ತುಂಗಭದ್ರಾ ನೀರು ರಕ್ಷಣೆಗೆ ಕೆಎಸ್ಆರ್ಪಿ!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 10
ಕಾವೇರಿ ನೀರಿಗಾಗಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ಮಧ್ಯೆ ನಿರಂತರ ಕಾನೂನು ಹೋರಾಟ ನಡೆಯುತ್ತಿದೆ. ಆದರೆ, ಇತ್ತ ತುಂಗಭದ್ರಾ ಕಾಲುವೆ ನೀರಿನ ರಕ್ಷಣೆಗೆ ಕೆಎಸ್ಆರ್ಪಿ ತುಕಡಿಗಳನ್ನು ಬಳಸಲು ಬಳ್ಳಾರಿ ಜಿಲ್ಲಾಡಳಿತ ಮುಂದಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತಾ, ಕಂದಾಯ ಇಲಾಖೆ, ನೀರಾವರಿ ಇಲಾಖೆ ಜಂಟಿಯಾಗಿ ಅನಧಿಕೃತ ನೀರಿನ ಬಳಕೆಗೆ ಕಡಿವಾಣ ಹಾಕಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಗುಲ್ಬರ್ಗದಿಂದ 2 ಕೆಎಸ್ಆರ್ಪಿ ತುಕಡಿಗಳು ಇನ್ನೆರಡು ದಿನಗಳಲ್ಲಿ ಬಳ್ಳಾರಿಗೆ ಆಗಮಿಸಲಿವೆ. ಪೊಲೀಸ್ ಹಾಗೂ ವಿವಿಧ ಇಲಾಖೆಯ 16 ವಾಹನಗಳು ಕಾಲುವೆಯ ಮೇಲೆ ಬಂದೋಬಸ್ತ್ ಮಾಡಲಿವೆ. ಅನಧಿಕೃತ ಪಂಪ್ಸೆಟ್ಗಳನ್ನು ಸೀಜ್ ಮಾಡಲಿದೆ.
ತುಂಗಭದ್ರಾ ಜಲಾಶಯದಿಂದ ರಾಜ್ಯದ ಪಾಲಿನ ನೀರು ಬಿಟ್ಟರೂ, ರೈತರಿಗೆ ಉಪಯೋಗವಾಗುತ್ತಿಲ್ಲ. ಆಂಧ್ರಪ್ರದೇಶಕ್ಕೆ ನೀರನ್ನು ಬಿಟ್ಟರೆ ಮಾತ್ರ ರೈತರ ಪಾಲಿಗೆ ವರದಾನವಾಗುತ್ತಿದೆ. ಇಂಥ ತಾಂತ್ರಿಕ ದೋಷದಿಂದ ರಾಜ್ಯದ ರೈತರು ಬಳಲುತ್ತಿದ್ದಾರೆ. ಆಂಧ್ರಪಾಲಿನ ನೀರು ಬಿಟ್ಟರೆ, ಆಂಧ್ರಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಆಂಧ್ರ ನೀರು ಬೇಡವೆಂಬ ಇಂಡೆಂಟ್ ಆಂಧ್ರಸರ್ಕಾರ ಹಿಂದಕ್ಕೆ ಪಡೆದಿರುವುದರಿಂದ ಇದೀಗ ರಾಜ್ಯದ ರೈತರು ಕಂಗಾಲಾಗಿದ್ದಾರೆ.
ರೈತರು ನಷ್ಟದ ಭೀತಿಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ಇದೀಗ ರೈತರಿಗೆ ಸ್ಪಂದಿಸಿರುವ ಟಿಬಿ ಬೋರ್ಡ್ ಅಧಿಕಾರಿಗಳು ಕೆಳಮಟ್ಟದ ಕಾಲುವೆಗೆ ನೀರು ಹರಿಸಿದರೆ, ಆಂಧ್ರ ಪ್ರದೇಶಕ್ಕೆ ನೀರು ಬರುತ್ತದೆ ಎನ್ನುವ ನಂಬಿಕೆ ಅಲ್ಲಿನ ಸರ್ಕಾರಕ್ಕೆ ಹುಟ್ಟಿಸಬೇಕಾಗಿದೆ. ಅಂದಾಗ ಮಾತ್ರ ಕಾಲುವೆಗೆ ಆಂಧ್ರಪಾಲಿನ ನೀರು ಬಿಡಲು ಅಲ್ಲಿನ ಸರ್ಕಾರ ಒಪ್ಪುತ್ತದೆ. ರಾಜ್ಯದ ರೈತ ಹಿತಕಾಪಾಡುವ ಹಾಗೂ ಆಂಧ್ರ ಸರ್ಕಾರ ಓಲೈಸಬೇಕಾದ ಹಿನ್ನೆಲೆಯಲ್ಲಿ ಇಡೀಗ ಜಿಲ್ಲಾಡಳಿತ ಅನಿವಾರ್ಯವಾಗಿ ಫೆ. 12ರಿಂದ ಕೆಎಸ್ಆರ್ಪಿ ಬಳಕೆಗೆ ಮುಂದಾಗಿದೆ. ಫೆ.12ರಂದು ಬೋರ್ಡ್ನ ಅಧಿಕಾರಿಗಳ ಸಭೆ ನಡೆಯಲಿದೆ.
ಕಂಗಾಲಾಗಿರುವ ರೈತರು: ತುಂಗಭದ್ರಾ ನೀರಾವರಿ ಬೋರ್ಡ್ ಸಲಹಾ ಸಮಿತಿಯ ಸಭೆಯಲ್ಲಿ ಮಾ. 1ರ ವರೆಗೆ ಕೆಳಮಟ್ಟದ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ನಿರ್ಧಾರ ಕೈಗೊಳ್ಳಲಾಗಿತ್ತು. ಕರ್ನಾಟಕ ಪಾಲಿನ 550 ಕ್ಯುಸೆಕ್ ಹಾಗೂ ಆಂಧ್ರಪ್ರದೇಶ ಪಾಲಿನ 550 ಕ್ಯುಸೆಕ್ ನೀರು ಬಿಡಬೇಕಿತ್ತು. ಎರಡು ರಾಜ್ಯಗಳ ಪಾಲಿನ ನೀರು ಬಿಟ್ಟರೆ ಮಾತ್ರ ರಾಜ್ಯದಲ್ಲಿ ಹಾದುಹೋಗುವ ಕಾಲುವೆಯಿಂದ ಡಿಸೈನ್ ಡಿಪಿಗಳಿಗೆ ನೀರು ಏರಲು ಸಾಧ್ಯವಾಗುತ್ತದೆ. ಆದರೆ, ಕರ್ನಾಟಕ ಪಾಲಿನ ನೀರು ಬಿಟ್ಟರೆ ರಾಜ್ಯದ ರೈತರ ಡಿಪಿಗಳಿಗೆ ನೀರು ಹರಿಯುವುದಿಲ್ಲ. ಆದರೆ ಜನವರಿ ಅಂತ್ಯದಲ್ಲಿಯೇ ಆಂಧ್ರಪಾಲಿನ ನೀರಿನ ಇಂಡೆಂಟ್ ಆಂಧ್ರಸರ್ಕಾರ ಹಿಂದಕ್ಕೆ ಪಡೆದಿರುವುದರಿಂದ ರೈತರು ಕಂಗಾಲಾಗಿ ಹೋರಾಟಕ್ಕೆ ಮುಂದಾಗಿದ್ದರು.
ಟಿಬಿ ಬೋರ್ಡ್ನ ಮುಂದೆ ಪ್ರತಿಭಟನೆ: ರಾಜ್ಯದ ರೈತರು, ವಿವಿಧ ರಾಜಕೀಯ ಪಕ್ಷಗಳು ಹೊಸಪೇಟೆಯಲ್ಲಿ ಟಿಬಿ ಬೋರ್ಡ್ಗೆ ಮುತ್ತಿಗೆ ಹಾಕಿ ಆಂಧ್ರಪಾಲಿನ ನೀರು ಬಿಟ್ಟರೆ ಮಾತ್ರ, ಕರ್ನಾಟಕದ ನೀರು ಬಳಕೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಂಧ್ರಪಾಲಿನ ನೀರು ಬಿಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಮಣಿದ ಬೋರ್ಡ್ ಹಾಗೂ ಆಂಧ್ರ ಸರ್ಕಾರದ ಜತೆ ಮಾತನಾಡಿ ನೀರು ಬಿಡಿಸಲಾಗಿತ್ತು. 11 ದಿನಗಳ ನೀರು ಬಿಡಿಸಿದ ಸಂದರ್ಭದಲ್ಲಿ ಆಂಧ್ರಪಾಲಿನ ನೀರು ಬಂದಿಲ್ಲ ಎಂದು ಹೇಳುವ ಮೂಲಕ ಆಂಧ್ರಪ್ರದೇಶ ಸರ್ಕಾರವು ತನ್ನ ಇಂಡೆಂಟ್ ಮತ್ತೆ ಹಿಂದಕ್ಕೆ ಪಡೆದಿತ್ತು. ಇದರಿಂದಾಗಿ ರಾಜ್ಯದಲ್ಲಿ ಎಲ್ಎಲ್ ಕಾಲುವೆ ನೀರು ನಂಬಿಕೊಂಡು ಬಿತ್ತನೆ ಮಾಡಿದ ರೈತರು ಬೆಳೆಗಳು ಒಣಗುತ್ತಿರುವ ಪರಿಣಾಮ, ಮತ್ತೆ ರೈತರು, ರಾಜಕೀಯ ಪಕ್ಷಗಳು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದ್ದರು.
ಆಂಧ್ರಪ್ರದೇಶದ ವಾದ ಏನು?: ಕರ್ನಾಟಕದ ಅಚ್ಚುಕಟ್ಟು ಅಲ್ಲದ ಪ್ರದೇಶದಲ್ಲಿ ಪಂಪ್ಸೆಟ್ಗಳನ್ನು ಬಳಸಿಕೊಂಡು ನೀರನ್ನು ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುವುದರಿಂದ ನಮ್ಮ (ಆಂಧ್ರಪ್ರದೇಶ) ಪಾಲಿನ ನೀರು ತಮಗೆ ಬರುವುದಿಲ್ಲ. ಇದರಿಂದಾಗಿ ನಮ್ಮ ಪಾಲಿನ 550 ಕ್ಯುಸೆಕ್ ನೀರು ಜಲಾಶಯದಿಂದ ಬಿಟ್ಟರೂ ಉಪಯೋಗವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪಾಲಿನ ನೀರು ಬೇಡವೆಂದು ಇಂಡೆಂಟ್ ಹಿಂದಕ್ಕೆ ಪಡೆದಿತ್ತು. ಅನಧಿಕೃತ ಬಳಕೆ ತಡೆದರೆ ಮಾತ್ರ ನೀರು ಬರಲು ಸಾಧ್ಯ ಎಂಬುದು ಆಂಧ್ರಪ್ರದೇಶದ ವಾದವಾಗಿದೆ.
ಈ ಕುರಿತಾಗಿ ಡಿಸಿ ಬಿಸ್ವಾಸ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, ಅನಧಿಕೃತ ನೀರು ಬಳಕೆಗೆ ಕಡಿವಾಣ ಹಾಕುವ ಮೂಲಕ ಆಂಧ್ರಪ್ರದೇಶ ಸರ್ಕಾರಕ್ಕೆ ನಂಬಿಕೆ ತಂದು, ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ, ಇದಕ್ಕಾಗಿ ಕೆಎಸ್ಆರ್ಪಿ ತರಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮಾತನಾಡಿ, ಜಿಲ್ಲೆಯ ರೈತರ ಸಮಸ್ಯೆಗಳನ್ನು ಹೋಗಲಾಡಿಸುವ ಉದ್ದೇಶದಿಂದಾಗಿ, ಅನಧಿಕೃತ ನೀರು ಬಳಕೆ ತಡೆಯಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.
ಆಂಧ್ರಪಾಲಿನ ನೀರು ಬಿಡುವ ಕುರಿತಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಜತೆ ಮಾತನಾಡಿರುವುದಾಗಿ ತಿಳಿಸಿದರು. ಇನ್ನು ಅನಧಿಕೃತ ನೀರು ಬಳಕೆ ತಡೆಯಲು ಕೆಎಸ್ಆರ್ಪಿಯನ್ನು ಬಳಕೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ರೈತರ ಸಮಸ್ಯೆ ಬಗೆಹರಿಯಲಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

