ಬಳ್ಳಾರಿ

ರೈತರಿಗೆ ಗಗನ ಕುಸುಮವಾಯಿತು ಪರಿಹಾರ

Published On :

ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 16
ಉತ್ತರ ಕರ್ನಾಟಕ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗೆ ಭೂಮಿ ಕಳೆದುಕೊಂಡ ಅನ್ನದಾತ ಪರಿಹಾರಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದಾನೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಾಡಿಗೆ ಲೋಕಾರ್ಪಣೆ ಮಾಡಿ 6 ತಿಂಗಳು ಕಳೆಯುತ್ತಾ ಬಂದರೂ, ಯೋಜನೆಯ ಕಾಲುವೆ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಮಾತ್ರ ಇನ್ನು ಗಗನ ಕುಸುಮವಾಗಿದೆ.
ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ರೈತರ ಜಮೀನು ಭೂಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ರೈತರ ಜಮೀನಿನಲ್ಲಿ ಗುತ್ತಿಗೆದಾರರು ದೌರ್ಜನ್ಯದಿಂದ ಕಾಲುವೆ ನಿರ್ಮಾಣ ಮಾಡಿದ್ದಾರೆ. ಅರಣ್ಯ, ತೋಟಗಾರಿಕೆ ಇಲಾಖೆಗಳ ಸರ್ವೆ ಮಾಹಿತಿ ವಿಳಂಬದಿಂದ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ತೊಂದರೆ ಉಂಟಾಗಿದೆ ಎನ್ನುತ್ತಾರೆ ವಿಶೇಷ ಭೂಸ್ವಾಧೀನಾಧಿಕಾರಿ.
1200 ಎಕರೆಗೆ ಪರಿಹಾರವಿಲ್ಲ: ಬಲದಂಡೆ ಭಾಗದ ಮಾಗಳ, ಹಿರೇಹಡಗಲಿ, ಹಗರನೂರು, ಕೆ. ಅಯ್ಯನಹಳ್ಳಿ, ಹೂವಿನಹಡಗಲಿ, ನಾಗತಿ ಬಸಾಪುರ, ನಂದಿಹಳ್ಳಿ, ಹೂಳಗುಂದಿ, ದಾಸರಹಳ್ಳಿ, ಮುದೇನೂರು, ರಾಜವಾಳ ಸೇರಿದಂತೆ 11 ಗ್ರಾಮಗಳ ಸಂತ್ರಸ್ತರ ಸುಮಾರು 1200 ಎಕರೆ ಜಮೀನು ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಪರಿಹಾರಕ್ಕಾಗಿ ಬಾಂಡ್ ಪೇಪರ್ ಪಡೆದು ಎಲ್ಲಾ ಪ್ರಕ್ರಿಯೆಗಳು ವಿಶೇಷ ಭೂಸ್ವಾಧೀನಾಧಿಕಾರಿ ಇಲಾಖೆಯಿಂದ ನಡೆದಿವೆ. ಈಗ ಅವಾರ್ಡ್ ಕೂಡ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿ ಶೇಕ್ಷಾವಲಿ.
ಕಾಲುವೆ ನಿರ್ಮಾಣ ಜಮೀನಿನಲ್ಲಿ ಗಿಡ, ಮರ ಮತ್ತು ಬೆಳೆಗಳ ಸರ್ವೆ ಕಾರ್ಯಕ್ಕೆ ಅರಣ್ಯ, ತೋಟಗಾರಿಕೆ ಅಧಿಕಾರಿಗಳ ಸರ್ವೆ ಮುಂಚೆಯೇ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಿಡ, ಮರ ಮತ್ತು ಬೆಳೆಗಳನ್ನು ಕಿತ್ತು ಹಾಕಿದ್ದಾರೆ. ಈ ಕುರಿತು ಗುತ್ತಿಗೆದಾರರು ಕಾಲುವೆ ನಿರ್ಮಾಣ ಸಂದರ್ಭದಲ್ಲಿ ಗಿಡ, ಮರ ಮತ್ತು ಬೆಳೆಗಳ ಭಾವಚಿತ್ರ ತೆಗೆಯಲಾಗಿದೆ. ಅದನ್ನೇ ಸರ್ವೆಗೆ ಬಳಸಿಕೊಂಡಿದ್ದರಿಂದ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ.

ಹೋರಾಟ ಮಾಡಿಲ್ಲ
ಜಮೀನಿನಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ಸುಮಾರು 2 ವರ್ಷ ಕಳೆಯುತ್ತಾ ಬಂದರೂ ಸರ್ಕಾರ ಪರಿಹಾರ ನೀಡುತ್ತಿಲ್ಲ. ನಮ್ಮ ಜಮೀನು ಕಳೆದುಕೊಂಡು ಪರಿಹಾರಕ್ಕೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಭಾಗದ ಬಹು ದೊಡ್ಡ ಯೋಜನೆ ಬೇಗ ಮುಗಿದು ರೈತರಿಗೆ ನೀರು ಸಿಗಲಿ ಎಂಬ ಕಾರಣಕ್ಕೆ ಈವರೆಗೂ ಕಾಲುವೆ ಪರಿಹಾರಕ್ಕಾಗಿ ಹೋರಾಟ ಮಾಡಿಲ್ಲ. ಯೋಜನೆಗೆ ತೊಂದರೆ ಉಂಟು ಮಾಡಿಲ್ಲ.
- ಕೆ.ಬಸಪ್ಪ, ಹನುಮಂತಪ್ಪ, ಪ್ರಕಾಶ, ಮಾಗಳ, ಅಲ್ಲಿಪುರ, ಹಗರನೂರು ಸಂತ್ರಸ್ತರು

ರೈತರ ಮೇಲೆ ಒತ್ತಡವಿಲ್ಲ
ಯೋಜನೆಯ ಕಾಲುವೆ ಕಾಮಗಾರಿ ನಿರ್ಮಾಣಕ್ಕಾಗಿ 4(1) ನೋಟಿಸ್ ನೀಡಿರುವ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು. ಯಾವ ಕಾರಣಕ್ಕೂ ರೈತರ ಮೇಲೆ ಒತ್ತಡ ತಂದು ಗುತ್ತಿಗೆದಾರರು ಕಾಲುವೆ ಕಾಮಗಾರಿ ಮಾಡಿಲ್ಲ. ಸಂಬಂಧಪಟ್ಟ ರೈತರಿಂದ ಒಪ್ಪಿಗೆ ಪಡೆದು ಗುತ್ತಿಗೆದಾರರಿಂದ ಕಾಲುವೆ ಮಾಡಲಾಗಿದೆ.
-ಓದೋ ಗಂಗಪ್ಪ, ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.