ಜೀವ ಜಲ ರಕ್ಷಿಸಿ...
ಸರ್ಕಾರ ಕುಡಿಯುವ ನೀರಿನ ಪೂರೈಕೆ ಹಾಗೂ ನಿರ್ವಹಣೆಗೆ ಕೋಟ್ಯಂತರ ರು. ವೆಚ್ಚ ಮಾಡುವ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಅಮೂಲ್ಯ ಜೀವ ಜಲ ಪೋಲಾಗುತ್ತಿದೆ.
ತಾಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ಹಾಯ್ದು ಹೋಗಿರುವ ಮಂಡ್ಯ- ಹೂವಿನಹಡಗಲಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿರುವ ಕುಡಿಯುವ ನೀರಿನ ಪೈಪ್ಲೈನ್ ವ್ಯವಸ್ಥೆಗೆ ಸರಿಯಾಗಿ ನಿರ್ವಹಣೆ ಇಲ್ಲದೆ ಕುಡಿಯುವ ಅಮೂಲ್ಯ ನೀರು ಹೆಚ್ಚಾಗಿ ಪೋಲಾಗುತ್ತಿದೆ. ನಿತ್ಯ ಸಾವಿರಾರು ಜನರು ಓಡಾಡುತ್ತಿದ್ದರೂ ಈ ಕುರಿತು ಯಾರೂ ಗಮನ ಹರಿಸಿಲ್ಲ. ಇದೆ ಗ್ರಾಮದಲ್ಲಿ ಕುಡಿಯುವ ನೀರಿನ ಅವ್ಯವಸ್ಥೆ ಖಂಡಿಸಿ ಅನೇಕ ಬಾರಿ ಗ್ರಾಪಂ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿರುವ ಘಟನೆ ನಡೆದು, ಈ ಹಿಂದೆ ತಾಪಂ ಇಒ ಅವರನ್ನು ಕಚೇರಿಯಲ್ಲಿ ಕೂಡಿ ಹಾಕಿದ್ದು ಇತಿಹಾಸ. ಇಷ್ಟೇಲ್ಲ ಆದರೂ ಕುಡಿಯುವ ನೀರಿನ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದ ಗ್ರಾಪಂ ಅಧಿಕಾರಿಗಳು ಇನ್ನು ಮುಂದಾದರೂ ಕ್ರಮ ಕೈಗೊಂಡು ನಳ ಸಂಪರ್ಕ ನೀಡಿ ಜೀವ ಜಲವನ್ನು ರಕ್ಷಿಸಬೇಕು ಎಂಬುದು ನಮ್ಮ ಒತ್ತಾಸೆ.
- ವೀರನಗೌಡ, ನಾಗತಿಬಸಾಪುರ
ಬೀದಿಯಲ್ಲಿ ಬಿದ್ದ ಶಿಲ್ಪ ಕಲೆ
ತುಂಗಭದ್ರಾ ನದಿ ತೀರದ ಅನೇಕ ಹಳ್ಳಿಗಳಲ್ಲಿ ಕಲ್ಯಾಣಿ ಚಾಲುಕ್ಯರು ರಾಜ್ಯಭಾರ ಮಾಡಿ ಸುಂದರ ಶಿಲ್ಪಕಲೆ ಶ್ರೀಮಂತಿಯನ್ನು ಬಿಟ್ಟು ಹೋಗಿದ್ದಾರೆ. ಅದೇ ರೀತಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಮೈಲಾರ ಗ್ರಾಮವೂ ಕಲ್ಯಾಣಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತ್ತು.
ಇದರಿಂದ ಗ್ರಾಮದ ಹೃದಯ ಭಾಗದ (ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಪಕ್ಕ) ನಂದಿ ಮತ್ತು ಈಶ್ವರ ಇರುವ ಐತಿಹಾಸಿಕ ದೇವಸ್ಥಾನವಿದ್ದು, ಪುರಾತತ್ವ ಇಲಾಖೆ ಅಧೀನಕ್ಕೆ ಒಳಪಟ್ಟಿದೆ. ಗ್ರಾಮದಲ್ಲಿ ನೂರಾರು ವೀರಗಲ್ಲು, ಮಾಸ್ತಿಕಲ್ಲು ಹಾಗೂ ಸುಂದರ ಶಿಲ್ಪ ಕಲೆಗಳು ಹಾದಿ ಬೀದಿಯಲ್ಲಿ ಬಿದ್ದು ನಾಶವಾಗುತ್ತಿರುವುದು ದುರಂತ. ಈ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡದೆ ಪುರಾತತ್ವ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ದೇವಸ್ಥಾನ ರಕ್ಷಣೆಗೆ ಇರುವ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇನ್ನು ಮೈಲಾರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದ ಮುಂದೆ ತಿಪ್ಪೆಗಳಲ್ಲಿ ಸುಂದರ ಶಿಲ್ಪ ಕಲೆಗಳು ಬಿದ್ದು ನಾಶವಾಗುತ್ತಿವೆ. ಇವುಗಳನ್ನು ಸಂರಕ್ಷಣೆ ಮಾಡುತ್ತಿಲ್ಲ. ಪ್ರಜ್ಞಾವಂತ ನಾಗರಿಕರು ನಿತ್ಯ ಅದೇ ರಸ್ತೆಯಲ್ಲೆ ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿಲ್ಲ. ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈ ಕೂಡಲೆ ಈ ಸುಂದರ ಶಿಲ್ಪಕಲೆಗಳನ್ನು ದೇವಸ್ಥಾನದಲ್ಲಾಗಲಿ ಅಥವಾ ಯಾವೂದಾರೊಂದು ವಸ್ತುಸಂಗ್ರಾಲಯಕ್ಕಾಗಲಿ ಸಾಗಿಸಿ ಸಂರಕ್ಷಿಸಬೇಕಿದೆ.
- ಎಂ. ಮಾಲತೇಶ, ಮೈಲಾರ
ರಂಗ ಮಂದಿರ ನಿರ್ಮಾಣ ನಿರ್ಲಕ್ಷ್ಯ
ಹೂವಿನಹಡಗಲಿ ತಾಲೂಕಿನ ಅನೇಕ ಶಾಲಾ ಕಾಲೇಜುಗಳಲ್ಲಿ ಸುಂದರ ರಂಗ ಮಂದಿರಗಳನ್ನು ನಿರ್ಮಾಣ ಮಾಡಲು ಸರ್ಕಾರ ಲಕ್ಷಾಂತರ ರು.ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ ತಾಲೂಕಿನ ಮಾಗಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಂಗ ಮಂದಿರ ನಿರ್ಮಾಣಕ್ಕಾಗಿ ಅಡಿಪಾಯ ಹಾಕಿದ್ದೇ ಪಂಚಾಯತ್ ರಾಜ್ ಇಲಾಖೆಯ ದೊಡ್ಡ ಸಾಧನೆಯಾಗಿದೆ. ಕಾಮಗಾರಿ ಮಂಜೂರಾಗಿ 3-4 ವರ್ಷಗಳೆ ಕಳೆದರೂ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಅರೆಬೆರೆಯಾದ ಕಾಮಗಾರಿ ಶಾಲಾ ಮಕ್ಕಳಿಗೆ ತೀವ್ರ ತೊಂದರೆ ನೀಡುತ್ತಿದೆ. ಕೂಡಲೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಅದನ್ನು ಕಿತ್ತು ಹಾಕಿ ಮಕ್ಕಳಿಗೆ ಆಟದ ಮೈದಾನ ವ್ಯವಸ್ಥೆ ಮಾಡಬೇಕಿದೆ. ರಂಗ ಮಂದಿರದ ಅಪಾಯದ ಮೇಲೆ ಮುಳ್ಳು ಗಿಡಗಳು ಬೆಳೆದು ನಿಂತಿದ್ದವು. ಈಗಾಗಲೆ ಶಿಕ್ಷಕರು ಕಿತ್ತು ಹಾಕಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಗಮನ ಹರಿಸಿ ಶಾಲೆಗೊಂದು ಸುಂದರ ರಂಗ ಮಂದಿರ ನಿರ್ಮಾಣ ಮಾಡಬೇಕು.
- ಕೆ. ಸುರೇಂದ್ರ, ಮಾಗಳ
ಸಾರಿಗೆ ಸರ್ದಾರ್ಗಿರಿಗೆ ಜನಾಭಿಪ್ರಾಯ
ಸಾರಿಗೆ ಸಂಸ್ಥೆಯ ನೌಕರರ ನೈಜ ಪರಿಸ್ಥಿತಿಯನ್ನು ಸುದ್ದಿಯ ರೂಪದಲ್ಲಿ ಬಹಿರಂಗಪಡಿಸಿದ್ದು ನೌಕರರಿಗೆ ನೈತಿಕ ಬೆಂಬಲ ಮತ್ತು ಧೈರ್ಯ ಕೊಟ್ಟಂತಾಗಿದೆ. ಭ್ರಷ್ಟಾಚಾರ ಮತ್ತು ಕಾರ್ಮಿಕರ ಮೇಲೆ ನಡೆಯುತ್ತಿರುವ ಧಮನಕಾರಿ ನೀತಿ ಅನುಸರಿಸುತ್ತಿರುವ ಆಡಳಿತ ವರ್ಗದ ವಿರುದ್ಧ ಕನ್ನಡಪ್ರಭ ಪ್ರಕಟಿಸುತ್ತಿರುವ ಸುದ್ದಿಗಳು ಅಪ್ಪಟ್ಟ ನೈಜತೆಯಿಂದ ಕೂಡಿವೆ. ಇದು ಕಾರ್ಮಿಕರಿಗೆ ಸಂದ ಜಯ. ಕನ್ನಡಪ್ರಭ ಧ್ವನಿ ಇಲ್ಲದ ನೌಕಕರಿಗೆ ಧ್ವನಿ ಕೊಟ್ಟಂತಾಗಿದೆ. ಇದೇ ರೀತಿ ಕಾರ್ಮಿಕರ ಸಮಸ್ಯೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು.
- ಎಚ್.ಎ. ಆದಿಮೂರ್ತಿ, ಕೆಎಸ್ಆರ್ಟಿಸಿ ನೌಕರರ ಯೂನಿಯನ್ ಅಧ್ಯಕ್ಷ, ಬಳ್ಳಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

