ಅಧಿಕಾರಿಗಳ ವರ್ತನೆಗೆ ಬೇಸರ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 18
ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ತನೆ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ, ಬುಧವಾರ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸಭಾತ್ಯಾಗಕ್ಕೆ ಕಾರಣವಾಗಿ ಸಭೆ ನಡೆಯದಾಯಿತು.
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಸಾಮಾನ್ಯ ಸಭೆಗಳಲ್ಲಿ ಕೇವಲ ಚರ್ಚೆ ಮಾಡುವುದೆ ಹೊರತು, ಐದಾರು ತಿಂಗಳಿನಿಂದ ನಮ್ಮ ಕ್ಷೇತ್ರಗಳ ಸಮಸ್ಯೆ ಪರಿಹಾರ ವಾಗುತ್ತಿಲ್ಲ. ಊಟ ಮಾಡುವುದಕ್ಕಾಗಿ ಸಾಮಾನ್ಯ ಸಭೆ ಸೀಮಿತವಾಗಿದೆ ಎಂದು ಬಿಜೆಪಿ ಸದಸ್ಯ ಗೋನಾಳ ರಾಜಶೇಖರ್ ಆರೋಪ ಮಾಡುತ್ತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು, ಅಧ್ಯಕ್ಷರು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ, ಬಿಜೆಪಿಯ 14ಕ್ಕೂ ಹೆಚ್ಚು ಸದಸ್ಯರು ಸಭೆ ಬಹಿಷ್ಕರಿಸಿ ಸಭಾಂಗಣದ ಮುಂದೆ ಧರಣಿ ಕುಳಿತರು.
ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭವಾಯಿತು. ಆಗ ಯಾವ ಯಾವ ಅಧಿಕಾರಿಗಳು ಬಂದಿದ್ದಾರೆಂದು ಮುಖ್ಯ ಯೋಜನಾಧಿಕಾರಿಗಳು ಪರಿಶೀಲಿಸಿದರು. ಕೆಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದಿಲ್ಲ, ಅವರ ಪರ ಯಾರು ಬಂದಿದ್ದಾರೆ? ಜಿಲ್ಲಾ ಮಟ್ಟದ ಅಧಿಕಾರಿಗಳು ಏಕೆ ಬಂದಿಲ್ಲ ಎಂದು ಸಭೆಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು. ಆದರೆ ಬಿಜೆಪಿ ಸದಸ್ಯ ರಾಜಶೇಖರಗೌಡ ಎದ್ದು ನಿಂತು, ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದಿಲ್ಲ ಎಂದರೆ ಯಾರ ಹತ್ತಿರ ಸಮಸ್ಯೆಗಳನ್ನು ಹೇಳಬೇಕು? ಅವರೆ ಬರದಿದ್ದರೆ ಹೇಗೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಟಾರ್ಗೆಟ್ ಮಾಡಿಲ್ಲ: ಜಿಪಂ ಅಧ್ಯಕ್ಷರನ್ನು ಟಾರ್ಗೆಟ್ ಮಾಡುತ್ತಿಲ್ಲ, ಕ್ಷೇತ್ರಗಳ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ನಮ್ಮ ಅಸಮಾಧಾನ. ಸಿಂಧವಾಳ ಪೈಪ್ಲೈನ್ಗೆ ರು. 40 ಲಕ್ಷ ಟೆಂಡರ್ ಕರೆದಿಲ್ಲ. ಇನ್ನು ಯರ್ರಗುಡಿ, ಸಿಂಧವಾಳ ಸೇರಿದಂತೆ ಇತರ ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣವಾಗಿದ್ದರೂ, ವೈದ್ಯರು, ಆರೋಗ್ಯ ಉಪಕರಣಗಳಿಲ್ಲ. ಅಧಿಕಾರಿಗಳು ಕಾಂಗ್ರೆಸ್ ಸದಸ್ಯರಿಗೆ, ನಮಗೆ ವೈಮನಸ್ಸು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜಶೇಖರಗೌಡ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೆ ಜಿಪಂ ಸದಸ್ಯರ, ಅಧಿಕಾರಿಗಳ ಸಭೆ ಕರೆದು, ಸಮಸ್ಯೆಗೆ ಇತಿಶ್ರೀ ಹಾಡಬೇಕೆಂದು ಒತ್ತಾಯಿಸಿದರು.
ಹಿಂದಕ್ಕೆ ಕಳುಹಿಸಿದ್ದಾರೆ: ಸದಸ್ಯ ವಸಂತ್ ಮಾತನಾಡಿ, ದೊಡ್ಡರಾಜಕ್ಯಾಂಪ್ ಹಾಗೂ ಚನ್ನರಾಯಪಟ್ಟಣದಲ್ಲಿ ಕುಡಿಯುವ ನೀರಿಗೆ ರು. 90 ಲಕ್ಷ ಬಿಡುಗಡೆಯಾಗಿದ್ದರೂ, ಅದನ್ನು ಅಧಿಕಾರಿಗಳು ಬಳಕೆ ಮಾಡದೆ, ಹಿಂದಕ್ಕೆ ಕಳುಹಿಸಿದ್ದಾರೆ ಎಂದು ದೂರಿದರು. ಮಾಜಿ ಅಧ್ಯಕ್ಷೆ, ಬಿಜೆಪಿ ಸದಸ್ಯೆ ಅರುಣಾ ತಿಪ್ಪಾರೆಡ್ಡಿ ಮಾತನಾಡಿ, ಕ್ಷೇತ್ರದ ಸಮಸ್ಯೆಗಳಿಗೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡುತ್ತಿಲ್ಲ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರೂ, ಅನುಷ್ಠಾನಕ್ಕೆ ಬರುವುದಿಲ್ಲ. ಹೀಗಾಗಿ ಸಭೆ ಕರೆದರೆ ಏನು ಪ್ರಯೋಜನ? ಸಮಸ್ಯೆಗಳು ಈಡೇರಿಸಿದರೆ ಮಾತ್ರ ಸಭೆಯಲ್ಲಿ ಹಾಜರಾಗುವುದಾಗಿ ಹೇಳಿದರು. ಸದಸ್ಯ ರಾಮುಡು, ಮಲ್ಲಯ್ಯ ಮಾತನಾಡಿದರು. ಪ್ರತಿಭಟನೆಯಲ್ಲಿ ಬಿಜೆಪಿಯ ಮೀನಾಕ್ಷಮ್ಮ, ಸಾವಿತ್ರಮ್ಮ, ಸುಮಂಗಳಮ್ಮ, ಮಮತಾ, ಅನಿತಾ, ಗಾಯತ್ರಿ, ಮಲ್ಲಯ್ಯ, ರಾಮುಡು, ವಂಸತ್, ಚನ್ನಬಸವನಗೌಡ ಇತರರು ಇದ್ದರು.
ಸಿಇಒ ಬಂದ ಮೇಲೆ ಸಭೆ
ಧರಣಿ ನಡೆಸಿ ಬಳಿಕ ಸ್ಥಾಯಿ ಸಮಿತಿ ಅಧ್ಯಕ್ಷರ ಚೇಂಬರ್ಗೆ ಹೋಗಿದ್ದ ಬಿಜೆಪಿ ಸದಸ್ಯರನ್ನು ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಕಾಂಗ್ರೆಸ್ ಸದಸ್ಯರಾದ ಶರಣಪ್ಪ, ವಸಂತ್, ಶಶಿಧರಸ್ವಾಮಿ, ಅನ್ನದಾನ ರೆಡ್ಡಿ ಮೇಟಿ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಜಿಪಂ ಸಿಇಒ ರಜೆ ಮೇಲೆ ಹೋಗಿದ್ದರಿಂದ ಅವರು ಬಂದ ಮೇಲೆ ವಿಶೇಷ ಸಭೆ ಕರೆಯಲಾಗುವುದು ಎಂದು ತೀರ್ಮಾನಿಸಲಾಯಿತು. ಸಾಮಾನ್ಯ ಸಭೆ ನಡೆಯಲಿಲ್ಲ.
ಸದಸ್ಯರಿಗೆ ಸ್ಪಂದಿಸದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುತ್ತೇವೆ, ಸಮಸ್ಯೆ ಇರುವ ಕೆರೆಗಳು ಸೇರಿದಂತೆ ಇತರ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗುತ್ತದೆ. ಈಗಾಗಲೆ ಬಳ್ಳಾರಿ ಎಇಇ ರಮೇಶ್ ಅವರ ಮೇಲೆ ವಾಗ್ದಂಡನೆ ಮಾಡಲಾಗಿದೆ. ಎಇಇಗಳಾದ ಮುತ್ತಯ್ಯ, ಬಸವರಾಜ್, ಹನುಮಂತರೆಡ್ಡಿ, ವೀರಪ್ಪ, ಪ್ರಭು, ಮಹೇಶಪ್ಪ ಅವರ ಇನ್ಕ್ರಿಮೆಂಟ್ ಕಟ್ ಮಾಡಲಾಗಿದೆ.
- ಬೆಂಡಿಗೇರಿ ಶೋಭಾ, ಜಿಪಂ ಅಧ್ಯಕ್ಷೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

