ಕಬ್ಬು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿ
ಹೊಸಪೇಟೆ: ಸ್ಥಳೀಯ ಐಎಸ್ಆರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವುದು ಮತ್ತು ಇಲ್ಲಿ ವರೆಗೂ ಐಎಸ್ಆರ್ ಸಕ್ಕರೆ ಕಾರ್ಖಾನೆ ಆರಂಭಗೊಳ್ಳದಿರುವುದನ್ನು ವಿರೋಧಿಸಿ ಹೊಸಪೇಟೆ ರೈತ ಸಂಘದ ಪದಾಧಿಕಾರಿಗಳು, ನೂರಾರು ರೈತ ಮುಖಂಡರು ಶುಕ್ರವಾರ ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರೈತ ಸಂಘದ ಕಾರ್ಯದರ್ಶಿ ಗೋಸಲಭರ್ಮಪ್ಪ ಮಾತನಾಡಿ, ಸ್ಥಳೀಯ ಐಎಸ್ಆರ್ ಸಕ್ಕರೆ ಕಾರ್ಖಾನೆಯ ಮಾಲೀಕರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಈಗಾಗಲೇ ರೈತರು ಕಬ್ಬು ಬೆಳೆದು 15 ತಿಂಗಳಾಗಿರುವುದರಿಂದ ಇಳುವರಿ ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ರೈತರು ಸಾಲ ಮಾಡಿ ಕಬ್ಬನ್ನು ಬೆಳೆದಿರುವುದರಿಂದ ಸಾಲಕ್ಕೆ ಸರಿಯಾದ ಬೆಳೆ ಬರದೆ ಇದ್ದಾಗ ರೈತರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ತಕ್ಷಣವೇ ಅಧಿಕಾರಿಗಳು ಐಎಸ್ಆರ್ ಸಕ್ಕರೆ ಕಾರ್ಖಾನೆಯ ಮಾಲೀಕರಿಗೆ ಕಾರ್ಖಾನೆಯನ್ನು ಆರಂಭಿಸಲು ಸೂಚಿಸುವಂತೆ ಆಗ್ರಹಿಸಿದರು.
ಎರಡು ದಿನಗಳಿಂದ ತಹಸೀಲ್ದಾರ್ ಕಚೇರಿ ಮತ್ತು ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರೂ ಐಎಸ್ಆರ್ ಸಕ್ಕರೆ ಕಾರ್ಖಾನೆ ಮಾಲೀಕರು ಕಾರ್ಖಾನೆ ಆರಂಭಿಸುವ ಕುರಿತು ಚಕಾರ ಎತ್ತುತ್ತಿಲ್ಲ. ಎರಡು ದಿನಗಳಿಂದ ನಿರಂತರವಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತು ಮುತ್ತಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಮುಂದಾಗಿರುವುದನ್ನು ಮನಗಂಡು ಜಿಲ್ಲಾಧಿಕಾರಿ ಡಿ. 18ರಂದು ಬಳ್ಳಾರಿ ಡಿಸಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರೈತರ ಸಭೆ ನಡೆಸುವುದಾಗಿ ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಕಾರ್ಖಾನೆಯ ಮಾಲೀಕ ಸಿದ್ದಾರ್ಥ ತಪ್ಪದೇ ಸಭೆಗೆ ಬರಬೇಕು. ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಡಿ. 19ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡಸಲಾಗುವುದು ಎಂದು ಎಚ್ಚರಿಗೆ ನೀಡಿದರು.
ರೈತ ಸಂಘದ ಅಧ್ಯಕ್ಷ ತಾರಳ್ಳಿ ಹುಲುಗಜ್ಜಪ್ಪ ಮಾತನಾಡಿದರು. ಉಪಾಧ್ಯಕ್ಷ ಬಿ.ಕೆ. ನಾಗರಾಜ್ರಾವ್, ಖಜಾಂಚಿ ಪ್ಯಾಟಿ ಜಂಬಣ್ಣ, ಸಹ ಕಾರ್ಯದರ್ಶಿ ಬಿ. ನಾಗರಾಜ್, ರೈತ ಸಂಘದ ಮುಖಂಡರಾದ ನಾಣೀಕೇರಿ ತಿಮ್ಮಯ್ಯ, ಆರ್. ಕೊಟ್ರೇಶ್, ಎಲ್. ಸಿದ್ದಪ್ಪ, ಎಂ.ಜೆ. ಜೋಗಯ್ಯ, ಸಿ. ಸಂಶುದ್ದೀನ್, ಎ. ಬಡಕಪ್ಪ, ಅರಳಿ ಕೊಟ್ರಪ್ಪ, ತಳವಾರ್ ವೆಂಕಟೇಶ್, ಕಿಚಿಡಿ ಶ್ರೀನಿವಾಸ, ಬಂಡೆ ರಂಗಪ್ಪ, ಕಲ್ಲುಡಿ ಭೀಮಪ್ಪ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ರೈತ ಮುಖಂಡರಾದ ಗುಜ್ಜಲ್ ಶಿವರಾಮಪ್ಪ, ಬಿ. ಸಣ್ಣೆಪ್ಪ, ರಾಮನಗೌಡ, ಬಂಡೆ ಶ್ರೀನಿವಾಸ, ಬಿ.ಎಸ್. ಜಂಬಯ್ಯ ನಾಯಕ, ಕಟಗಿ ಜಂಬಯ್ಯ ನಾಯಕ, ಗುಂಡಿ ಪ್ರಸಾಂತ್, ಸುದರ್ಶನ್ ಸೇರಿದಂತೆ ನೂರಾರು ರೈತರು ಇದ್ದರು.
ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ಗೆ ಮನವಿ ಸಲ್ಲಿಸಿದರು. ತಹಸೀಲ್ದಾರ್ ರಮೇಶ್ ಕೋನರೆಡ್ಡಿ, ಸೇರಿದಂತೆ ಅನೇಕ ಪೊಲೀಸರು ಉಪಸ್ಥಿತರಿದ್ದರು. ರೈತರಗಿಂತ ಪೊಲೀಸರೇ ಅಧಿಕ ಸಂಖ್ಯೆಯಲ್ಲಿದ್ದರು. ನಿಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

