ನಬಿಗೆ ಮನೆಗೆ ಬರಲು ಆಹ್ವಾನ ನೀಡಿಲ್ಲ: ಶಶಿಧರ
ಕೂಡ್ಲಿಗಿ: ಮಾಜಿ ಸಚಿವ ಎನ್.ಎಂ. ನಬಿಸಾಬ್ ಅವರಿಗೆ ಕಾನಮಡುಗುವಿನ ನಮ್ಮ ಮನೆಗೆ ಬರಲು ನಾನು ಆಹ್ವಾ ನೀಡಿದ್ದಿಲ್ಲ. ಡಿ. 12ರಂದು ತಮ್ಮ ಪುತ್ರ ನೂರ್ಅಹ್ಮದ್ ಹಾಗೂ ಬೆಂಬಲಿಗರೊಂದಿಗೆ ಬಂದಿದ್ದರು. ಅಪರೂಪದ ಅತಿಥಿಯಾಗಿ ಬಂದವರು, ಹಿರಿಯರು ಎನ್ನುವ ಗೌರವದಿಂದ ಕುಳಿತುಕೊಳ್ಳುವಂತೆ ಹೇಳುತ್ತಿದ್ದಂತೆಯೇ ಏಕಾಏಕಿ ಅವಾಚ್ಯವಾಗಿ ಬೈದಾಡಿ, ಹಲ್ಲೆಗೆ ಮಂದಾದರು ಎಂದು ಜಿಪಂ ಸದಸ್ಯ ಕೆ.ಎಂ. ಶಶಿಧರ ಆರೋಪಿಸಿದರು.
ಅವರು ಕಾನಮಡುಗು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ, ಅವರ ಪುತ್ರ ಮತ್ತು ಬೆಂಬಲಿಗರು ಗಲಾಟೆಗೆ ಮುಂದಾಗುತ್ತಿದ್ದಂತೆ ಪೊಲೀಸರಿಗೆ ಸುದ್ದಿ ತಿಳಿಸಲಾಯಿತು. ಪೊಲೀಸರು ತಕ್ಷಣ ಧಾವಿಸಿ ನಮಗೆ ರಕ್ಷಣೆ ನೀಡಿದರು. ಇಲ್ಲದಿದ್ದರೆ ಅನಾಹುತ ನಡೆಯುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದ ನಾನು, ಪಕ್ಷದ ಕಾರ್ಯ ಚಟುವಟಿಕೆಯಿಂದ ದೂರ ಉಳಿದ ನಬಿಸಾಬ್ ಮತ್ತು ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಎಸ್. ವೆಂಕಟೇಶ್ ವಿರುದ್ಧ ಕೆಪಿಸಿಸಿಗೆ ವರದಿ ಸಲ್ಲಿಸಿದ್ದೇನೆ. ಇಂಥ Þ ಆರೋಪವನ್ನು ನಬಿ ಬೆಂಬಲಿಗರಾದ ಎಸ್. ವೆಂಕಟೇಶ್ ಕೆಪಿಸಿಸಿಗೆ ದೂರು ನೀಡಿದ್ದರು. ಆದರೆ, ನಾನು ಯಾವತ್ತೂ ವೆಂಕಟೇಶ್ ಅಥವಾ ನಬಿಸಾಬ್ ಮನೆ ಹತ್ತಿರ ಹೋಗಿ, ಈ ಬಗ್ಗೆ ಗಲಾಟೆ ಮಾಡಿರಲಿಲ್ಲ. ನೇರವಾಗಿ ಕೆಪಿಸಿಸಿಗೆ ಕ್ಷೇತ್ರದ ವಿಷಯವನ್ನು ಮನವರಿಕೆ ಮಾಡಿಕೊಟ್ಟಿದ್ದೆ ಎಂದು ತಿಳಿಸಿದರು.
ನಬಿಸಾಬ್ ಅವರು ನನಗೆ ಕೆಪಿಸಿಸಿಗೆ ನೀಡಿದ ದೂರಿನ ಸಂಬಂಧ ಮಾತನಾಡಲು ಪಟ್ಟಣಕ್ಕೆ ಬರುವಂತೆ ದೂರವಾಣಿ ಮಾಡಿದ್ದೆ ಎಂಬುದು ಶುದ್ಧ ಸುಳ್ಳು. ಹಾಗೇನಾದರೂ ಕರೆ ಮಾಡಿದ್ದರೆ ಸಂಭಾಷಣೆ, ಕರೆ ದಾಖಲೆ ಪ್ರಸ್ತುತ ಪಡಿಸಲಿ. ಕರೆ ಮಾಡಿ ಕರೆದಿರುವುದು ಸಾಬೀತಾದರೆ ನಾನು ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಏಕಾಏಕಿ ಮನೆಗೆ ನುಗ್ಗಿ ದಾಂಧಲೆ ನಡೆಸಿರುವುದು ನಬಿಸಾಬ್ ಅವರ ಸರ್ವಾಧಿಕಾರಿ ವರ್ತನೆಯಲ್ಲವೇ? ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು ಎಂದರು.
ಕಾಮಗಾರಿಗೆ ಚಾಲನೆ
ಹೂವಿನಹಡಗಲಿ: ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ಹಾಯ್ದು ಹೋಗಿರುವ ಅರಭಾವಿ -ಚಳ್ಳಕೇರಿ ರು. 95 ಲಕ್ಷ ಅನುದಾನದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದೀನ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹುಣ್ಸಿ ಬಸವನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ ಇದ್ದರು.
ಮಾಕನಡುಕು ಗ್ರಾಪಂ ಅವ್ಯವಹಾರ ಸಾಬೀತಿಗೆ ಸಿದ್ಧ: ಮಾಜಿ ಶಾಸಕ ಕೆ.ವಿ. ರವೀಂದ್ರನಾಥಬಾಬು
ಕೂಡ್ಲಿಗಿ: ತಾಲೂಕಿನ ಮಾಕನಡುಕು ಗ್ರಾಪಂನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳನ್ನು ಹೊಂದಿರುವುದಾಗಿ ಮಾಜಿ ಶಾಸಕ ಕೆ.ವಿ. ರವೀಂದ್ರನಾಥ ಬಾಬು ತಿಳಿಸಿದರು. ತಾಲೂಕಿನ ಚಿಕ್ಕಜೋಗಿಹಳ್ಳಿಯ ತಮ್ಮ ನಿವಾಸದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸುಮಾರು 41 ಲಕ್ಷಕ್ಕೂ ಹೆಚ್ಚು ಹಣ ವಿವಿಧ ಕಾಮಗಾರಿ ನೆಪದಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ತಾವು ಮಾಡಿರುವ ಆರೋಪ ಸುಳ್ಳು ಎಂಬುದಾಗಿ ವಾಲ್ಮೀಕಿ ಮುಖಂಡ ನಾಗಣ್ಣ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ತಮ್ಮಲ್ಲಿ ಮಾಹಿತಿ ಹಕ್ಕು ಪ್ರಕಾರ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಂದಲೇ ದೃಢೀಕರಿಸಿದ ದಾಖಲೆಗಳಿವೆ. ಅದನ್ನು ನೋಡಿದರೆ ತಿಳಿಯುತ್ತದೆ. ಈ ಪಂಚಾಯಿತಿಯಲ್ಲಿ ಎಷ್ಟೊಂದು ಅವ್ಯವಹಾರ ನಡೆದಿದೆ ಎಂಬುದು.
ಪಂಚಾಯಿತಿ ಅವ್ಯವಹಾರ ಮುಚ್ಚಿಹಾಕಿ ಜನತೆಯನ್ನು ನಂಬಿಸಲು ಇಂಥ ಹೇಳಿಕೆ ನೀಡಿರಬಹುದು. ಅವ್ಯವಹಾರ ಸಾಬೀತು ಮಾಡಿ ತೋರಿಸುತ್ತೇನೆ. ಕಾಲಹರಣಕ್ಕೆ ಮುಂದಾಗುವುದಿಲ್ಲ ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಇಲ್ಲದ ಕಚೇರಿ, ಹಾಸ್ಟೆಲ್ಗಳ ಆವರಣದಲ್ಲಿ ಸಸಿ ನೆಡಲಾಗಿದೆ ಎಂಬ ದಾಖಲೆ ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆ ನೀಡುವುದಾಗಿ ಸವಾಲೆಸೆದರು.
ಇಲ್ಲಿನ ಗ್ರಾಮ ಪಂಚಾಯ್ತಿ ಅವ್ಯವಹಾರವನ್ನು ನಿರ್ಲಕ್ಷ್ಯಿಸಿದರೆ ಸರ್ಕಾರದ ಉನ್ನತಾಧಿಕಾರಿಗೆ ಮೊರೆ ಹೋಗಬೇಕಾಗುತ್ತದೆ. ಈಗಾಗಲೆ ಸಂಬಂಧಿಸಿದ ಅನೇಕ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಪ್ರಕೃತಿ ಹೆಸರಿನಲ್ಲಿ ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಪ್ರಜ್ಞಾವಂತರೆ ಹಣ ಲೂಟಿ ಮಾಡುತ್ತಿರುವುದು ಎಷ್ಟು ಸರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಮೀನಕೆರೆ ಪಂಪಾಪತಿ, ಕೆ.ಪಿ. ದಡ್ಡೆಯ್ಯ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

