8ರಂದು 5 ಕೇಂದ್ರಗಳಲ್ಲಿ ಕೆ ಸೆಟ್ ಪರೀಕ್ಷೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 4
ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ (ಕೆ ಸೆಟ್) ಪರೀಕ್ಷೆ ಈ ಮೊದಲೆ ತಿಳಿಸಿದಂತೆ ಡಿ. 8ರಂದು ಭಾನುವಾರ ನಗರದ 5 ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಮಂಜಪ್ಪ ಹೊಸಮನೆ ಹೇಳಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು ಈ ಹಿಂದೆ ಪರೀಕ್ಷೆ ಬರೆಯಲು ಮೈಸೂರು ವಿವಿಗೆ ತೆರಳಬೇಕಿತ್ತು. ಆದರೆ ಈ ಬಾರಿ ಸ್ಥಳೀಯ ವಿಎಸ್ಕೆ ವಿವಿಯನ್ನೇ ನೋಡಲ್ ವಿವಿಯನ್ನಾಗಿ ನೇಮಕ ಮಾಡಿಕೊಂಡಿದೆ ಎಂದರು.
ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜ್, ಮುನ್ಸಿಪಲ್ ಪಿಯು ಕಾಲೇಜ್, ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್, ವಾಸವಿ ಪಿಯು ಕಾಲೇಜ್, ಚೈತನ್ಯ ಪಪೂ ಕಾಲೇಜ್ಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಎರಡು ಅವಧಿಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಕೇಂದ್ರಕ್ಕೆ ಬೆಳಗ್ಗೆ 8.30ಕ್ಕೆ ಆಗಮಿಸಬೇಕು. ಬೆಳಗ್ಗೆ 9ರಿಂದ 12ರ ವರೆಗೆ ನಡೆಯುವ ಮೊದಲನೇ ಅವಧಿಯಲ್ಲಿ ಪತ್ರಿಕೆ- 1, ಪತ್ರಿಕೆ- 2 ಪರೀಕ್ಷೆಗಳು ನಡೆಯಲಿವೆ. ಮಧ್ಯಾಹ್ನ 1.30ರಿಂದ 4ರ ವರೆಗೆ ನಡೆಯಲಿರುವ 2ನೇ ಅವಧಿಯಲ್ಲಿ ಪತ್ರಿಕೆ- 3 ನಡೆಯಲಿದೆ. ಪ್ರಶ್ನೆ ಪತ್ರಿಕೆ ಪುಸ್ತಿಕೆ ಯುಜಿಸಿ ನೆಟ್ ಪರೀಕ್ಷೆಯಲ್ಲಿರುವಂತೆಯೇ ವಸ್ತುನಿಷ್ಟ ಮಾದರಿಯಲ್ಲಿರಲಿದೆ. ಪಠ್ಯಕ್ರಮ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳು ಕೆ ಸೆಟ್ ಅಂತರ್ಜಾಲದಲ್ಲಿ ದೊರೆಯಲಿವೆ ಎಂದು ವಿವರಿಸಿದರು.
12 ಜನ ಉಪನ್ಯಾಸಕರ ವೇತನ ಕಡಿತ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪದವಿ ಪರೀಕ್ಷೆಗಳಿಗೆ ಹಾಜರಾಗದ 12 ಉಪನ್ಯಾಸಕರ ಒಂದು ತಿಂಗಳ ವೇತನ ಕಡಿತಗೊಳಿಸಲಾಗುವುದು. ಈಗಾಗಲೆ ನ. 21ರಿಂದಲೆ ಪದವಿ ಪರೀಕ್ಷೆಗಳು ಆರಂಭಗೊಂಡಿವೆ. ಈ ಪರೀಕ್ಷೆಗಳನ್ನು ಸರಿಯಾಗಿ ನಡೆಸಲು ಕೆಲವರನ್ನು ಸೀನಿಯರ್ ಸೂಪರ್ವೈಜರ್ಗಳನ್ನಾಗಿ ನಿಯೋಜಿಸಲಾಗಿತ್ತು. ಆದರೆ, ಅವರು ತಮ್ಮ ಕೆಲಸವನ್ನು ಸಕ್ರಮವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಅವರ ಒಂದು ತಿಂಗಳ ವೇತನ ಕಡಿತಗೊಳಿಲಾಗುವುದು ಎಂದರು.
ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಆರ್. ಮನೋಹರನ್, ಡಾ. ಮಾನಕರಿ ಶ್ರೀನಿವಾಸಾಚಾರ್ಯ, ಕೂಡ್ಲಿಗಿ ಪದವಿ ಕಾಲೇಜಿನ ಸಿ. ಜಿಲಾನ್ ಖಾನ್, ಸಂಡೂರು ಎಸ್ಇಎಸ್ ಕಾಲೇಜಿನ ಅರುಣ್ ಕರ್ಮಾರ್ಕರ್, ಜೆ.ಎಂ. ಪ್ರಭಾಕರ್, ಮರಿಯಮ್ಮನಹಳ್ಳಿ ಪದವಿ ಕಾಲೇಜಿನ ಪ್ರಾಣೇಶ್ ಕುಲಕರ್ಣಿ, ಹಡಗಲಿ ಜಿಬಿಆರ್ ಕಾಲೇಜಿನ ಡಾ.ವೈ. ಚಂದ್ರಬಾಬು, ಗಂಗಾವತಿ ಎಸ್ಕೆಎನ್ಜಿ ಪದವಿ ಕಾಲೇಜಿನ ತಿಮ್ಮಾರೆಡ್ಡಿ ಮೇಟಿ, ಕೊಪ್ಪಳ ಎಸ್ಜಿ ಕಾಲೇಜಿನ ಬಿ.ಡಿ. ಕೇಶವನ್, ಶರಣಬಸಪ್ಪ ಬಿಳೆಯೆಲೆ, ಎನ್. ಪ್ರತಾಪ್ ಬಾಬುರಾವ್, ಇರಕಲ್ಗಡ ಪದವಿ ಕಾಲೇಜಿನ ಡಾ.ಬಿ. ಹುಲಿಗಮ್ಮ ಇವರ ಒಂದು ತಿಂಗಳ ವೇತನ ಕಡಿತಗೊಳಿಸಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

