ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಿಕೊಳ್ಳಿ
ಹೂವಿನಹಡಗಲಿ: ರೈತರು ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಂಬಲ ನೀಡುವಂತೆ ಒತ್ತಾಯಿಸಿ ರೈತ ಸಂಘ ಕರೆ ನೀಡಿದ್ದ ಹೂವಿನಹಡಗಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರಗೌಡ, ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಲು ನಿರಾಕರಿಸುವ ರಾಜ್ಯದ ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ರಾಜ್ಯ್ನ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಕಟಾವಿಗೆ ಬಂದಿರುವ ಕಬ್ಬು ಹಾಳಾಗುತ್ತಿರುವ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ತಮ್ಮ ಹಠಮಾರಿ ಧೋರಣೆ ಅನುಸರಿಸುವುದು ಉತ್ತಮ ಸಂಗತಿಯಲ್ಲ. ಅಂತಹ ಕಾರ್ಖಾನೆಗಳನ್ನು ಸರ್ಕಾರ ವಶಪಡಿಸಿಕೊಂಡು ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಬೇಕು. ಸರ್ಕಾರಕ್ಕೆ ಸೆಡ್ಡು ಹೊಡೆಯುವ ಮಟ್ಟಕ್ಕೆ ಬೆಳೆದಿರುವ ಸಕ್ಕರೆ ಲಾಬಿಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಉಳಿಗಾಲವಿಲ್ಲ: ರೈತರನ್ನು ನಿರ್ಲಕ್ಷಿಸುವ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲ. ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿದ ಕಾರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಬೆಂಬಲ ಬೆಲೆ ಕೇಳಿದ ರೈತರಿಗೆ ವಿಷವುಣಿಸಿದ ಕಾಂಗ್ರೆಸ್ ಸರ್ಕಾರಕ್ಕೂ ಮುಂದೆ ಅದೇ ಗತಿ ಬರಲಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕೃಷಿ ಬೆಲೆ ಆಯೋಗ ರಚಿಸಿ: ಎಕರೆವಾರು ಖರ್ಚು, ವೆಚ್ಚಗಳನ್ನು ತಾಳೆ ಹಾಕಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರೈತರನ್ನು ಒಡೆದಾಳುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಸಿಡಿದೆದ್ದು, ವಿಧಾನಸೌಧದ ಮೇಲೆ ಹಸಿರು ಧ್ವಜ ಹಾರಿಸಿದಾಗ ಮಾತ್ರ ರೈತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಮುಂಡರಗಿಯ ರೈತ ಮುಖಂಡ ವಿಠಲ್ ಗಣಾಚಾರಿ ಮಾತನಾಡಿ, ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರ ಕೈಗೊಂಬೆಯಾಗಿರುವುದರಿಂದ ಕಣ್ಣೆದುರಿಗೆ ಅನ್ಯಾಯವಾದರೂ ಪ್ರಶ್ನ್ನಿಸುವ ಪರಿಸ್ಥಿತಿಯಿಲ್ಲ. ಕಬ್ಬು ಬೆಳೆಗಾರರಿಗೆ 70-30ರ ಅನುಪಾತದಲ್ಲಿ ಲಾಭಾಂಶ ಹಂಚಿಕೆ ಮಾಡುವಂತೆ ರಂಗರಾಜನ್ ವರದಿಯ ಶಿಫಾರಸು ಜಾರಿಗೊಳಿಸುವಂತೆ ಆಗ್ರಹಿಸಿದರು.
ಮುಖಂಡರಾದ ಕೆ. ಪುತ್ರೇಶ, ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ, ಎಲ್. ಮಧುನಾಯ್ಕ, ಯು. ಕೊಟ್ರೇಶನಾಯ್ಕ, ರೈತ ಸಂಘದ ತಾಲೂಕು ಅಧ್ಯಕ್ಷ ಎಂ. ಗಂಗಾಧರ, ಕೂಡ್ಲಿಗಿಯ ಬಸವರಾಜ, ವಿ.ಬಿ. ಸೋಮಶೇಖರಪ್ಪ, ಕೋಡಬಾಳ ಚಂದ್ರಪ್ಪ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ವಿಜಯಕುಮಾರ್ ಭೇಟಿ ನೀಡಿ ರೈತರಿಂದ ಮನವಿಪತ್ರ ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ್ ಅರಭಾವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಡಗಲಿ ಬಂದ್ ಹಿನ್ನೆಲೆಯಲ್ಲಿ ವರ್ತಕರು ಮಧ್ಯಾಹ್ನ್ನದವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕರಿಸಿದರು. ಡಿವೈಎಸ್ಪಿ ಆರ್.ಎಸ್. ಪಾಟೀಲ್, ಪಿಎಸ್ಐ ಆಂಜನೇಯ, ಮಹ್ಮದ್ ರಫಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

