ಬಳ್ಳಾರಿ

ಟ್ರಸ್ಟ್ ಕ್ರಮ ಖಂಡನೀಯ: ಎಂಎಂಜೆ ಹರ್ಷವರ್ಧನ್

Published On :

ಕೊಟ್ಟೂರು: ಸಮಗ್ರತೆ, ಸೌಹಾರ್ದತೆ ಮತ್ತು ಐಕ್ಯಮತದ ಆಶಯಗಳನ್ನಿರಿಸಿಕೊಂಡು ನಿರಂತರ ಸಮಾಜ ಸೇವೆಯಲ್ಲಿ ತೊಡಗಿರುವ ಉಜ್ಜಿನಿ ಪೀಠದ ಸದಾಶಯಗಳಿಗೆ ಮಾರಕ ತರುವ ಪ್ರಯತ್ನಕ್ಕೆ ಇದೀಗ ದಾವಣಗೆರೆ ಮೂಲದ ಬಾಡದ ಕೊಗ್ಗನೂರು ಶಾಂತಮ್ಮ ಸಿದ್ದಪ್ಪ ಮೆಮೋರಿಯಲ್ ಟ್ರಸ್ಟ್‌ಕೈ ಹಾಕಿರುವುದು ಖಂಡನೀಯ. ಟ್ರಸ್ಟ್ ಅನಗತ್ಯ ವಿವಾದಕ್ಕೆ ಎಡೆಮಾಡುವ ರೀತಿ ಪ್ರಯತ್ನ ಸಾಗಿಸಿದರೆ ಮುಂದಾಗುವ ಅನಾಹುತಗಳಿಗೆ ಅವರೆ ಕಾರಣ ಎಂದು ಉಜ್ಜಿನಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯ ಈ ಟ್ರಸ್ಟ್ ಇತ್ತೀಚೆಗೆ ಮನೆ ನಿರ್ಮಾಣಕ್ಕೆಂದು ನಿವೇಶನ ಖರೀದಿಸಿದೆ. ನಿವೇಶನದ ಬದಲು ಸಮುದಾಯ ಭವನ ನಿರ್ಮಿಸಲು ಹುನ್ನಾರ ನಡೆಸಿದೆ. ಟ್ರಸ್ಟ್ ಅನಗತ್ಯವಾಗಿ ಜಾತಿ, ಜಾತಿಗಳ ನಡುವೆ ಸಂಘರ್ಷಕ್ಕೆಳೆಯುವ ಪ್ರಯತ್ನ ಮಾಡಲೆತ್ನಿಸಿದೆ ಎಂದು ಆರೋಪಿಸಿದರು.
ಒಪ್ಪಂದ ಉಲ್ಲಂಘನೆ: 1976ರಲ್ಲಿ ವೀರಶೈವ ಜಾತಿಯ ಎರಡು ಪಂಗಡಗಳ ನಡುವೆ ಸಂಘರ್ಷ ಉಂಟಾಗಿತ್ತು. ಸೌಹಾರ್ದಯುತ ಪರಿಹಾರಕ್ಕೆ ಆಗಿನ ಹಿರಿಯರು ಮತ್ತು ಮಠದ ಭಕ್ತರು ಮುಂದಾದರು. ಆಗ ಸೌಹಾರ್ದ ಮತ್ತು ಶಾಂತಿ ಕಾಪಾಡಿಕೊಳ್ಳುವ ಕಾರಣಕ್ಕಾಗಿ ಉಭಯ ಪಂಗಡಗಳ ಮಧ್ಯ ಒಪ್ಪಂದ ರಚಿಸಿಕೊಳ್ಳಲಾಯಿತು. ಇದರಂತೆ ಉಜ್ಜಿನಿ ಪೀಠದ 8 ಕಿ.ಮೀ. ವ್ಯಾಪ್ತಿ ಒಳಗೆ ಮತ್ತೊಂದು ಪಂಗಡದವರು ಯಾವುದೆ ಬಗೆಯ ಚಟುವಟಿಕೆ ಕೈಗೊಳ್ಳುವುದಾಗಲಿ, ಕಚೇರಿ ಮಠ, ಮತ್ತಿತರಗಳನ್ನು ನಿರ್ಮಿಸಿಕೊಳ್ಳಬಾರದು ಎಂದು ಷರತ್ತು ವಿಧಿಸಿಕೊಳ್ಳಲಾಗಿತ್ತು. ಇದೀಗ ಈ ಷರತ್ತನ್ನು ಉಲ್ಲಂಘಿಸಿ ದಾವಣಗೆರೆಯ ಬಾಡದ ಕೊಗ್ಗನೂರು ಶಾಂತಮ್ಮ ಸಿದ್ದಪ್ಪ ಮೆಮೋರಿಯಲ್ ಟ್ರಸ್ಟ್ ಸಮುದಾಯ ಭವನ ನಿರ್ಮಿಸುವ ಆಶಯ ಹೊಂದಿ ವಿಶ್ವಬಂಧುತ್ವ ಸಾರುವ ಪ್ರಯತ್ನ ನಡೆದಿದೆ. ಶಾಂತಿ ಕದಡುವ ಯತ್ನ ಎಂದರು.
ಸಮುದಾಯ ಭವನ ನಿರ್ಮಾಣ ಕಾರ್ಯ ಕೈಬಿಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ.  ದುರುದ್ದೇಶವಿರಿಸಿಕೊಂಡು ಕೆಲಸಕ್ಕೆ ಮತ್ತೆ ಮುಂದಾದರೆ ಸಂಬಂಧಪಟ್ಟವರು ತಕ್ಕ ಪರಿಣಾಮ ಉಣ್ಣಬೇಕಾಗುತ್ತದೆ ಎಂದರು. ಲಿಂಗಶೆಟ್ಟಿ, ಎ. ಮರುಳಸಿದ್ದಪ್ಪ, ಆರ್.ಎಂ. ಗುರುಬಸವಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.