ಬಳ್ಳಾರಿ

ಕೃಷಿ ಸಬ್ಸಿಡಿ ಕಡಿತ ಒಡಂಬಡಿಕೆ: ರೈತ ಸಂಘ ಕಳವಳ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 10
ಇತ್ತೀಚೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ವಿಶ್ವ ವಾಣಿಜ್ಯ ಸಂಘಟನೆಗಳ 9ನೇ ಶೃಂಗಸಭೆಯಲ್ಲಿ ಕೃಷಿ ಸಬ್ಸಿಡಿ ಕಡಿತ ಮಾಡುವ ಒಡಂಬಡಿಕೆಯು ದೇಶದ ಕೃಷಿಕರ ಮೇಲೆ ಮಾಡುವ ಮಾರಣಾಂತಿಕ ನಿರ್ಧಾರವಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಮಯೂರ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದುವರಿದ ದೇಶದಲ್ಲಿ ಕೃಷಿ ಉತ್ಪನ್ನದ ರಫ್ತು ಸಬ್ಸಿಡಿ ಸೇರಿದಂತೆ ಬೇರೆ ಬೇರೆ ವಿಷಯಗಳಿಗೆ ಕೃಷಿಗೆ ಶೇ.60ಕ್ಕಿಂತ ಹೆಚ್ಚಿನ ಸಬ್ಸಿಡಿ ನೀಡುತ್ತಿದೆ. ಆದರೆ ನಮ್ಮ ದೇಶದಲ್ಲಿ ರೈತರಿಗೆ ಕೇವಲ ಶೇ.3ರಷ್ಟು ಮಾತ್ರ ಸಬ್ಸಿಡಿ ನೀಡಿರುತ್ತಾರೆ. ಅದನ್ನು ಕಡಿತ ಮಾಡಿದರೆ ರೈತರ ಗತಿ ಏನು? ನಿರ್ಧಾರ ಕೈಗೊಳ್ಳುವ ಪೂರ್ವದಲ್ಲಿಯೇ ಅಖಿಲ ಭಾರತ ರೈತ ಸಂಘ ಇದನ್ನು ವಿರೋಧಿಸಿ, ಕಡಿತ ಮಾಡಲು ಒಪ್ಪಿಕೊಳ್ಳಬಾರದೆಂದು ಎಚ್ಚರಿಸಿತ್ತು. ಇದೀಗ ಶೃಂಗ ಸಭೆಯಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದರಿಂದ ದೇಶ ಹಾಗೂ ರಾಜ್ಯವ್ಯಾಪಿ ಜನಾಂದೋಲನ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಿದರೆ ಪಶ್ಚಿಮ ಘಟ್ಟದಲ್ಲಿರುವ 4156 ಹಳ್ಳಿಗಳಲ್ಲಿ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ. ಅಲ್ಲಿನ ನಿವಾಸಿಗಳು, ಸ್ಥಳೀಯ ಆಡಳಿತಗಾರರ ಅಭಿಪ್ರಾಯವನ್ನು ಸಂಗ್ರಹಿಸದೆ, ವರದಿ ತಯಾರಿಸಿದ್ದು, ಈ ವರದಿಯ ಅನುಷ್ಠಾನ ತೀವ್ರ ಖಂಡನೀಯವಾಗಿದೆ. ವರದಿ ಜಾರಿಯಿಂದಾಗಿ ಕರ್ನಾಟಕದಲ್ಲಿ ಪಶ್ಚಿಮ ಘಟ್ಟದ 11 ಜಿಲ್ಲೆಗಳ 40 ತಾಲೂಕಗಳಲ್ಲಿನ 1576 ಗ್ರಾಮಗಳು ತೀವ್ರ ತೊಂದರೆಗೊಳಗಾಗಲಿವೆ ಎಂದು ತಿಳಿಸಿದರು.
ವಿವಿಧ ಬೇಡಿಕೆ ಇಟ್ಟುಕೊಂಡು ಡಿ. 16ರಂದು ರಾಜ್ಯದ 110 ಕಡೆಗಳಲ್ಲಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತದೆ. ಹೋರಾಟದ ಬೇಡಿಕೆಗಳನ್ನು ವ್ಯವಸಾಯದ ಸಬ್ಸಿಡಿ ಒಡಂಬಡಿಕೆಯನ್ನು ಹಿಂದಕ್ಕೆ ಪಡೆಯಬೇಕೆಂಬ ವಿಷಯವು ಸೇರಿದೆ. ಕಬ್ಬು ಬೆಳೆಗಾರರ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು ಬಸವರಾಜ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿ.ಎಸ್. ಶಿವಶಂಕರ್, ಪೊಲಪ್ಪ, ನಾಗದೇವಪ್ಪ, ಗವಿಸಿದ್ಧಪ್ಪ ಇದ್ದರು.
ಭೂ ಸಂತ್ರಸ್ತರಿಗೆ ಪರಿಹಾರಕ್ಕಾಗಿ ನಾಳೆ ಧರಣಿ
ಮಿತ್ತಲ್ ಹಾಗೂ ಬ್ರಾಹ್ಮಿಣಿ ಸ್ಟೀಲ್ಸ್‌ಗಾಗಿ ಜಮೀನು ಕಳೆದುಕೊಂಡಿರುವ ಕುಡಿತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ ಎರ್ರಂಗಳಿ ಗ್ರಾಮಗಳ ಭೂ ಸಂತ್ರಸ್ತರಿಗೆ 2013ರ ಹೊಸ ಭೂಸ್ವಾಧೀನ ಕಾಯ್ದೆಯಂತೆ ಭೂ ಪರಿಹಾರ ಮತ್ತು ಪುನರ್ವಸತಿ ಪರಿಹಾರವನ್ನು ಕೊಡಬೇಕೆಂದು ಡಿ. 12ರಂದು ಕುಡಿತಿನಿಯಲ್ಲಿ ಭೂಸಂತ್ರಸ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. 2007ರಲ್ಲಿಯೇ ಭೂ ಸ್ವಾಧೀನ ಕಾಯ್ದೆ ರೈತರ ಪರವಾಗಿಲ್ಲವೆಂದು ಕೇಂದ್ರ ಸರ್ಕಾರ ತಿದ್ದುಪಡಿಗೆ ಯೋಜಿಸಿರುವಾಗಲೇ, 2010ರಲ್ಲಿ ನಮ್ಮ ಜಮೀನುಗಳನ್ನು ಬಲವಂತವಾಗಿ ಮೂಲ ಕಾಯ್ದೆಯ ಆಧಾರದಲ್ಲಿ ರಚಿಸಲಾದ ಕೆಐಎಡಿಬಿ ಕಾನೂನಿನಂತೆ ಕಂಪನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವುದರಿಂದ ರೈತರಿಗೆ ಭಾರಿ ಅನ್ಯಾಯವಾಗಿದ್ದು, ಈಗ ಹೊಸ ಕಾಯ್ದೆಯಂತೆ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.