ಬಳ್ಳಾರಿ

ಸಕಾಲ ಅರ್ಜಿ ವಿಲೇವಾರಿ: ಬಳ್ಳಾರಿಗೆ 28ನೇ ಸ್ಥಾನ

Published On :

ಬಳ್ಳಾರಿ: ರಾಜ್ಯದ 30 ಜಿಲ್ಲೆಗಳಲ್ಲಿ ಸಕಾಲ ಯೋಜನೆ ಅಡಿ ಸ್ವೀಕೃತಗೊಂಡು, ವಿಲೇವಾರಿಯಾಗಿರುವ ಅರ್ಜಿಗಳ ಕುರಿತು ಪ್ರತಿ ತಿಂಗಳು ರ್ಯಾಂಕಿಂಗ್ ಮಾಡಲಾಗುತ್ತಿದ್ದು, ಈ ಪೈಕಿ ಬಳ್ಳಾರಿ ಜಿಲ್ಲೆ 28ನೇ ಸ್ಥಾನದಲ್ಲಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ 28 ಸಾವಿರ ಅರ್ಜಿಗಳನ್ನು ಸ್ವೀಕರಿಸುವ ಮೂಲಕ 25ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ, ನವೆಂಬರ್‌ನಲ್ಲಿ 50 ಸಾವಿರಕ್ಕಿಳಿಯುವ ಮೂಲಕ 28ನೇ ಸ್ಥಾನ ಪಡೆದಿದೆ. ಇನ್ನು ವಿಲೇವಾರಿ ವಿಳಂಬ ಸ್ಥಾನದಲ್ಲಿ ಬಳ್ಳಾರಿ 29ನೇ ಸ್ಥಾನದಲ್ಲಿದೆ. ಸಕಾಲದಲ್ಲಿ ಸ್ವೀಕೃತಗೊಂಡು, ವಿಲೇವಾರಿಯಾಗಿರುವ ಅರ್ಜಿಗಳ ಕುರಿತು ಪ್ರತಿ ತಿಂಗಳು ರ್ಯಾಂಕಿಂಗ್ ಮಾಡಲಾಗುತ್ತಿದ್ದು, ಈ ಪೈಕಿ ಚಿಕ್ಕಬಳ್ಳಾಪುರ ಸತತ ಮೂರನೇ ಬಾರಿಗೆ ಮೂರನೇ ಸ್ಥಾನದಲ್ಲಿದ್ದರೆ, ಬೀದರ್ ಕೊನೆ ಸ್ಥಾನದಲ್ಲಿದೆ. ಇನ್ನು ಯಾದಗಿರಿ 29, ಬಳ್ಳಾರಿ ಜಿಲ್ಲೆ 28ನೇ ಸ್ಥಾನದಲ್ಲಿದ್ದು, ಅರ್ಜಿ ವಿಲೇವಾರಿಯಲ್ಲಿ 29ನೇ ಸ್ಥಾನದಲ್ಲಿದೆ. ಬಳ್ಳಾರಿ ಜಿಲ್ಲೆಯು ಇನ್ನು ಕೆಳಗಿಳಿಯುವ ಸಂಭವದಿಂದ ಜಿಲ್ಲೆಯಲ್ಲಿನ ಪ್ರತಿಯೊಂದು ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲು ಬಳ್ಳಾರಿಗೆ ಆಗಮಿಸಿರುವುದಾಗಿ ಹೇಳಿದರು.
ನಾಗರಿಕರ ಸಹಕಾರ ಅಗತ್ಯ: ಜಿಲ್ಲೆಯ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿಗಳ ಸ್ವೀಕೃತಿ ಮತ್ತು ವಿಲೇವಾರಿ ಕೊರತೆಯಿದೆ. ಇದಕ್ಕೆ ನಾಗರಿಕರ ಸಹಕಾರವೂ ಅಗತ್ಯವಿದ್ದು, ಅರ್ಜಿಗಳನ್ನು ಸ್ವೀಕರಿಸಿದ ಮೇಲೆ ಅದಕ್ಕೆ ನಾಗರಿಕರೂ ಸ್ವೀಕೃತಿ ಪಡೆಯಬೇಕು. ಆಗ ಮಾತ್ರ, ನಾಗರಿಕರಿಂದ ಸಲ್ಲಿಕೆಯಾದ ಅರ್ಜಿಗಳು ಯಾವ ಹಂತದಲ್ಲಿವೆ. ಅದು ವಿಳಂಬಕ್ಕೆ ಕಾರಣಗಳೇನು, ಯಾರಿಂದ ವಿಳಂಬ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾಧ್ಯವಾಗಲಿದೆ. ಅಲ್ಲದೇ, ಅರ್ಜಿಗಳಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಜನರಿಗೆ ಜಾಗೃತಿ ನೀಡಿ: ಸಕಾಲ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಸ್ಪರ್ಧೆಗಳಲ್ಲಿ, ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸಿಡಿಪಿಒ ಮೂಲಕ ಮತ್ತು ಕಾಲೇಜು ವಿದ್ಯಾರ್ಥಿಗಳ ಎನ್ನೆಸ್ಸೆಸ್ ಶಿಬಿರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಇದಕ್ಕೆ ಬೇಕಾಗುವ ಸಿಡಿ ಇತರೆ ಪರಿಕರಗಳನ್ನು ಒದಗಿಸಲಾಗಿದೆ ಎಂದರು.
ವಿಳಂಬ ಸಾಬೀತಿನಿಂದ ಧನ ವಾಪಾಸು: ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡಿದ ವಿವಿಧ ಇಲಾಖೆಗಳ 282 ನೌಕರರಿಂದ ಪರಿಹಾರ ಧನ ನೀಡಲಾಗಿದೆ. ದಿನಕ್ಕೆ ರು. 20ನಂತೆ ದೂರಿಗೆ ರು. 500ಗಳನ್ನು ಪರಿಹಾರವಾಗಿ ನೀಡಲಾಗುತ್ತಿದ್ದು, ತಹಸೀಲ್ದಾರ್, ಡಿಸಿ, ಎಒ, ಪಿಡಿಒ ಸೇರಿದಂತೆ ಯಾರೇ ವಿಳಂಬ ಮಾಡಿದಲ್ಲಿ, ತಮ್ಮಲ್ಲಿನ ಸ್ವೀಕೃತಿ ಪತ್ರವನ್ನು ಅವರ ಮೇಲಧಿಕಾರಿಗಳಿಗೆ ತೋರಿಸಿದರೆ, ತಮ್ಮ ಪರಿಹಾರ ಧನ ದೊರೆಯಲಿದೆ ಎಂದರು.
ಅಧಿಕಾರಿಗಳಿಗೂ ಪ್ರೋತ್ಸಾಹ: ಸರ್ವೋತ್ತಮ ಪ್ರಶಸ್ತಿ ಅರ್ಜಿಗಳನ್ನು ವಿಳಂಬ ಮಾಡದೆ, ಯಾರಿಗೂ ತೊಂದರೆ ಕೊಡದೇ ವಿಲೇವಾರಿ ಮಾಡುವ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡುವ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಜತೆಗೆ ರು. 10 ಸಾವಿರ ಬಹುಮಾನ ನೀಡಲಾಗುವುದು. ಈ ಮೂಲಕ ನೌಕರರಲ್ಲಿ ಕೆಲಸ ಮಾಡಲು ಇನ್ನಷ್ಟು ಉತ್ತೇಜನ ತುಂಬಲಾಗುವುದು. ಈ ಪದ್ಧತಿಯನ್ನು ಬಳ್ಳಾರಿಯಲ್ಲಿ ಈ ತಿಂಗಳಿಂದ ಆರಂಭಿಸಲಾಗುತ್ತಿದ್ದು, ಅಂತಹ ನೌಕರರನ್ನು ಗುರುತಿಸಲು ಡಿ. 30ರೊಳಗಾಗಿ ಸಮಿತಿಯೊಂದನ್ನು ರಚಿಸಲಾಗುವುದು ಎಂದರು. ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಹೊರತುಪಡಿಸಿ, ಇನ್ನುಳಿದ ಎಲ್ಲ ಇಲಾಖೆಗಳಲ್ಲಿನ ಉತ್ತಮ ನೌಕರರೆಂದು ಗುರುತಿಸಿದ ಯಾರು ಬೇಕಾದರೂ, (ನಾಗರೀಕರು ಸೇರಿದಂತೆ) ಸಮಿತಿಗೆ ಶಿಫಾರಸು ಮಾಡಬಹುದಾಗಿದ್ದು, 26ನೇ ತಾರೀಖಿನೊಳಗಾಗಿ ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಈ ವೇಳೆ ಎಡಿಸಿ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.