ಹೊಸಪೇಟೆಯಲ್ಲೂ ದೇವದಾಸಿಯರಿಂದ ಪ್ರತಿಭಟನೆ
ಹೊಸಪೇಟೆ: ದೇವದಾಸಿ ಮಹಿಳೆಯರ ಹಾಗೂ ಅವರ ಮಕ್ಕಳ ಹಕ್ಕೊತ್ತಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ದೇವದಾಸಿಯರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ತಾಲೂಕಾಧ್ಯಕ್ಷೆ ಕೆ. ನಾಗರತ್ನಮ್ಮ ಮಾತನಾಡಿ, ಜಾತಿ ತಾರತಮ್ಯ ಮಾಡುವ ಎಲ್ಲ ಆಚರಣೆಗಳನ್ನು ಅಪರಾಧಗಳೆಂದು ಪರಿಗಣಿಸಿ ವಿಚಾರಣೆಗೊಳಪಡಿಸಬೇಕು. ಇವರ ಮೇಲಿನ ದಾಳಿ ದಬ್ಬಾಳಿಕೆಗೆ ಶಿಕ್ಷೆಯನ್ನು ಕಠಿಣಗೊಳಿಸಬೇಕು. ಅದೆ ರೀತಿ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು, ಘಟನೆ ನಡೆದ ಕೂಡಲೆ ಪುನರ್ವಸತಿ ಕಲ್ಪಿಸಬೇಕು. ಪ್ರಕರಣವನ್ನು ಬೇಗನೆ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಮತ್ತು ಹೆಚ್ಚು ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಬೇಕು. ದೌರ್ಜನ್ಯಕ್ಕೊಳಗಾದವರ ಮತ್ತು ಸಾಕ್ಷಿದಾರರ ಹಕ್ಕುಗಳನ್ನು ಕಾಯ್ದೆಯಲ್ಲಿ ವಿವರಿಸಬೇಕು. ಇವರ ಮೇಲಿನ ದೌರ್ಜನ್ಯ ಪ್ರಕರಣ ನೋಂದಾಯಿಸಲು ನಿರಾಕರಿಸುವ ಮತ್ತು ರಾಜಿ ಮಾಡಿಕೊಳ್ಳಲು ಒತ್ತಡ ಹೇರುವ ಪೊಲೀಸ್ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದೇವದಾಸಿ ಮಹಿಳೆಯರಿಗೆ ಮತ್ತು ಭೂಹೀನ ಕಡುಬಡವರಿಗೆ ಕನಿಷ್ಠ ಎರಡು ಎಕರೆ ಭೂಮಿ ನೀಡಬೇಕು. ದೇವದಾಸಿಯರಿಗೆ ನಿವೇಶನ, ಅವರ ಮಕ್ಕಳ ಮದುವೆಗೆ ರು. 10 ಸಾವಿರ ಸಹಾಯಧನ ನೀಡಬೇಕು ಎಂದರು. ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ಕಾರ್ಯದರ್ಶಿ ದುರ್ಗಾ ಕೋಟೆ, ಹಂಪಮ್ಮ, ಎಲ್ಲಮ್ಮ, ಗಾಳೆಮ್ಮ, ಮೈಲಮ್ಮ, ಹನುಮಂತಮ್ಮ, ತಾಯಮ್ಮ, ಕರಿಯಮ್ಮ, ಪದ್ಮಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

