ಬಳ್ಳಾರಿ

ತೊಗಲುಗೊಂಬೆ ಬಯಲಾಟ ಅಕಾಡೆಮಿ ವ್ಯಾಪ್ತಿಗೆ ಸೇರಿಸಿ: ಒತ್ತಾಯ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 21
ಪ್ರಾಚೀನ ಕಲಾಪ್ರಕಾರವಾದ ತೊಗಲುಗೊಂಬೆ ಹಾಗೂ ಸೂತ್ರಬೊಂಬೆ ಆಟವನ್ನು ಬಯಲಾಟ ಅಕಾಡೆಮಿ ವ್ಯಾಪ್ತಿಗೆ ಸೇರಿಸಬೇಕು ಎಂದು ತೊಗಲುಗೊಂಬೆ ಕಲಾವಿದ, ನಾಡೋಜ ಪ್ರಶಸ್ತಿ ಪುರಸ್ಕೃತ ಬೆಳಗಲ್ ವೀರಣ್ಣ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊಗಲುಗೊಂಬೆ ಹಾಗೂ ಸೂತ್ರಗೊಂಬೆಯಾಟ ಕಲೆಯನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ 50ಕ್ಕೂ ಹೆಚ್ಚು ತೊಗಲುಗೊಂಬೆ ತಂಡಗಳಿವೆ. ಬಹುತೇಕರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಕಲೆಯನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.ಅಂದಾಗ ಮಾತ್ರ ಈ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದು ಹೇಳಿದರು.
ರಂಗಸಂಭ್ರಮ: ಶ್ರೀರಾಮಾಂಜಿನೇಯ ತೊಗಲುಗೊಂಬೆ ಮೇಳ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಫೆ. 24, 25ರಂದು ಇಲ್ಲಿಯ ರಾಘವ ಕಲಾಮಂದಿರದಲ್ಲಿ 'ರಂಗಸಂಭ್ರಮ' ಹಮ್ಮಿಕೊಂಡಿದೆ. ಫೆ. 24ರಂದು ಸಂಜೆ 5 ಗಂಟೆಗೆ ವಿರಕ್ತಮಠದ ಪ್ರಭುಸ್ವಾಮಿ, ಕ್ರೈಸ್ತ ಸಮುದಾಯದ ಧರ್ಮಗುರು ಹೆನ್ರಿ ಡಿಸೋಜಾ, ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಸಂಚಾಲಕಿ ರಾಜಯೋಗಿನಿ ನಿರ್ಮಲಾಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಕುಲಪತಿ ಡಾ. ಮಂಜಪ್ಪ ಡಿ. ಹೊಸಮನೆ ಕಾರ್ಯಕ್ರಮ ಉದ್ಘಾಟಿಸುವರು ಎಂದು ವೀರಣ್ಣ ಹೇಳಿದರು.
'ಕರ್ನಾಟಕದ ತೊಗಲುಗೊಂಬೆ ಮತ್ತು ವಿದೇಶಿ ಬೊಂಬೆಯಾಟ ಪ್ರಕಾರಗಳ ಒಂದು ಅವಲೋಕನ' ಕುರಿತು ಉಡುಪಿ ಜಾನಪದ ಮುಖ್ಯ ಸಂಶೋಧನಾ ತಜ್ಞ ಡಾ. ಎಸ್.ಎ. ಕೃಷ್ಣಯ್ಯ ವಿಚಾರ ಸಂಕಿರಣ ನಡೆಸಿಕೊಡುವರು. ಜಾನಪದ ವಿವಿಯ ಡಾ. ಎಂ.ಎನ್. ವೆಂಕಟೇಶ ಅವರು 'ತೊಗಲುಗೊಂಬೆ ಪಠ್ಯ ರಚನೆ, ಕಲಿಕೆ ಮತ್ತು ಅಳವಡಿಕೆ ಸಾಧ್ಯತೆ' ಕುರಿತು ವಿಶೇಷ ಉಪನ್ಯಾಸ ನೀಡುವರು. ಬಳಿಕ 'ವೀರ ಅಭಿಮನ್ಯು ಹಾಗೂ ಗಾರ್ಧಪ ಮನುಷ್ಯ' ಪ್ರಹಸನ ಕುರಿತು ತೊಗಲುಗೊಂಬೆಯಾಟ ಪ್ರದರ್ಶನ ನಡೆಯಲಿದೆ. ಫೆ. 25ರಂದು 'ತೊಗಲುಗೊಂಬೆಯಾಟ ಆಧುನಿಕ ಪ್ರಯೋಗಗಳು ಹಾಗೂ ನೂತನ ಆವಿಷ್ಕಾರಗಳ ಸಾಧ್ಯತೆ' ಕುರಿತು ಜಾನಪದ ವಿದ್ವಾಂಸ ಡಾ. ರಂಗಾರೆಡ್ಡಿ ಕೋಡಿರಾಂಪುರ ಹಾಗೂ 'ತೊಗಲುಗೊಂಬೆಯಾಟ ಪ್ರೇಕ್ಷಕರು, ನಿನ್ನೆ, ಇಂದು, ನಾಳೆ' ಕುರಿತು ದಾವಣಗೆರೆಯ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಉಪನ್ಯಾಸ ನೀಡಲಿದ್ದಾರೆ. ಕೊನೆಯಲ್ಲಿ 'ನರಕಾಸುರ ವಧೆ' ಹಾಗೂ 'ಲಂಕಾದಹನ' ತೊಗಲುಗೊಂಬೆ ಪ್ರದರ್ಶನ ನಡೆಸಲಾಗುತ್ತದೆ.  ಇದೇ ವೇಳೆ ಹಲವು ಕಲಾವಿದರನ್ನು ಸನ್ಮಾನಿಸಲಾಗುತ್ತದೆ ಎಂದು ಅವರು ಹೇಳಿದರು. ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ್, ಪ್ರಕಾಶಕ ಸಿ. ಮಂಜುನಾಥ್, ರಾಮಾಂಜಿನೇಯ ತೊಗಲುಗೊಂಬೆ ತಂಡದ ಪ್ರಕಾಶ್ ಬೆಳಗಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.