ಬಳ್ಳಾರಿ

ಕೃಷಿ ಮೇಳದಂತೆ ಸಂಡೂರು ಮೇಳ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 20
ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ಕರಕುಶಲ ಮತ್ತು ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆ ಸೌಲಭ್ಯ ಒದಗಿಸಲು ತಾಲೂಕಿನಲ್ಲಿ ಕೃಷಿಮೇಳದ ಮಾದರಿಯಲ್ಲಿ ಮುಂದಿನ ವರ್ಷದಿಂದ ಸಂಡೂರು ಮೇಳ ಆಯೋಜಿಸಲು ಉದ್ದೇಶಿಸಿರುವುದಾಗಿ ಸಂಡೂರು ಕ್ಷೇತ್ರದ ಶಾಸಕ ಈ. ತುಕಾರಾಮ್ ತಿಳಿಸಿದರು.
ಜಿಲ್ಲೆಯ ಸಂಡೂರು ತಾಲೂಕಿನ ಮೆಟ್ರಿಕಿ ಗ್ರಾಮದಲ್ಲಿ ಜಲಾನಯನ ಇಲಾಖೆ ಮತ್ತು ಕೂಡ್ಲಿಗಿ ಸುರಭಿ ಸಂಸ್ಥೆ ಆಶ್ರಯದಲ್ಲಿ ಒಂದು ಮತ್ತು ಎರಡನೇ ಹಂತದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಕಾರ್ಯಕ್ರಮದಡಿ ಮಹಿಳೆಯರಿಗಾಗಿ ಆಯೋಜಿಸಿದ್ದ ಕೌಶಲ್ಯ ತರಬೇತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರಿ ಕಿಟ್ ವಿತರಣೆ: ಸುರಭಿ ಸಂಸ್ಥೆಯು ತರಬೇತಿ ನೀಡುವುದರೊಂದಿಗೆ ತಯಾರಿಸಿದ ವಸ್ತುಗಳನ್ನು ಸೂಕ್ತ ಬೆಲೆಗೆ ಖರೀದಿಸುವುದರಿಂದ ಮಹಿಳೆಯರು ತಮ್ಮ ಬಿಡುವಿನ ವೇಳೆ ಹೆಚ್ಚಿನ ಉತ್ಪಾದನೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು.
ಆದಾಯ ಉತ್ಪನ್ನ ಚಟುವಟಿಕೆಯ 24 ಸ್ವ-ಸಹಾಯ ಸಂಘಗಳಿಗೆ ರು. 50 ಸಾವಿರ ಸುತ್ತುನಿಧಿ ಚೆಕ್ ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ಮತ್ತು ಮಾದರಿ ಕಿಟ್ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಣ ಮಾತನಾಡಿ, ತಾಲೂಕಿನಲ್ಲಿ ಮೈನಿಂಗ್ ಕಾಮಗಾರಿ ನಿಂತಿರುವುದರಿಂದ ಮೈನಿಂಗ್ ಅವಲಂಬಿತ ಕಾರ್ಮಿಕ ಮಹಿಳೆಯರು ಧೃತಿಗೆಡದೆ ಬೇರೆಡೆ ಗುಳೆ ಹೋಗದೆ ಇರುವ ಕೃಷಿಭೂಮಿಯನ್ನು ಮಳೆಗಾಲದಲ್ಲಿ ಸಾಗುವಳಿ ಮಾಡಿ ಬೇಸಿಗೆ ಸಮಯದಲ್ಲಿ ಕಾಯಕವೇ ಕೈಲಾಸ ಎನ್ನುವಂತೆ ಕೃಷಿ ಜತೆಗೆ ಕೌಶಲ್ಯ ಉದ್ಯಮ ಸದುಪಯೋಗ ಪಡೆದು ಆರ್ಥಿಕ ಹೊರೆ ನೀಗಿಸಿಕೊಳ್ಳಬೇಕೆಂದು ಹೇಳಿದರು.
ತಾಲೂಕು ಜಲಾನಯನ ಅಧಿಕಾರಿ ದಯಾನಂದ ಪ್ರಾಸ್ತಾವಿಕ ಮಾತನಾಡಿ, ಇಲಾಖೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಸುರಭಿ ಸಂಸ್ಥೆಯ ಅಧ್ಯಕ್ಷ ಜಿ. ಉಮೇಶ್ ಮಾತನಾಡಿ, ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯ ಹಾಗೂ ಬ್ಯಾಂಕ್ ಲಿಂಕೇಜ್ ಬಗ್ಗೆ ತಿಳಿಸಿದರು.
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ರಾಮಕೃಷ್ಣ, ನಿರ್ದೇಶಕ ಎಚ್.ಎಂ. ಮಂಜುನಾಥ್, ತಾಪಂ ಉಪಾಧ್ಯಕ್ಷ ಉಜ್ಜನಗೌಡ್ರು, ತಾಪಂ ಸದಸ್ಯರಾದ ಶಿವಮ್ಮ ಶೇಖರಪ್ಪ ಹಾಗೂ ಕುಮಾರಸ್ವಾಮಿ, ಗ್ರಾಪಂ ಅಧ್ಯಕ್ಷ ಡಿ.ಎಂ. ರಾಘವೇಂದ್ರ, ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಮಲಿಯಪ್ಪ, ಜಿಲ್ಲಾ ತರಬೇತಿ ಸಂಯೋಜಕರಾದ ಉಮೇಶ್ ನಾಗಣ್ಣನವರ್, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಓಂಕಾರಪ್ಪ, ವಾರ್ಡನ್ ಹುಲುಗಪ್ಪ ಇದ್ದರು. ಶಿಕ್ಷಕ ಗಣೇಶ್ ಸ್ವಾಗತಿಸಿದರು. ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ದಯಾನಂದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.