ಬಳ್ಳಾರಿ ಐಎಂಎಗೆ ರಾಷ್ಟ್ರೀಯ ಪ್ರಶಸ್ತಿ ಗರಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 1
ವೈದ್ಯಕೀಯ ಸಾಧನೆಗೆ ಇಲ್ಲಿನ ಐಎಂಎ ರಾಷ್ಟ್ರೀಯ ಪ್ರಶಸ್ತಿ ಗಳಿಸಿ, ಬಳ್ಳಾರಿ ಎಂದರೆ ಗಣಿಗಾರಿಕೆ ಮಾತ್ರವಲ್ಲ ಎಂಬುದನ್ನು ಸಾಬೀತು ಪಡಿಸಿದೆ.
ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಡಾ ಸಿ.ಎಲ್. ಜಾವೇರಿ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿದೆ. ಬಳ್ಳಾರಿಯ ಭಾರತೀಯ ವೈದ್ಯಸಂಘ 2011-12ನೇ ಸಾಲಿನಲ್ಲಿ ಕುಟುಂಬ ಯೋಜನೆ ಹಾಗೂ ವೈದ್ಯಕೀಯ, ಸಾಮಾಜಿಕ ಚಟುವಟಿಕೆ ರೂಪಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನವಾಗಿದೆ.
ರಾಜ್ಯಕ್ಕೆ ಪ್ರಥಮ ಅವಾರ್ಡ್: ಐಎಂಎಯ ಪ್ರಮುಖ ಪ್ರಶಸ್ತಿ ಇದು. 1977-78ರಿಂದ ಇದನ್ನು ಕೊಡಲಾಗುತ್ತಿದ್ದು, ಈ ಬಾರಿಯದು 26ನೇ ಪ್ರಶಸ್ತಿ. ರಾಜ್ಯಕ್ಕೆ ಮೊದಲಿನದು. ಅದು ಬಳ್ಳಾರಿಯ ಭಾರತೀಯ ವೈದ್ಯಕೀಯ ಸಂಘದ ಶಾಖೆಗೆ ಲಭಿಸಿರುವುದು ಹೆಗ್ಗಳಿಕೆ.
ವರ್ಷಕ್ಕೆ 54 ಕಾರ್ಯಕ್ರಮ: ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆ 2011-12ನೇ ಸಾಲಿನಲ್ಲಿ ಕುಟುಂಬ ಯೋಜನೆ ಹಾಗೂ ಆರೋಗ್ಯ ಜಾಗೃತಿಗಾಗಿ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ, ಏಡ್ಸ್ ಜಾಗೃತಿ, ಆರೋಗ್ಯ ಅರಿವು - ಹೀಗೆ 54 ಕಾರ್ಯಕ್ರಮಗಳನ್ನು ರೂಪಿಸಿತ್ತು.
ಕನ್ಯಾಕುಮಾರಿಯಲ್ಲಿ ಸಮಾವೇಶ: ಭಾರತ ಸರ್ಕಾರದ ಬಹುತೇಕ ಆರೋಗ್ಯ ಯೋಜನೆ ಅನುಷ್ಠಾನದಲ್ಲಿ ಐಎಂಎ ಪಾತ್ರ ಮುಖ್ಯವಾಗಿದೆ. ಐಎಂಎ ದೇಶದಲ್ಲಿ 1500ಕ್ಕೂ ಹೆಚ್ಚು ಹಾಗೂ ರಾಜ್ಯದಲ್ಲಿ 200ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಪ್ರತಿವರ್ಷ ಉತ್ತಮ ಮೆಡಿಕೋ-ಸೋಶಿಯಲ್ ಚಟುವಟಿಕೆಯನ್ನು ರೂಪಿಸಿದ ಶಾಖೆಗೆ ಡಾ ಸಿ.ಎಲ್. ಜಾವೆರಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿ ಫಲಕ ಹಾಗೂ ರು. 50 ಸಾವಿರ ನಗದನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಕಳೆದ ತಿಂಗಳು ಕನ್ಯಾಕುಮಾರಿಯಲ್ಲಿ ನಡೆದ ಐಎಂಎ ರಾಷ್ಟ್ರೀಯ ಸಮಾವೇಶದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ ಯೋಗಾನಂದರ ರೆಡ್ಡಿಗೆ ಅವರಿಗೆ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ ವಿಜಯಕುಮಾರ್ ವಿತರಿಸಿದರು.
ಈ ಪ್ರಶಸ್ತಿ ನಮಗೆ ಸಂತೋಷ ತಂದಿದೆ. ಸಂಘ ತನ್ನ ಚಟುವಟಿಕೆಯನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿತ್ತು. ಅದನ್ನು ಗಮನಿಸಿ ಪ್ರಶಸ್ತಿ ನೀಡಿದ್ದಾರೆ ಎನ್ನುತ್ತಾರೆ ಐಎಂಎನ ಹಿಂದಿನ (2011-12ನೇ ಸಾಲಿನ) ರಾಜ್ಯಾಧ್ಯಕ್ಷ ವಿದ್ಯಾಧರ ಕಿನ್ನಾಳ್.
ಜವಾಬ್ದಾರಿ ಹೆಚ್ಚಿಸಿದೆ
ಭಾರತೀಯ ವೈದ್ಯಕೀಯ ಸಂಘದ ಇತಿಹಾಸದಲ್ಲಿ ಪ್ರಥಮ ಬಾರಿಗೆ ರಾಜ್ಯಕ್ಕೆ ಡಾ ಸಿ.ಎಲ್. ಜಾವೇರಿ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ವೈದ್ಯರು ಹಾಗೂ ಐಎಂಎ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ. ಆರೋಗ್ಯದ ಕುರಿತು ಜಾಗೃತಿ ಹಾಗೂ ಕುಟುಂಬ ಯೋಜನೆ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಡಾ ಯೋಗಾನಂದ ರೆಡ್ಡಿ, ಐಎಂಎ ರಾಜ್ಯಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

