ಬಳ್ಳಾರಿ

ಈಜಲು ಹೋದ ವಿದ್ಯಾರ್ಥಿ ಸಾವು: ದೂರು ದಾಖಲು

Published On :

ಹಗರಿಬೊಮ್ಮನಹಳ್ಳಿ: ಮರಳಿನ ಆಸೆಗಾಗಿ ತುಂಗಭದ್ರೆಯ ಒಡಲು ಬಗೆದು ತೋಡಿದ ಬೃಹತ್ ಗುಂಡಿಗೆ ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ಲು ತಾಂಡಾದ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿರುವ ಆನೆಕಲ್ಲು ತಾಂಡಾದ ಜಗ್ಗನಾಯ್ಕ (21) ಎಂಬ ವಿದ್ಯಾರ್ಥಿಯೇ ತುಂಗಭದ್ರೆಯ ಪಾಲಾಗಿರುವ ದುರ್ದೈವಿ.
ಹಾವೇರಿ ತಾಲೂಕಿನ ಹಾವನೂರು ಬಳಿ ಕಬ್ಬು ಕಟಾವ್ ಮಾಡಲು ವಿದ್ಯಾರ್ಥಿಯ ಪಾಲಕರು ಗುಳೆಹೋಗಿದ್ದು, ಪಾಲಕರನ್ನು ಕಾಣುವ ಸಲುವಾಗಿಯೇ ಗುರುವಾರ (ಡಿ.19) ಹಾವನೂರಿಗೆ ಜಗ್ಗನಾಯ್ಕ ಹೋಗಿದ್ದ. ಶುಕ್ರವಾರ ಮಧ್ಯಾಹ್ನ ಒಂದುಗಂಟೆ ಸುಮಾರಿಗೆ ತನ್ನ ಸಹಪಾಠಿ ಜತೆ ತುಂಗಭದ್ರೆಯಲ್ಲಿ ಈಜಲು ಹೋದಾಗ ಜಗ್ಗ ನಾಯ್ಕ ನೀರು ಪಾಲಾಗಿದ್ದಾನೆ ಎಂದು ಮೃತನ ಸಂಬಂಧಿ ಯಮುನಾ ನಾಯ್ಕ ತಿಳಿಸಿದ್ದಾರೆ.
ಪ್ರಕರಣ ಗುತ್ತಲಠಾಣೆಯಲ್ಲಿ ದಾಖಲಾಗಿದ್ದು, ಮೃತ ವಿದ್ಯಾರ್ಥಿ ಪಾರ್ಥಿವ ಶರೀರವನ್ನು ಭಾನುವಾರ ಮಧ್ಯಾಹ್ನ ತಾಂಡಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ತಾಂಡಾದಲ್ಲಿ ಸ್ಮಶಾನ ಮೌನ ಅವರಿಸಿದ್ದರೆ ಇತ್ತ ಮೃತ ವಿದ್ಯಾರ್ಥಿಯ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ವಿದ್ಯಾರ್ಥಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ.
ಹಾವನೂರು ಸುತ್ತಮುತ್ತ ತುಂಗಭದ್ರೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಮರಳಿಗಾಗಿ ನದಿ ಅಗೆಯಲಾಗಿದೆ. ಇದರಿಂದಾಗಿ ನದಿಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿ ಈಜಲು ಬಾರದವರು ಹಾಗೂ ದನಕರುಗಳು ನದಿಗೆ ಇಳಿಯುವುದು ತೀರಾ ಅಪಾಯಕಾರವಾಗಿದೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಚೆನ್ನಾಗಿ ಓದುತ್ತಿದ್ದ ಮೃತ ವಿದ್ಯಾರ್ಥಿ ಪಿಯುಸಿಯಿಂದಲೇ ಶೇ 80ರಷ್ಟು ಅಂಕಗಳಿಸಿ ಪ್ರತಿಭಾವಂತ ವಿದ್ಯಾರ್ಥಿ ಎಂದೇ ಗುರುತಿಸಿಕೊಂಡಿದ್ದ. ಸದ್ಯ ಐದನೇ ಸೆಮಿಸ್ಟರ್ ಪರೀಕ್ಷೆ ಬರೆದಿರುವ ಜಗ್ಗ ನಾಯ್ಕ ಇನ್ನೂ ಐದು ತಿಂಗಳು ಕಳೆದಿದ್ದರೆ ಬಿಎ ಪದವಿ ಪೂರ್ಣಗೊಳಿಸುತ್ತಿದ್ದ. ಆದರೆ, ವಿಧಿ ಆತನನ್ನು ತುಂಗಭದ್ರೆ ಪಾಲಾಗುವಂತೆ ಮಾಡಿದೆ ಎಂದು ಯಮುನಾ ನಾಯ್ಕ ಅಳಲು ತೋಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.