ಬಳ್ಳಾರಿ

ಸಂಭ್ರಮದ ಶ್ರೀಗುರುಕೊಟ್ಟೂರೇಶ್ವರ ಕಾರ್ತೀಕೋತ್ಸವ

Published On :

ಕೊಟ್ಟೂರು: ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಅದ್ಧೂರಿ ಕಾರ್ತೀಕೋತ್ಸವ ಸೋಮವಾರ ರಾತ್ರಿ ಭಕ್ತ ಜನಸ್ತೋಮದ ಮಧ್ಯೆ ನೆರವೇರಿತು.
ಸಂಜೆ 6ಕ್ಕೆ ಕಾರ್ತೀಕ ದೀಪೋತ್ಸವಕ್ಕೆ ಹಿರೇಮಠದ ಬಳಿ ಕ್ರಿಯಾಮೂರ್ತಿ ಶ್ರೀ ಶಂಕರ ಸ್ವಾಮಿಗಳು ಅಧಿಕೃತವಾಗಿ ಚಾಲನೆ ನೀಡುತ್ತಿದ್ದಂತೆ ಎಲ್ಲೆಡೆ ದೀಪಗಳಿಗೆ ಭಕ್ತರು ಎಣ್ಣೆ ಸುರಿಯುವ ಸಂಪ್ರದಾಯಕ್ಕೆ ಮುಂದಾದರು. ಇದೇ ಸಮಯಕ್ಕೆ ಪ್ರಮುಖ ರಥ ಬೀದಿಯುದ್ದಕ್ಕೂ ಲಕ್ಷ ದೀಪೋತ್ಸವ ಚಾಲನೆ ಪಡೆಯಿತು. ರಾತ್ರಿ ಇಡೀ ಪಟ್ಟಣದ ದೇವಸ್ಥಾನ ಮತ್ತು ತೇರುಬೀದಿ, ದೀಪಗಳ ಬೆಳಕಿನಿಂದ ಆಕರ್ಷಕವಾಗಿ ಕಂಗೊಳಿಸಿತು.
ತ್ರಿಕಾಲ ಪೂಜಾವಂದಿತ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ರಾತ್ರಿಯಿಡಿ ಪೂಜೆ ಕೈಂಕರ್ಯ ನೆರವೇರಿದ ನಂತರ ಕಾರ್ತೀಕೋತ್ಸವ ಪ್ರಮುಖ ಘಟ್ಟ ಬೆಳ್ಳಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಾತ್ರಿ 12ರ ಸುಮಾರಿಗೆ ಶ್ರೀಸ್ವಾಮಿಯ ಬಂಗಾರ ಖಚಿತ ಮೂಲ ಮೂರ್ತಿಯನ್ನು ಸಕಲ ಬಿರುದಾವಳಿಗಳೊಂದಿಗೆ ವಿವಿಧ ಬಗೆಯ ಹೂವುಗಳೊಂದಿಗೆ ಅಲಂಕೃತವಾದ ರಥದಲ್ಲಿ ಕೂಡ್ರಿಸಲು ಹಿರೇಮಠದಿಂದ ಧರ್ಮಕರ್ತ ಬಳಗ ಹೊರತರುತ್ತಿದ್ದಂತೆಯೇ ನೆರೆದಿದ್ದ ಭಕ್ತಸ್ತೋಮ ಸ್ವಾಮಿಯೆಡೆಗೆ ಬಾಳೆಹಣ್ಣಿನ ರಾಶಿಗಳನ್ನು ಸುರಿದರು.
ಈ ಹಂತದಲ್ಲಿ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲುಯುಂಟಾಯಿತಾದರೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ನಂತರ ಬೆಳ್ಳಿ ರಥೋತ್ಸವ ಮೆರವಣಿಗೆ ಜರುಗಿತು. ಶೀತಗಾಳಿ, ಕೊರೆವ ಚಳಿ  ಇದ್ದರೂ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕ್ರಿಯಾಮೂರ್ತಿ ಮಲ್ಲಿಕಾರ್ಜುನ ದೇವರು, ಪಧಾನ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ ನೇತೃತ್ವದ ಅರ್ಚಕ ತಂಡ ಆಸೀನರಾಗಿದ್ದ ರಥ ಸಮಾಳ ನಂದಿಕೋಲು ಮತ್ತಿತರ ವಾದ್ಯಗಳೊಂದಿಗೆ ತೊಟ್ಟಿಲು, ಮಠ, ಗಚ್ಚಿನ ಮಠದವರೆಗೆ ರಾತ್ರಿ 3.30ರ ವರೆಗೂ ಸಾಗಿ ಪುನಃ ಹಿರೇಮಠಕ್ಕೆ ಬಂದು ಸೇರಿತು. ರಥೋತ್ಸವದುದ್ದಕ್ಕೂ ಭಕ್ತರು ಪಾಲ್ಗೊಂಡು ಸ್ವಾಮಿಗೆ ನಮನ ಸಲ್ಲಿಸಿದರು.
ಭಕ್ತಿ ಪರಾಕಾಷ್ಟೆ: ಕಾರ್ತೀಕೋತ್ಸವಕ್ಕೆಂದು ರಾಜ್ಯದ ವಿವಿದೆಡೆಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಕೊಟ್ಟೂರಿಗೆ ಸೋಮವಾರ ಬೆಳಗ್ಗೆಯಿಂದಲೇ ಆಗಮಿಸುವುದು ನಡೆದೇ ಇತ್ತು. ಶ್ರೀಸ್ವಾಮಿಯ ಹಿರೇಮಠ, ಗಚ್ಚಿನಮಠ, ತೊಟ್ಟಿಲು ಮಠ, ಮೂರ್ಕಮ್ ಮಠಗಳಿಗೆ ತೆರಳಿ ಭಕ್ತರು ಸರತಿ ಸಾಲಿನಲ್ಲಿ ಸಾಗಿ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.