ಬಳ್ಳಾರಿ

ಹಲ್ಲೆ ಖಂಡಿಸಿ ಮೌನ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 20
ಇಲ್ಲಿನ ವಾರ್ಡ್ಲಾ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಮತ್ತು ಇತರರ ಮೇಲೆ ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಪುತ್ರ ಮುತ್ತ ಸೇರಿದಂತೆ ಇನ್ನಿತರರು ನಡೆಸಿರುವ ಹಲ್ಲೆಯನ್ನು ಖಂಡಿಸಿ ಮತ್ತು ಹಲ್ಲೆಯಿಂದ ತೀವ್ರ ಆತಂಕಕ್ಕೊಳಗಾಗಿರುವ ಶ್ರೀಲಕ್ಷ್ಮೀ, ಭಾಗ್ಯಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರು ನಗರದಲ್ಲಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ನಗರದ ವಾರ್ಡ್ಲಾ ಪಿಯು ಕಾಲೇಜಿನ ನೂರಾರು ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಕನಕದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಸೇರಿದ ಪಾಲಿಕೆಯ 26 ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು, ಕೈಗೆ ಕಪ್ಪುಪಟ್ಟಿ ಧರಿಸಿ, ಮೌನ ಮೆರವಣಿಗೆ ನಡೆಸಿದರು. ಅಂಡರ್ ಬ್ರಿಡ್ಜ್, ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು.
ಅಮಾನವೀಯ ಕೃತ್ಯ: ವಾರ್ಡ್ಲಾ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಶ್ರೀಲಕ್ಷ್ಮೀ, ತಾಯಿ ಭಾಗ್ಯಮ್ಮ ಸ್ಥಳೀಯ ಕೋಟೆ ಪ್ರದೇಶದಲ್ಲಿ ವಾಸವಾಗಿದ್ದು, ಇವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಪುತ್ರ ಮುತ್ತು ಹಾಗೂ ಕುಟುಂಬ ಸದಸ್ಯರು, ಸ್ನೇಹಿತರು, ಮನೆಗೆ ನುಗ್ಗಿ ಶ್ರೀಲಕ್ಷ್ಮೀ ಮತ್ತು ತಾಯಿ ಭಾಗ್ಯಮ್ಮಳನ್ನು ಡಿ. 18ರಂದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಹಿಳೆಯರೆಂಬ ಮಾನವೀಯ ಪ್ರಜ್ಞೆ ಇಲ್ಲದ ಇವರು, ಅಸಭ್ಯ, ಅಮಾನವೀಯವಾಗಿ ವರ್ತಿಸಿದ್ದಾರೆ. ಕಾನೂನು ಕೈಗೆತ್ತಿಕೊಂಡಿರುವ ಇವರ ದಬ್ಬಾಳಿಕೆಗೆ ಕಡಿವಾಣ ಹಾಕಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪಾಲಿಕೆ ಸದಸ್ಯರಾದ ಕುಮಾರಸ್ವಾಮಿ, ಸುಧಾಕರ ದೇಸಾಯಿ, ಅಶೋಕ್‌ಕುಮಾರ್, ವಿವೇಕಾನಂದ ಇತರರು ಆಗ್ರಹಿಸಿದರು.
ಸಂಸದರ ಕುಟುಂಬದ ಹಲ್ಲೆ, ದಬ್ಬಾಳಿಕೆಯಿಂದಾಗಿ ಶ್ರೀಲಕ್ಷ್ಮೀ, ತಾಯಿ ಭಾಗ್ಯಮ್ಮ ತೀವ್ರವಾಗಿ ಭಯಭೀತರಾಗಿದ್ದಾರೆ. ಮೊದಲೇ ದೌರ್ಜನ್ಯ, ದಬ್ಬಾಳಿಕೆ ನಡೆಸುವ ಇಂತಹ ವ್ಯಕ್ತಿಗಳು ಮುಂದೆ ಏನೇನು ಮಾಡುವರೋ ಎಂಬ ಆತಂಕದಲ್ಲಿದ್ದಾರೆ. ಆದ್ದರಿಂದ ಕೂಡಲೆ ಶ್ರೀಲಕ್ಷ್ಮೀ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು. ಪಾಲಿಕೆ ಸದಸ್ಯರಾದ ಫರ್ವೀನ್‌ಬಾನು, ದಿವ್ಯಕುಮಾರಿ, ನಾಗಮ್ಮ, ಜಯಲಲಿತಾ, ಯಲ್ಲಮ್ಮ, ವಿ.ಎಸ್. ಮರಿದೇವಯ್ಯ, ಬಿ.ಕೆ. ಕೆರೆಕೋಡಪ್ಪ, ಅಶೋಕ್‌ಕುಮಾರ್, ಕೆ. ನಾಗರಾಜ, ಶಾಷಾಬ್, ಕಾಂಗ್ರೆಸ್ ಮುಖಂಡರಾದ ಡಿ. ಸೂರಿ, ಬಿ. ಚಂದ್ರ, ವಾರ್ಡ್ಲಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.