ಬೆಳೆ ನಷ್ಟ: ಅಧಿಕಾರಿಗಳ ತಂಡದಿಂದ ಪರಿಶೀಲನೆ
ಕೊಟ್ಟೂರು: ಕೈತುಂಬಾ ದುಡ್ಡು ತಂದುಕೊಡುತ್ತೆ ಎಂದು ನಂಬಿ ರಾತ್ರಿ ಹಗಲೆನ್ನದೇ ಬಿಟಿ ಎಂಆರ್‌ಪಿ 7351 ತಳಿಯ ಹತ್ತಿ ಬೀಜ ಖರೀದಿಸಿ ಬಿತ್ತನೆ ಮಾಡಿ ಕೈ ಸುಟ್ಟುಕೊಂಡ ರೈತರಿಗೆ ಪರಿಹಾರ ನೀಡುವ ನಿಟ್ಟಿನತ್ತ ಸರ್ಕಾರ ಬೆಳೆ ಸಮೀಕ್ಷೆ ಕಾರ್ಯಕ್ಕೆ ಇದೀಗ ಮುಂದಾಗಿರುವುದು ರೈತರಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ಇದು ಬಿಟಿ ಹತ್ತಿ ಬೆಳೆ ನಷ್ಟಕ್ಕೆ ಹಣ ಸಿಗುತ್ತದೆಂಬ ಆಶಯ ರೈತರಲ್ಲಿ ಮನೆ ಮಾಡುವಂತಾಗಿದೆ.
ಹತ್ತಿ ಬೆಳೆ ನಷ್ಟದಿಂದ ರೈತರು ಹೋರಾಟದ ಹಾದಿ ಹಿಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ್ಲಿಗಿ ತಾಲೂಕಿನಲ್ಲಿ 11 ಅಧಿಕಾರಿಗಳ ತಂಡ ರಚಿಸಿ ರೈತರ ಹೊಲ, ಗದ್ದೆಗಳಿಗೆ ತೆರಳಿ ಸಮೀಕ್ಷೆ ನಡೆಸಿತು. ಈ ಸಮೀಕ್ಷಾ ತಂಡ ಇದೀಗ ನಷ್ಟಕ್ಕೊಳಗಾದ ರೈತರ ಹೊಲ-ಗದ್ದೆಗಳಿಗೆ ತೆರಳಿ ಹತ್ತಿ ಗಿಡಗಳನ್ನು, ಅದರಲ್ಲಿರುವ ಕಾಯಿ ಹೂವುಗಳನ್ನು ಸಮಗ್ರ ಪರಿಶೀಲನೆ ನಡೆಸುತ್ತಿದೆ.
ಸಮೀಕ್ಷೆಗೆ ಅವಶ್ಯವಿರುವ ಜಮೀನಿನ ಪಹಣಿ, ಬೀಜ ಖರೀದಿ ಬಿಲ್ಲು ನೀಡುವುದು. ಕಡ್ಡಾಯವಾಗಿದ್ದರಿಂದ ಅವುಗಳನ್ನು ಪಡೆಯಲು ರೈತರು ಜನಸ್ನೇಹಿ ಕೇಂದ್ರದ ಮೊರೆ ಹೋಗುತ್ತಿದ್ದಾರೆ. ಹತ್ತಿ ಬೆಳೆಗಳಿಗಾಗಿ ರೈತರು ಮಾಡಿಕೊಂಡ ಖರ್ಚು ಹತ್ತಾರು ಸಾವಿರಗಳಷ್ಟಾಗಿದ್ದರೂ ನಷ್ಟಕ್ಕೆ ಸಿಗುವ ಪರಿಹಾರ ಎಷ್ಟು ಎಂಬುದು ಯಾರಿಗೂ ಇದುವರೆಗೂ ಇಲ್ಲವಾಗಿದೆ.
ಹೆಚ್ಚು ಬಿತ್ತನೆ: ಕೂಡ್ಲಿಗಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬಿಟಿ ಕಂಪನಿಯ ಎಂಆರ್‌ಪಿ 7351ಎ ತಳಿಯ ಹತ್ತಿ ಬೀಜಗಳನ್ನು ರೈತರು ಬಿತ್ತನೆ ಕೈಗೊಂಡಿದ್ದಾರೆ. ಬಿತ್ತನೆ ಮಾಡಿದ ನಂತರ ಹತ್ತಿ ಹೂವು ಬಿಡುವ ಮೊದಲೇ ಮೋಪುಗಳು ಉದುರುತ್ತಿದ್ದವು. ಇದು ವ್ಯಾಪಕವಾಗಿ ನಡೆಯಿತು. ಇದಕ್ಕೆ ಬಿಟಿ ಕಂಪನಿಯೇ ಕಾರಣ ಎಂಬುದು ರೈತರ ದೂರು. ಹತ್ತಿ ಗಿಡದಲ್ಲಿರುವ ಕಾಯಿಗಳ ಸಂಖ್ಯೆ ಈಗಾಗಲೇ ಬಿಡಿಸಿಕೊಂಡ ಹತ್ತಿ ಗಿಡದಲ್ಲಿರುವ ಕಾಯಿಗಳಷ್ಟೇ ಎಂಬ ಸಮಗ್ರ ಮಾಹಿತಿಯನ್ನು ಗಿಡಗಳ ಭಾವಚಿತ್ರದ ಸಮೇತ ಸಮೀಕ್ಷಾ ತಂಡ ಸಂಗ್ರಹಿಸುತ್ತಿದ್ದಾರೆ.
ಕೊಟ್ಟೂರು ಹೋಬಳಿಯಲ್ಲಿ 2190, ಕೂಡ್ಲಿಗಿ ಹೋಬಳಿಯಲ್ಲಿ 1100, ಗುಡೇಕೋಟೆಯಲ್ಲಿ 580, ಹೊಸಹಳ್ಳಿಯಲ್ಲಿ 380ರಷ್ಟು ರೈತರ ಅರ್ಜಿಗಳು ಪರಿಹಾರಕ್ಕೆಂದು ಕೂಡ್ಲಿಗಿ ತಹಸೀಲ್ದಾರ್‌ಗೆ ಸಲ್ಲಿಕೆಯಾಗಿವೆ.
ಕಂಪನಿ ಪ್ರತಿನಿಧಿ ಗೈರು: ಸಮೀಕ್ಷಾ ತಂಡದಲ್ಲಿ ಗ್ರಾಮಲೆಕ್ಕಿಗ, ಕೃಷಿ ಇಲಾಖೆ ಕೃಷಿ ಅಧಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿ ಇದ್ದಾರೆ. ತಂಡದೊಂದಿಗೆ ಬಿಟಿ ಕಂಪನಿಯ ಪ್ರತಿನಿಧಿಯೊಬ್ಬರು ಇರಬೇಕೆಂದು ತಾಲೂಕು ಆಡಳಿತ ಹೇಳಿದ್ದರೂ ಇದುವರೆಗೂ ಕಂಪನಿಯ ಯಾವುದೇ ಪ್ರತಿನಿಧಿ ಸಮೀಕ್ಷೆ ತಂಡದಲ್ಲಿ ಪಾಲ್ಗೊಳ್ಳದಿರುವುದು ರೈತರಲ್ಲಿ ಕೆಲ ಅನುಮಾನಗಳಿಗೆ ಕಾರಣವಾಗಿದೆ.
ರೈತ ಸಂಪರ್ಕ ಕೇಂದ್ರಕ್ಕೆ- ಬೆಳೆ ನಷ್ಟ ಸಮೀಕ್ಷೆಯಲ್ಲಿ ಗಿಡದಲ್ಲಿರುವ ಕಾಯಿಗಳು ಹತ್ತಿ ಪ್ರಮಾಣ, ಹೂವುಗಳ ಸಂಖ್ಯೆ ಪರಿಶೀಲಿಸಿ ಸಂಬಂಧಿಸಿದ ರೈತರೊಂದಿಗಿನ ಭಾವಚಿತ್ರವನ್ನು ಸಂಗ್ರಹಿಸಲಾಗಿದೆ. ಇದರ ಸಮಗ್ರ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರಕ್ಕೆ ನೀಡಲಾಗುತ್ತಿದೆ. ನಂತರ ಈ ವರದಿ ತಾಲೂಕು ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ ಎಂದು ಸಮೀಕ್ಷೆ ತಂಡದ ಅಧಿಕಾರಿ ಚಂದ್ರಶೇಖರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

