ಶೀಘ್ರದಲ್ಲೇ ಸರ್ಕಾರ ವಿರುದ್ಧ ಶಾಸಕರ ದಂಗೆ
ಕೊಟ್ಟೂರು: ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ದಂಗೆ ಎದ್ದಿದ್ದು, ಅವರ ಸಹನೆಯ ಕಟ್ಟೆ ಒಡೆದ ಪರಿಣಾಮ ಸಿದ್ದರಾಮಯ್ಯ ಸರ್ಕಾರದಲ್ಲಿ ಶೀಘ್ರದಲ್ಲೇ ರಾಜ್ಯದ ಜನತೆ ಸ್ಫೋಟ ಕಾಣಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.
ಗುರುವಾರ ಪಟ್ಟಣದ ಬಿಜೆಪಿ ಮುಖಂಡ ಎಸ್. ತಿಂದಪ್ಪ ಅವರ ಪುತ್ರ ಡಾ. ರಾಕೇಶ್ ವಿವಾಹದಲ್ಲಿ ಪಾಲ್ಗೊಂಡು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಡೆದ ಮರುದಿನವೇ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ. ಯಾವುದೇ ಶಕ್ತಿ ಸರ್ಕಾರದ ಪತನವನ್ನು ನಿಲ್ಲಿಸಲಾರದು. ಸರ್ಕಾರದ ಈಗಿನ ನಡವಳಿಕೆ ಪತನದ ಸೂಚನೆ ತೋರಿಸುತ್ತಿದೆ. ಹೆಸರಿಗೆ ಮಾತ್ರ ಸರ್ಕಾರ ಅಸ್ತಿತ್ವದಲ್ಲಿದ್ದು, ಯಾವುದೇ ಹೊಸ ಯೋಜನೆಗಳು ಜಾರಿಗೊಳ್ಳದಂತಾಗಿದೆ ಎಂದು ದೂರಿದರು.
ಕಬ್ಬು ಬೆಳೆಗೆ ಸಂಬಂಧಿಸಿದಂತೆ ರೈತರ ಪರ ಗಟ್ಟಿ ನಿಲುವು ತೆಗೆದುಕೊಳ್ಳುವೆ ಎಂದು ರೈತ ವಿಠಲ ಆತ್ಮಹತ್ಯೆ ಮಾಡಿಕೊಂಡಾಗ ಅಧಿವೇಶನದಲ್ಲಿ ಘೋಷಿಸಿದ ಸಿಎಂ ಇದೀಗ ಕೋಟ್ನ ಮಧ್ಯಪ್ರವೇಶ ತೋರಿಸಿ ಮತ್ತೆ ಸಕ್ಕರೆ ಕಾರ್ಖಾನೆಗಳ ಪರ ನಿಲ್ಲುವತ್ತ ಜಾರತೊಡಗಿದ್ದಾರೆ. ಸಿದ್ದರಾಮಯ್ಯ ಗೋಸುಂಬೆತನದ ವ್ಯಕ್ತಿ. ಅವರಿಗೆ ನಿಜವಾದ ರೈತ ಕಾಳಜಿ ಇಲ್ಲವೆ ಇಲ್ಲ ಎಂದು ಟೀಕಿಸಿದರು.
ಆವರ್ತ ಎಲ್ಲಿ?: ರೈತರ ಬೆಳೆಗಳಿಗೆ ಸಾವಿರ ಕೋಟಿ ರು ಆವರ್ತ ನಿಧಿ ತೆಗೆದಿರಿಸಲಾಗಿದೆ ಎಂದು ಹೇಳಿರುವ ಸಿಎಂ, ಈ ಹಣವನ್ನು ಎಲ್ಲಿ ಮೀಸಲಾಗಿಟ್ಟಿದ್ದಾರೆ ಎಂದು ದಾಖಲೆಗಳ ಮೂಲಕ ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದ ಅವರು, ಆವರ್ತ ನಿಧಿಯ ಹಣ ಇಲ್ಲವೇ ಇಲ್ಲ. ಈ ಕುರಿತು ಸರ್ಕಾರಿ ದಾಖಲೆಗಳು ಸ್ಪಷ್ಟಪಡಿಸುತ್ತಿವೆ. ಪ್ರತಿ ಹಂತದಲ್ಲೂ ಸುಳ್ಳುಗಳ ಸರಮಾಲೆಯನ್ನೇ ಸುರಿಸುತ್ತಿರುವ ಸರ್ಕಾರ, ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳನ್ನು ಕೈಬಿಟ್ಟು ಬರೀ ರಾಜಕೀಯ ಆಡಳಿತ ನಡೆಸುವ ಸಣ್ಣತನ ತೋರಿಸುತ್ತಿದ್ದಾರೆ ಎಂದು ಕುಟುಕಿದರು.
ಬದ್ಧತೆ ಕೊರತೆ: ತಮ್ಮ ಅವಧಿಯಲ್ಲಿ 43 ಹೊಸ ತಾಲೂಕುಗಳ ರಚನೆಗೆ ಮುಂದಾಗಿ ಬಜೆಟ್ನಲ್ಲಿ ಒಂದು ತಾಲೂಕು ರಚನೆಗೆ ರು. 2 ಕೋಟಿ ಅನುದಾನ ಮೀಸಲಿರಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಕೊಟ್ಟೂರು ಸೇರಿದಂತೆ ರಾಜ್ಯದ ಇತರ ಭಾಗದ ತಾಲೂಕುಗಳ ರಚನೆಗೆ ಪ್ರಕ್ರಿಯೆ ಆರಂಭಗೊಂಡಿತ್ತು. ಇಂತಹ ಮಹತ್ವದ ಕಾರ್ಯಕ್ಕೆ ಸಿದ್ದರಾಮಯ್ಯ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಘೋಷಿತ ನೂತನ ತಾಲೂಕುಗಳಲ್ಲಿ 36 ಉತ್ತರ ಕರ್ನಾಟಕ ಭಾಗದವುಗಳಾಗಿವೆ. ಇದುವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದರ ಕಣ್ಣು ಕುಕ್ಕಿಸಿದೆ. ಇವೆಲ್ಲವೂ ಉತ್ತರ, ಹೈಕ, ಮಧ್ಯ ಕರ್ನಾಟಕ ಭಾಗದವುಗಳು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿ ನೂತನ ತಾಲೂಕುಗಳ ರಚನೆಗೆ ಮುಂದಾಗದೇ ಮೈಸೂರು ಭಾಗದ ಹಿತರಕ್ಷಣೆ ಕಾಪಾಡಲು ಮುಂದಾಗಿದ್ದಾರೆ. ನಿಜವಾಗಲೂ ಅವರಿಗೆ ಯಾವುದೇ ಬಗೆಯ ಬದ್ಧತೆ ಇಲ್ಲ ಎಂದು ಶೆಟ್ಟರ್ ಹರಿಹಾಯ್ದರು.
ವಿಧಾನಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ನೇಮಿರಾಜ್ ನಾಯ್ಕ, ಎಂ.ಎಸ್. ಸೋಮಲಿಂಗಪ್ಪ, ಜಿಪಂ ಸದಸ್ಯ ಪಿ. ಚನ್ನಬಸವನಗೌಡ, ಎಸ್. ತಿಂದಪ್ಪ, ಕೊಟ್ರೇಶ್ ಕಾಮಶೆಟ್ಟಿ, ಖಾನಾವಳಿ ಶಿವಕುಮಾರ್, ಶ್ರೀಕಾಂತ್ ಗೋಂದಿ, ಚಿರಿಬಿ ಕೊಟ್ರೇಶ್, ಕೆ.ಎಸ್. ವಿವೇಕಾನಂದಗೌಡ, ವೀರೇಶ್ಗೌಡ, ಮರಬದ ನಾಗರಾಜ ಮತ್ತಿತರರು ಇದ್ದರು.
ಲೋಕಸಭಾ ಚುನಾವಣೆ ನಂತರ ಸಿದ್ದು ಮಾಜಿ
ಹೊಸಪೇಟೆ: ಲೋಕಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು. ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಉತ್ತರ ಭಾರತದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ. ಯುಪಿಎ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದು, ಬೆಲೆ ಏರಿಕೆ ಬಿಜೆಪಿಗೆ ವರದಾನವಾಗಲಿದೆ. ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರುವುದರಿಂದ ಪಕ್ಷಕ್ಕೆ ಅನುಕೂಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕರ್ನಾಟಕದಲ್ಲೂ ಬಿಜೆಪಿ ಅತ್ಯಧಿಕ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ನೇಮಿರಾಜ್ ನಾಯ್ಕ, ಜಿಪಂ ಮಾಜಿ ಅಧ್ಯಕ್ಷ ಚನ್ನಬಸವನಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಿ. ಸೂರ್ಯಬಾಬು, ಪಂತರ್ ಜಯಂತ್, ಡಿಶ್ ಮಂಜುನಾಥ, ಡಿ. ರಾಘವೇಂದ್ರ ಶೆಟ್ಟಿ, ಎಂ. ಬದ್ರಿನಾಥ ಶೆಟ್ಟಿ, ಎಸ್.ಎಂ. ವೀರೇಶ್ ಸ್ವಾಮಿ, ಕೆ. ಗೋವಿಂದರಾಜ್ ಶೆಟ್ಟಿ, ಬಂಗಾರಿ ಮಂಜುನಾಥ, ಹರಪ್ಪನಹಳ್ಳಿ ಮಂಜುನಾಥ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

