ಹಳ್ಳಿಗಾಡಿನ ರಸ್ತೆ ಅಭಿವೃದ್ಧಿಗೆ ರು. 12 ಕೋಟಿ ಅನುದಾನ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 11
ಸರ್ಕಾರ ನಮ್ಮ ಹಳ್ಳಿ ನಮ್ಮ ರಸ್ತೆ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ತಾಲೂಕಿನ ಮೂಲೆಕಟ್ಟಿನ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ರು. 12 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಚಂದ್ರನಾಯ್ಕ ಹೇಳಿದರು.
ತಾಲೂಕಿನ ಮೈಲಾರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿರುವ ರಾಜ್ಯ, ಜಿಲ್ಲಾ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮೂಲಕಟ್ಟಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ರು. 12 ಕೋಟಿ ವೆಚ್ಚದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.
ತಾಲೂಕಿನ 30 ಕಿಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ, ಹಾಲ್ ತಿಮ್ಲಾಪುರ ರಸ್ತೆಗೆ ರು. 108.90 ಲಕ್ಷ, ಶಿವಪುರ ತಾಂಡ ರಸ್ತೆಗೆ ರು. 224.67 ಲಕ್ಷ, ತುಂಬಿನಕೇರಿ ದೊಡ್ಡ ತಾಂಡ ರಸ್ತೆಗೆ ರು. 235.29 ಲಕ್ಷ, ಸಕ್ರಿಹಳ್ಳಿ ರಸ್ತೆಗೆ ರು. 50.31 ಲಕ್ಷ, ಹರವಿ ಬಸಾಪುರ ರಸ್ತೆಗೆ ರು. 97.13 ಲಕ್ಷ, ನಾಗಲಾಪುರ ತಾಂಡ ರಸ್ತೆಗೆ ರು. 231.97 ಲಕ್ಷ ಹಾಗೂ ಕೊಯಿಲಾರಗಟ್ಟಿ ರಸ್ತೆಗೆ ರು. 220.40 ಲಕ್ಷ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.
ತಾಲೂಕಿನ ಕಾಲ್ವಿತಾಂಡ ಏತ ನೀರಾವರಿ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಯೋಜನೆಗೆ ರು. 9 ಕೋಟಿ ವೆಚ್ಚವಾಗಲಿದೆ. ಸರ್ವೆ ಕಾರ್ಯ ಮಾಡುವಂತೆ ಸಣ್ಣ ನೀರಾವರಿ ಇಲಾಖೆಗೆ ಸೂಚಿಸಲಾಗಿದೆ ಎಂದರು. ತಾಲೂಕಿನಲ್ಲಿ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಲಿಂಗನಾಯ್ಕನಹಳ್ಳಿ, ಮಾನಿಹಳ್ಳಿ, ಪುರ ಹಿರೇಕಲ್ಮಠ, ತಾತನಮಠ, ಹೂವಿನಹಡಗಲಿಯ ಗವಿಮಠಕ್ಕೆ ತಲಾ ರು. 20 ಲಕ್ಷದಂತೆ ಪ್ರವಾಸೋದ್ಯಮ ಇಲಾಖೆಯಿಂದ ರು. 1 ಕೋಟಿ ಮಂಜೂರಾತಿ ನೀಡಿ, ತಾಲೂಕಿನ ಧಾರ್ಮಿಕ ಕ್ಷೇತ್ರಗಳಿಗೂ ಸರ್ಕಾರ ಅನುದಾನ ನೀಡಿದೆ ಎಂದು ಅವರು, ನಗರೋತ್ಥಾನ ಯೋಜನೆ ಅಡಿಯಲ್ಲಿ ಹೂವಿನಹಡಗಲಿ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಗಾಗಿ ರು. 5 ಕೋಟಿ ಬಿಡುಗಡೆ ಮಾಡಿದೆ ಎಂದರು.
ಈಗಾಗಲೇ ಘೋಷಣೆ ಮಾಡಿರುವಂತೆ ಮೈಲಾರ-ಕುರುವತ್ತಿ ಸುಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ರು. 32 ಕೋಟಿಗಳ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಮೊದಲ ಕಂತಿನ ರು. 5 ಕೋಟಿ ಬಿಡುಗಡೆಯಾಗಿದೆ. ಆದ್ಯತೆ ಮೇರೆಗೆ ಸುಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ ಮಾಡುವುದಾಗಿ ತಿಳಿಸಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆ ಬಲದಂಡೆ ಕಾಲುವೆಯ 2ನೇ ಹಂತದ ನೀರೆತ್ತುವ ಘಟಕದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಮಾಸಾಂತ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ತಾಲೂಕಿನ ಪ್ರಮುಖ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು, ಉಪ ಮುಖ್ಯಮಂತ್ರಿ ಈಶ್ವರಪ್ಪ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣಸ್ವಾಮಿ ಅವರನ್ನು ಆಹ್ವಾನಿಸಿ, ಅದ್ಧೂರಿ ಸಮಾರಂಭ ನಡೆಸಲು ಯೋಜಿಸಿದ್ದೇನೆ ಎಂದರು.
ಮಹತ್ವದ ನಿರ್ಧಾರ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿರುವ ಚೊಚ್ಚಲ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದು, ಜನಪರ ಬಜೆಟ್ ನೀಡಿದ್ದಾರೆ. ರಾಜ್ಯದಲ್ಲಿ 43 ಹೊಸ ತಾಲೂಕುಗಳ ಘೋಷಣೆ ಮಾಡಿರುವುದು ಆಡಳಿತ ಯಂತ್ರವನ್ನು ಜನತೆಯ ಹತ್ತಿರಕ್ಕೆ ಕೊಂಡೊಯ್ಯುವ ಮಹತ್ವದ ನಿರ್ಧಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗಡ್ಡಿ ಚನ್ನಬಸಪ್ಪ, ಕೆ. ಗೋವಿಂದ ರೆಡ್ಡಿ, ಎನ್. ಕೋಟೆಪ್ಪ, ಸೊಪ್ಪಿನ ಬಸಣ್ಣ, ಗ್ರಾಪಂ ಅಧ್ಯಕ್ಷ ಚನ್ನಬಸವನಗೌಡ, ಎಂ. ಮಾಲತೇಶ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

