆದು ಬೋಟ್ ಮಾಲೀಕರಿಗೆ ಅನುಮತಿ ನೀಡಲಾಗುತ್ತಿತ್ತು. ಅದರಂತೆ ಆನೆಗೊಂದಿಯಿಂದ ನವವೃಂದಾವನ ಗಡ್ಡೆಗೆ ತೆರಳಲು ಈ ಮೊದಲು ಸತ್ಯನಾರಾಯಣ ಭೀಮಪ್ಪ ಎನ್ನುವರಿಗೆ 2013ರ ಏಪ್ರಿಲ್ 1ರಿಂದ 2014ರ ಮಾರ್ಚ್ 31ರ ವರೆಗೆ ರು. 85 ಸಾವಿರಕ್ಕೆ ಗ್ರಾಪಂ ಟೆಂಡರ್ ನೀಡಿ ಅವಕಾಶ ಕೊಡಲಾಗಿತ್ತು. ಆದರೆ, ಇವರ ವಿರುದ್ಧ ಗೋಪಾಲ್ಕೃಷ್ಣ ಎಂಬಾತ ತಾಪಂಗೆ ದೂರು ನೀಡಿ ಸತ್ಯನಾರಾಯಣ ಗ್ರಾಪಂಗೆ ನಕಲಿ ದಾಖಲೆಗಳನ್ನು ನೀಡಿ ಟೆಂಡರ್ ಪಡೆದಿದ್ದಾರೆ. ಹೀಗಾಗಿ ಇವರ ಟೆಂಡರ್ ರದ್ದು ಮಾಡಿ ತಮಗೆ ಅವಕಾಶ ನೀಡಬೇಕೆಂದು ಕೋರಿದ್ದರು.
ಇವರ ಮನವಿ ಪರಿಗಣಿಸಿದ ತಾಲೂಕು ಪಂಚಾಯಿತಿ ಇಒ 2013ರ ನ. 23ರಂದು ಸತ್ಯನಾರಾಯಣಗೆ ನೀಡಿದ ಟೆಂಡರ್ಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಗೋಪಾಲಕೃಷ್ಣ ಅವರು ಬೋಟಿಂಗ್ ನಡೆಸಲು ಅನುಮತಿ ನೀಡಿತ್ತು. ಇದಕ್ಕೆ ವಿರೋಧಿಸಿ ಸತ್ಯನಾರಾಯಣ ಅವರು ಜಿಪಂಗೆ ಮೇಲ್ಮನವಿ ಸಲ್ಲಿಸಿ ತಮಗೆ ಟೆಂಡರ್ ಆಗಿದೆ, ನಮಗೆ ಅವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಜಿಪಂ ಅಧ್ಯಕ್ಷರು ಆದೇಶ ನೀಡಿ, ತಾಪಂ ಗೋಪಾಲ್ಕೃಷ್ಣ ಎನ್ನುವವರಿಗೆ ನೀಡಿರುವುದಕ್ಕಿಂತ ಪೂರ್ವದ ಆದೇಶ ಪಾಲಿಸಬೇಕೆಂದು ಸೂಚಿಸಿದ್ದರು. ಈಗ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕುಪಂಚಾಯಿತಿಯ ಎರಡು ಆದೇಶಗಳೆ ವಿವಾದಕ್ಕೆ ಕಾರಣ ಎನ್ನಲಾಗಿದೆ.
ಮೂರನೆಯವರಿಗೆ ಲಾಭ: ಬೋಟ್ ಮಾಲೀಕರ ಇಬ್ಬರ ಜಗಳದಿಂದಾಗಿ ಮೂರನೆಯವರಿಗೆ ಲಾಭವಾದಂತಾಗಿದೆ. ಆನೆಗೊಂದಿಯಿಂದ ನವವೃಂದಾವನಕ್ಕೆ ಬೋಟಿಂಗ್ ಹಾಕಲು ಇಬ್ಬರಿಗೂ ಪೊಲೀಸರು ಅವಕಾಶ ನೀಡಿದ್ದಾರೆ. ಅಲ್ಲದೆ ಭಕ್ತರಿಂದ ಹಣ ವಸೂಲಿ ಮಾಡಬಾರದೆಂಬ ಸೂಚನೆ ನೀಡಿದ್ದರಿಂದ ಇಬ್ಬರ ಜಗಳ ಭಕ್ತರಿಗೆ ಲಾಭ ಗಿಟ್ಟಿದಂತಾಗಿದೆ.
ಭಾನುವಾರದಿಂದ ಮಂಗಳವಾರದವರೆಗೂ ಆರಾಧನೆ ನಡೆಯುತ್ತಿರುವುದರಿಂದ ನಿತ್ಯ ನೂರಾರು ಭಕ್ತರು ತೆರಳುತ್ತಿದ್ದಾರೆ. ಅಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ಉಚಿತವಾಗಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಹನುಮರಡ್ಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

