ಹೈಕೋರ್ಟ್ ಆದೇಶದಂತೆ ಕಬ್ಬಿಗೆ ಬೆಲೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 18
ಸುತ್ತ ಮುತ್ತಲಿನ ಕಬ್ಬು ಕಾರ್ಖಾನೆಗಳು ನೀಡುವ ಬೆಲೆಯನ್ನು ಪರಿಶೀಲಿಸಿ, ಅದರಂತೆ ಬೆಲೆ ನೀಡಬೇಕೆಂಬ ಹೈಕೋರ್ಟ್ನ ಆದೇಶದಂತೆ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದ್ದು, ಟನ್ ಕಬ್ಬಿಗೆ ರು. 2333 ನಿಗದಿಗೊಳಿಸಿ, 14 ದಿನದೊಳಗಾಗಿ ಹಣ ಪಾವತಿಸಬೇಕು. ಜತೆಗೆ ಕೋರ್ಟ್ ಹಾಗೂ ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಡಿಸಿ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಐಎಸ್ಆರ್ ಕಾರ್ಖಾನೆ ವ್ಯವಸ್ಥಾಪಕ ಮಂಡಳಿ ಮತ್ತು ಕಬ್ಬು ಬೆಳೆಗಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಹೈಕೋರ್ಟ್ ಆದೇಶದ ಮೇರೆಗೆ ದಾವಣಗೆರೆಯ ಶ್ಯಾಮನೂರು ಸಕ್ಕರೆ ಕಾರ್ಖಾನೆಯ ರು. 2300 ಹಾಗೂ ಸಿರುಗುಪ್ಪದ ವಿಜಯನಗರ ಸಕ್ಕರೆ ಕಾರ್ಖಾನೆಯ ರು. 2400 ಬೆಲೆ ಪರಿಶೀಲಿಸಿ ಸರಾಸರಿ ಬೆಲೆ ರು. 2333 ಆಗುತ್ತದೆ. ಈ ಬೆಲೆಯನ್ನು ಐಎಸ್ಆರ್ ಕಾರ್ಖಾನೆ ನೀಡಬೇಕು ಎಂದು ಬಿಸ್ವಾಸ್ ತಿಳಿಸಿದರು.
ಜಟಾಪಟಿ: ದಾವಣಗೆರೆ ಶ್ಯಾಮನೂರು ಷುಗರ್ಸ್ ರು. 2300 ನೀಡುವುದಾಗಿ ಈಗಾಗಲೆ ರೈತರಿಗೆ ತಿಳಿಸಿದೆ. ಆದರೂ ರೈತರು ಇದಕ್ಕೆ ಒಪ್ಪುತ್ತಿಲ್ಲ. ಈ ಬೆಲೆಗೆ ಒಪ್ಪಿ ರೈತರು ಕಬ್ಬು ನೀಡಿದಲ್ಲಿ 24 ಗಂಟೆಯೊಳಗೆ ಕಬ್ಬು ನೋಂದಣಿ ಮಾಡಿಸಿಕೊಂಡು ಕಾರ್ಖಾನೆ ಆರಂಭಿಸುವುದಾಗಿ ಐಎಸ್ಆರ್ ಕಾರ್ಖಾನೆ ವ್ಯವಸ್ಥಾಪಕ ಶಿವಕುಮಾರ್ ಸಭೆಗೆ ತಿಳಿಸಿದರು. ಆದರೆ, ಇದನ್ನೊಪ್ಪದ ಹೊಸಪೇಟೆ ರೈತ ಸಂಘದ ಕಾರ್ಯದರ್ಶಿ ಗೋಸಲ ಭರಮಪ್ಪ, ಈಗಾಗಲೆ ಕಾರ್ಖಾನೆ ಎಂಡಿಯೊಂದಿಗೆ ಎರಡು ಸಭೆ ನಡೆದಿವೆ. ಯಾವುದೇ ಕ್ರಮಕೈಗೊಂಡಿಲ್ಲ. ಕಬ್ಬು 15 ತಿಂಗಳಿನದ್ದಾಗಿದ್ದು, ಒಣಗುವ ಹಂತದಲ್ಲಿದೆ. ಇನ್ನು ರಾಯ, ಬಸವ ಕಾಲುವೆಗಳಲ್ಲೂ ನೀರು ಸ್ಥಗಿತಗೊಂಡಿದ್ದು, ಕೇಂದ್ರದ ರು. 2200 ಎಫ್ಎಪಿ ಬೆಲೆ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಲೆಗೆ ಖರೀದಿಸುವುದಾದರೆ, 12 ಗಂಟೆಯೊಳಗೆ ಕಬ್ಬು ನೀಡಲು ಸಿದ್ಧರಿದ್ದೇವೆ. ಬೇರೆ ಕಾರ್ಖಾನೆಗಳು ಸಾಲ ಸೌಲಭ್ಯ, ಸಬ್ಸಿಡಿ ನೀಡುತ್ತಿವೆ. ಆದರೆ ಐಎಸ್ಆರ್ ಮಾತ್ರ ಏನೂ ನೀಡುತ್ತಿಲ್ಲ ಎಂದು ಆರೋಪಿಸಿದರು.
ತಕ್ಷಣ ಐಎಸ್ಆರ್ ಕಾರ್ಖಾನೆ ಎಂಡಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ಶಿವಕುಮಾರ್ಗೆ, ರು. 2300ಕ್ಕಿಂತ ಬೆಲೆ ಹೆಚ್ಚಳ ಮಾಡಲು ಆಗಲ್ಲ. ಮೂರು ಕಾರ್ಖಾನೆಗಳ ಪೈಕಿ ಎರಡು ನೀಡಿದರೆ ನಾವೂ ನೀಡುತ್ತೇವೆ ಎಂದಾಕ್ಷಣ ರೈತರು ವ್ಯವಸ್ಥಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಪೊಲೀಸರು ಸಮಾಧಾನ ಪಡಿಸಿದರು.
ಜಿಲ್ಲಾಧಿಕಾರಿ ಸಫಲ: ಜಿಲ್ಲಾಧಿಕಾರಿ ಬಿಸ್ವಾಸ್ ಮಧ್ಯಪ್ರವೇಶಿಸಿ, ನಿಮ್ಮ ಕಾರ್ಖಾನೆ, ರೈತರ ಮಧ್ಯೆ ಸಾಕಷ್ಟು ಗೊಂದಲಗಳಿವೆ. ಕಬ್ಬು ಬೆಲೆಗೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿರುವ ನಿಮ್ಮ ಮಾಲೀಕರು, ವಕೀಲರಿಗಿಟ್ಟಿರುವ ಹಣವನ್ನು ರೈತರಿಗೆ ಕೊಟ್ಟಿದ್ದರೆ ಒಳ್ಳೆಯದಾಗುತ್ತಿತ್ತು ಎಂದರು. ವ್ಯವಸ್ಥಾಪಕರ ಮೊಬೈಲ್ ಪಡೆದು ಕಾರ್ಖಾನೆ ಎಂಡಿ ಜತೆ ಮಾತನಾಡಿದ ಬಿಸ್ವಾಸ್, ಕೊನೆಗೆ ಮೂರು ಕಾರ್ಖಾನೆಗಳ ಬೆಲೆಗಳ ಸರಾಸರಿ ರು. 2333 ಬೆಲೆ ನಿಗದಿಪಡಿಸುವಲ್ಲಿ ಸಫಲರಾದರು.
ಸಭೆಯಲ್ಲಿ ಎಸಿ ವೆಂಕಟೇಶ್, ಎಸ್ಪಿ ಡಾ. ಚೇತನ್ಸಿಂಗ್ ರಾಥೋಡ್, ಹೊಸಪೇಟೆ ಎಸಿ ಸುನೀಲ್ಕುಮಾರ್, ಡಿವೈಎಸ್ಪಿ ಮಾಳಗಿ, ಹೊಸಪೇಟೆ ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲಗಜ್ಜಪ್ಪ, ನಿರ್ದೇಶಕ ಕೊಟ್ರಪ್ಪ, ಬೆಳಗೋಡ ರುದ್ರಪ್ಪ, ಪ್ಯಾಟಿ ಜಂಬಣ್ಣ, ಸಮೀವುಲ್ಲ, ಕಿಚಿಡಿ ಶ್ರೀನಿವಾಸ್, ಜಂಬಯ್ಯ ನಾಯಕ ಸೇರಿದಂತೆ ಹೊಸಪೇಟೆ, ಕಮಲಾಪುರ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿಯ ನೂರಾರು ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

