ಬಳ್ಳಾರಿ

ಹಂಪಿ ಬೈ ನೈಟ್‌ಗೆ ಎಷ್ಟು ದಿನ ವೇಟಿಂಗ್?

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಡಿ. 17
ಹಂಪಿಯ ಸ್ಮಾರಕಗಳನ್ನು ರಾತ್ರಿ ವೇಳೆಯಲ್ಲಿಯೂ ವೀಕ್ಷಿಸುವ ಹಂಪಿ ಬೈ ನೈಟ್ ಯೋಜನೆ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಜನಾರ್ಜನ ರೆಡ್ಡಿ ಕನಸಿನ ಕೂಸಾಗಿದ್ದ ಈ ಯೋಜನೆ ಅವರು ಸಚಿವ ಸ್ಥಾನ ಕಳೆದುಕೊಂಡ ಮೇಲೆ ನೆನೆಗುದಿಗೆ ಬಿದ್ದಿದೆ.
ಪ್ರವಾಸಿಗರ ಆಕರ್ಷಣೆ: ಹಂಪಿ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿದ ನಂತರ ದೇಶ-ವಿದೇಶದಿಂದ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಜನಾರ್ದನ ರೆಡ್ಡಿಯವರ ಹಂಪಿ ಬೈ ನೈಟ್ ಮತ್ತು ಥೀಮ್‌ಪಾರ್ಕ್, ಹೆಲಿಟ್ಯೂರಿಜಂ ಎನ್ನುವ ಮಹತ್ವದ ಕನಸುಗಳಲ್ಲಿ ಹಂಪಿ ಬೈ ನೈಟ್ ಎನ್ನುವ ಯೋಜನೆಗೆ ಅಂತಿಮ ರೂಪ ಸಿದ್ಧವಾಗಿತ್ತು.
ಇನ್ನೇನು ಯೋಜನೆಯನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ ಜನಾರ್ದನ ರೆಡ್ಡಿ ಸಚಿವ ಸ್ಥಾನ ಕಳೆದುಕೊಂಡರು. ಬಳಿಕ ಆನಂದ್ ಸಿಂಗ್ ಪ್ರವಾಸೋದ್ಯಮ ಸಚಿವರಾದ ಮೇಲೆ ಹಂಪಿ ಬೈ ನೈಟ್ ಯೋಜನೆಗೆ ಅಂತಿಮ ರೂಪ ನೀಡಲು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಭರಣ ಸೇರಿದಂತೆ 6-7 ಜನರ ತಂಡ ಹಂಪಿಗೆ ಭೇಟಿ ನೀಡಿತ್ತು. ಅಲ್ಲದೆ ಹಂಪಿ ಬೈ ನೈಟ್‌ಗೆ ಅಳವಡಿಸಿರುವ ಧ್ವನಿ- ಬೆಳಕಿನ ವಿನ್ಯಾಸವನ್ನು ಅಂತಿಮಗೊಳಿಸಿ ಹಂಪಿ ಇತಿಹಾಸ ಕುರಿತಂತೆ ಕನ್ನಡ ಚಲನಚಿತ್ರ ಪ್ರಮುಖ ನಟರ ಸಂಭಾಷಣೆಯಲ್ಲಿ ಧ್ವನಿ ಸುರುಳಿ ಸಿದ್ಧ ಪಡಿಸಲಾಗಿದೆ. ಆದರೆ ಜನರಿಗೆ ರಾತ್ರಿ ಹಂಪಿ ನೋಡುವ ಭಾಗ್ಯ ಸಿಕ್ಕಿಲ್ಲ.
19-20 ಸ್ಮಾರಕಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಿ ವೈಭವಯುತವಾಗಿ ಕಾಣುವಂತೆ ಮಾಡಲಾಗಿದೆ. ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ, ಮಾತಂಗ ಪರ್ವತ, ಚಕ್ರತೀರ್ಥ, ವರಹ ದೇವಸ್ಥಾನ, ಸುಗ್ರೀವನ ಗುಹೆ, ಪುರಾತನ ಬ್ರಿಡ್ಜ್, ಪುರಾತನ ಬಾವಿ, ರಾಜರ ತುಲಾಭಾರ, ಕುದುರೆ ಗೊಂಬೆ ಮಂಟಪ, ಕೋಟಿಲಿಂಗ, ಗೆಜ್ಜಲ ಮಂಟಪ, ಅಚ್ಚುತರಾಯ್ ಬಜಾರ್ (ಸೂಳೆ ಬಜಾರ್), ನರಸಿಂಹ ದೇವಸ್ಥಾನ, ಗಂಧಮಾದನ ಪರ್ವತ ಸೇರಿದಂತೆ ಕೆಲ ಸ್ಮಾರಕಗಳಿಗೆ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ 3-4 ಸ್ಮಾರಕಗಳಿಗೆ ಲೈಟಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ರಾತ್ರಿಯಲ್ಲಿಯೂ ಹಂಪಿ ವೀಕ್ಷಣೆ: ಒಂದೂವರೆ ವರ್ಷಗಳ ಹಿಂದೆ ಹಂಪಿ ಬೈ ನೈಟ್ ಯೋಜನೆಯ ಡೆಮೋ (ಸಕಲ ಸಿದ್ಧತೆ) ಮಾಡಿ ಸ್ಥಳೀಯ ಶಾಸಕ ಬಿ.ಎಸ್. ಆನಂದ್ ಸಿಂಗ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ತೋರಿಸಿ 2012 ಜೂನ್ ಮೊದಲ ವಾರದಲ್ಲಿ ಹಂಪಿ ಬೈ ನೆಟ್ ವೀಕ್ಷಿಸಬಹುದು ಎಂದು ಘೋಷಣೆ ಮಾಡಲಾಗಿತ್ತು. ಸಕಲ ಸಿದ್ಧತೆ ಮಾಡಿ ಸಂಜೆ 6ರಿಂದ ರಾತ್ರಿ 10ರ ವರೆಗೆ ಕೆಲ ಆಯ್ದ ಸ್ಮಾರಕಗಳಿಗೆ ಧ್ವನಿ-ಬೆಳಕಿನ ವ್ಯವಸ್ಥೆ ಮಾಡಿ ಹಂಪಿಯನ್ನೂ ರಾತ್ರಿ ಹೊತ್ತು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಒಂದೂವರೆ ವರ್ಷಗಳ ಹಿಂದೆ ಎಲ್ಲಿಗೆ ನಿಂತಿತ್ತೋ ಈಗಲೂ ಯೋಜನೆ ಅಲ್ಲೇ ನಿಂತಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.
ರು. 11.45 ಕೋಟಿ ಯೋಜನೆ: ಹಂಪಿ ಬೈ ನೈಟ್ (ಧ್ವನಿ ಮತ್ತು ಬೆಳಕು) ಯೋಜನೆಯಲ್ಲಿ ಹಂಪಿಯಲ್ಲಿರುವ ಕೆಲ ಆಯ್ದ 18-20 ಸ್ಮಾರಕಗಳಿಗೆ ಲೈಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ರು. 11.45 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಈಗಾಗಲೇ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಇನ್ವೇಟೀವ್ ಲೈಟಿಂಗ್ ಸಿಸ್ಟಂ ಎನ್ನುವ ಸಂಸ್ಥೆಗೆ ಟೆಂಡರ್ ಆಗಿದ್ದು, ಒಂದೂವರೆ ವರ್ಷದ ಹಿಂದೆ ಸ್ಮಾರಕಗಳಿಗೆ ವಿದ್ಯುತ್ ದೀಪ ಅಳಡಿಸುವ ಕಾರ್ಯ ಭರದಿಂದ ಸಾಗಿತ್ತು. ಆದರೀಗ ಯೋಜನೆ ಮುಗಿದಾಗಲೇ ಗ್ಯಾರಂಟಿ ಎನ್ನುವ ಮಾತುಗಳು ಅಧಿಕಾರಿಗಳ ವಲಯದಿಂದ ಕೇಳಿ ಬರುತ್ತಿವೆ.
ನಾಲ್ಕು ವರ್ಷಗಳಿಂದ ಹಂಪಿ ಬೈ ನೈಟ್ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದರೂ ಹಂಪಿ ಪ್ರಾಧಿಕಾರ, ಪ್ರವಾಸೋದ್ಯಮ, ಜಿಲ್ಲಾಡಳಿತ ಕೇಂದ್ರ ಮತ್ತು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಕಾಮಗಾರಿಯನ್ನು ಬೇಗನೆ ಮುಗಿಸಲಿದೆಯೇ ಎಂಬದನ್ನು ಕಾದು ನೋಡಬೇಕಾಗಿದೆ.
- ಸಿ.ಕೆ. ನಾಗರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.