ಬಳ್ಳಾರಿ

ಅಂಗನವಾಡಿ ಆಹಾರ ಅಕ್ರಮ ದಾಸ್ತಾನು: ಇಬ್ಬರ ಬಂಧನ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಡಿ. 10
ಅಂಗನವಾಡಿ ಮಕ್ಕಳಿಗೆ ವಿತರಿಸುವ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಖರೀದಿಸಿದ್ದ ಪಟ್ಟಣದ ಮುಂಡವಾಡ ಸದಾನಂದಪ್ಪ ಎನ್ನುವವರಿಗೆ ಸೇರಿದ್ದ ಅಂಗಡಿ ಮೇಲೆ ಸಿಡಿಪಿಒ ಹಾಗೂ ಸಿಬ್ಬಂದಿ ದಾಳಿ ಮಾಡಿ ವಿವಿಧ ರೀತಿಯ ಆಹಾರ ಧಾನ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಹಾಲಿನ ಚಿಲ್ಲರೆ ವ್ಯಾಪಾರಿಯೊಬ್ಬರ ಖಚಿತ ಮಾಹಿತಿ ಆಧಾರಿಸಿ ಸಿಡಿಪಿಒ ದಾಳಿ ಮಾಡಿದ್ದಾರೆ. ಪಟ್ಟಣದ ಉದ್ಭವ ವೃತ್ತದಲ್ಲಿರುವ ಸದಾನಂದಪ್ಪ ಇವರ ಅಂಗಡಿಯಲ್ಲಿ ಅಕ್ರಮವಾಗಿ ಖರೀದಿ ಮಾಡಿಕೊಂಡು ಸಂಗ್ರಹಿಸಿದ್ದ 35 ಪ್ಯಾಕೇಟ್ ನಂದಿನಿ ಹಾಲಿನ ಪೌಡರ್, 25 ಕೆ.ಜಿ. ಹೆಸರು ಬೇಳೆ, 180 ಕೆ.ಜಿ. ಅಕ್ಕಿ, 50 ಕೆ.ಜಿ. ರವಾ, 100 ಕೆ.ಜಿ. ಗೋಧಿ, 20 ಕೆ.ಜಿ. ಶೇಂಗಾ ಬೀಜ, 20 ಕೆ.ಜಿ. ಹೆಸರು ಕಾಳು ಸೇರಿದಂತೆ ಅಂಗನವಾಡಿ ಮಕ್ಕಳಿಗೆ ಸರ್ಕಾರ ಉಚಿತವಾಗಿ ವಿತರಣೆ ಮಾಡುವ ಆಹಾರ ಧಾನ್ಯಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಮುಂಡವಾಡ ಸದಾನಂದಪ್ಪ ಹಾಗೂ ಅವರ ಪುತ್ರನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಆರೋಪಿ ಸದಾನಂದಪ್ಪ ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಆಹಾರ ಧಾನ್ಯಗಳನ್ನು ಕಾಲ್ವಿ ಗ್ರಾಮದ ಬಸವರಾಜ ಎಂಬುವವರಿಂದ ಖರೀದಿ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾನೆ. ಅಂಗನವಾಡಿ ಆಹಾರ ಧಾನ್ಯ ಅಕ್ರಮವಾಗಿ ಮಾರಾಟ ಮಾಡುವ ಒಂದು ದೊಡ್ಡ ಜಾಲವೆ ಇದೆ. ಈ ಕುರಿತು ಸಂಪೂರ್ಣ ತನಿಖೆಯಾದರೆ ಸತ್ಯಾಂಶ ಹೊರಗೆ ಬರುತ್ತದೆ ಎಂದು ಘಟನಾ ಸ್ಥಳದಲ್ಲಿ ನೆರೆದಿದ್ದ ನೂರಾರು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.
ಅಗತ್ಯ ವಸ್ತುಗಳ ತಡೆ ಕಾಯ್ದೆ ಅಡಿ ಯಾವುದೆ ಖಾಸಗಿ ವ್ಯಕ್ತಿಯ ಅಂಗಡಿ ಹಾಗೂ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದರೆ ಅದು ಅಪರಾಧ. ಈ ಹಿನ್ನೆಲೆಯಲ್ಲಿ ಹೂವಿನಹಡಗಲಿ ಠಾಣೆಯಲ್ಲಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೋಮಣ್ಣ ಚಿನ್ನೂರು ದೂರು ದಾಖಲಿಸಿದ್ದಾರೆ. ಸಿಬ್ಬಂದಿ ರಾಮನಗೌಡ ಸೇರಿದಂತೆ ಇತರರು ದಾಳಿಯಲ್ಲಿ ಭಾಗವಹಿಸಿದ್ದರು. ಹೂವಿನಹಡಗಲಿ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.