ಲೆವಿ ನೀತಿಗೆ ರೈಸ್ಮಿಲ್ ಮಾಲೀಕರ ವಿರೋಧ
ಬಳ್ಳಾರಿ: ರಾಜ್ಯ ಸರ್ಕಾರದ ಲೆವಿ ನೀತಿ ವಿರೋಧಿಸಿ, ರೈಸ್ಮಿಲ್ ಮಾಲೀಕರ ಸಂಘ ಸೋಮವಾರ ತಮ್ಮೆಲ್ಲ ರೈಸ್ಮಿಲ್ಗಳನ್ನು ಬಂದ್ ಮಾಡಿ, ನೂರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಎಪಿಎಂಸಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಹೊಸ ಬಸ್ನಿಲ್ದಾಣ, ಮೋತಿ ವೃತ್ತ, ಡಬಲ್ ರೋಡ್ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ರಸ್ತೆಯುದ್ದಕ್ಕೂ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಸವರಾಜಪ್ಪ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, 1999ರ ಲೆವಿ ಪದ್ಧತಿಯನ್ನೇ 2013-14ನೇ ಸಾಲಿಗೂ ಮುಂದುವರೆಸಿರುವುದು ಅವೈಜ್ಞಾನಿಕವಾಗಿದೆ. ಕ್ವಿಂಟಲ್ ಬತ್ತಕ್ಕೆ ರು. 1310, ರು. 260 ಪ್ರೋತ್ಸಾಹ ಧನ ಸೇರಿಸಿ ರು. 1600 ರೈತರಿಂದ ಬತ್ತ ಖರೀದಿಸಲು ಸರ್ಕಾರ ಆದೇಶಿಸಿದೆ. ಆದರೆ, ಈ ದರದ ಆಧಾರದ ಮೇಲೆ ಲೆವಿ ಧರ ರು. 2650 ಗಳಾಗಲಿದ್ದು, ಸರ್ಕಾರ ರು. 2400 ನಿಗದಿಪಡಿಸಿದೆ. ಇದರಿಂದ ರೈಸ್ಮಿಲ್ ಮಾಲೀಕರಿಗೆ ತೀವ್ರ ನಷ್ಟವಾಗಲಿದೆ ಎಂದರು.
ಕಳೆದ 37 ವರ್ಷಗಳಿಂದ ಪ್ರತಿವರ್ಷ 1.25 ಲಕ್ಷ ಮೆಟ್ರಿಕ್ ಟನ್ ಲೆವಿ ಅಕಿಯನ್ನು ಸಂದಾಯ ಮಾಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ 2013-14ನೇ ಸಲಿನಲ್ಲಿ 13.50 ಲಕ್ಷ ಮೆಟ್ರಿಕ್ ಟನ್ ಲೆವಿ ಗುರಿ ಹೊಂದಿದ್ದು, ಮುಂಬರುವ ಮಾರ್ಚ್ 31ರೊಳಗಾಗಿ 5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೊಡುವಂತೆ ಕೇಳಿದೆ. ಇಷ್ಟೊಂದು ಲೆವಿ ಅಕ್ಕಿಯನ್ನು ಸಂಗ್ರಹಿಸಬೇಕಾದಲ್ಲಿ ಮಾಲೀಕರಿಗೆ ತೆರಿಗೆ ವಿನಾಯ್ತಿ ನೀಡಬೇಕು. ಬಹುತೇಕ ಸೋನಾ ಮಸೂರಿ ಬತ್ತವನ್ನೇ ಬೆಳೆಯುವ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 2005-06ನೇ ಸಾಲಿನಲ್ಲಿ ಬತ್ತ ಬೆಳೆಗಾರರಿಗೆ ಲೆವಿಯಿಂದ ವಿನಾಯ್ತಿ ನೀಡಲಾಗಿತ್ತು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿಗೂ ವಿನಾಯ್ತಿ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಬೆಳೆಯುವ ಒಟ್ಟು ಬತ್ತದ ಪೈಕಿ ಶೇ. 35ರಷ್ಟು ಬತ್ತ ವರ್ತಕರ ಮೂಲಕ ಹೊರ ರಾಜ್ಯಗಳಲ್ಲಿ ಮಾರಾಟವಾಗುತ್ತಿದೆ. ಆದರೆ, ಕಾನೂನಿನಲ್ಲಿ ಈ ಬತ್ತಕ್ಕೆ ಲೆವಿ ವಸೂಲಿ ಮಾಡಲು ಅವಕಾಶವಿದ್ದರೂ ಮಾಡದ ರಾಜ್ಯ ಸರ್ಕಾರ, ಕೇವಲ ರೈಸ್ಮಿಲ್ಗಳಿಗೆ ಮಾತ್ರ ಲೆವಿ ನಿಗದಿಪಡಿಸಿರುವುದು ಖಂಡನೀಯ. ತಮ್ಮೆಲ್ಲ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಒಂದು ದಿನದ ರೈಸ್ಮಿಲ್ ಬಂದ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಿ. ರಮೇಶ್ಗೌಡ, ಕಾರ್ಯದರ್ಶಿ ಗೋವಿಂದ ನಾರಾಯಣ, ಉಪಾಧ್ಯಕ್ಷ ಫಕ್ಕೀರಪ್ಪ, ಖಜಾಂಚಿ ಮಂಗಲ್ ಸೇಟ್, ಸಾಯಿ ಪವನ್, ಶ್ರೀನಿವಾಸ್, ರಾಮು, ರಮೇಶ್ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

