ಗಣಿಗಾರಿಕೆ ನಿಂತರೂ ಆದಾಯ ಅಗಣಿತ!
ಬಳ್ಳಾರಿ: ರಾಜ್ಯದಲ್ಲಿ ಗಣಿಗಾರಿಕೆ ನಿಂತು ಗಣಿ ಮಾಲೀಕರಿಗೆ ಆದಾಯ ಇಲ್ಲವಾಗಿರಬಹುದು. ಆದರೆ, ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಮಾತ್ರ ನಿಂತಿಲ್ಲ!
ಗಣಿಗಾರಿಕೆ ನಡೆಯುತ್ತಿರುವಾಗ ಬರುವ ಆದಾಯಕ್ಕಿಂತ ಗಣಿ ನಿಂತ ಮೇಲೆ ಇ- ಹರಾಜಿನಿಂದಾಗಿ ದುಪ್ಪಟ್ಟು ಆದಾಯ ರಾಜ್ಯದ ಬೊಕ್ಕಸಕ್ಕೆ ಅದಿರು ಮಾರಾಟದಿಂದ ಹರಿದುಬಂದಿದೆ. ಕೇವಲ 16 ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ರಾಜಸ್ವ, ಅರಣ್ಯ ಅಭಿವೃದ್ಧಿ ತೆರಿಗೆ, ವಾಣಿಜ್ಯ ತೆರಿಗೆ ಸೇರಿದಂತೆ 2491.91 ಕೋಟಿ ಆದಾಯ ಬಂದಿದೆ. 37.93 ಮಿಲಿಯನ್ ಟನ್ ಅದಿರನ್ನು 8,866 ಕೋಟಿಗಳಿಗೆ ಇ- ಹರಾಜಿನ ಮೂಲಕ ಮಾರಾಟ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಮಾನಿಟರಿಂಗ್ ಕಮಿಟಿ ಮಾಡಿದ ಇ-ಹರಾಜು ಅದಿರು ಮಾರಾಟದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬಂದಿದೆ. ಈ ಹಿಂದೆ ಗಣಿ ಮಾಲೀಕರು ಸ್ವತಂತ್ರವಾಗಿ ಅದಿರನ್ನು ಮುಕ್ತವಾಗಿ ಮಾರಾಟ ಮಾಡುತ್ತಿದ್ದರು. ಅಂಥ ಸಂದರ್ಭದಲ್ಲಿ ತೆರಿಗೆಗಳ್ಳನತ ಹೆಚ್ಚಾಗುತ್ತಿದ್ದು, ಅಂಡರ್ ಇನ್ವಾಯಿಸ್, ಓವರ್‌ಲೋಡ್‌ಗಳಿಂದಾಗಿ ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಸೋರಿಕೆಯಾಗುತ್ತಿತ್ತು. ಇದೀಗ ಇ-ಹರಾಜು ಪ್ರಕ್ರಿಯೆ ಇಂಥ ಅಕ್ರಮಗಳಿಗೆ ತಡೆಯೊಡ್ಡುವ ಮೂಲಕ ಸಾಕಷ್ಟು ಆದಾಯ ತಂದು ಕೊಟ್ಟಿದೆ. ಇದರಿಂದಾಗಿ ಕೇವಲ ಅಕ್ರಮ ಗಣಿಗಾರಿಕೆಯಿಂದಾಗಿ ಅದಿರು ಉತ್ಪಾದನೆ ಮಾತ್ರವಲ್ಲದೆ ಮಾರಾಟದಲ್ಲಿನ ಅಕ್ರಮದಿಂದಲೂ ರಾಜ್ಯ ಸರ್ಕಾರಕ್ಕೆ ಸಾಕಷ್ಟು ನಷ್ಟವನ್ನು ಗಣಿ ಲಾಬಿ ಉಂಟು ಮಾಡಿತ್ತು ಎಂಬ ಅಂಶ ಬೆಳಕಿಗೆ ಬಂದಂತಾಗಿದೆ.
37.93 ಮಿಲಿಯನ್ ಮೆಟ್ರಿಕ್ ಟನ್ ಅದಿರು ಮಾರಾಟ: ಸೆಪ್ಟೆಂಬರ್ 11, 2011ರಿಂದ ಜನವರಿ 31, 2013ರವರೆಗೆ 16 ತಿಂಗಳಲ್ಲಿ 103 ಇ-ಹರಾಜು ಪ್ರಕ್ರಿಯೆ ಮೂಲಕ 8,866 ಕೋಟಿ ಮೌಲ್ಯದ 37.93 ಮಿಲಿಯನ್ ಮೆಟ್ರಿಕ್ ಟನ್ ಅದಿರು ಮಾರಾಟ ಮಾಡಲಾಗಿದೆ. ಅದರಲ್ಲಿ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿನ ಗಣಿ ಗುತ್ತಿಗೆ ಪ್ರದೇಶ, ಸ್ಟಾಕ್‌ಯಾರ್ಡ್‌ನಲ್ಲಿರುವ 27.85 ಮಿಲಿಯನ್ ಮೆಟ್ರಿಕ್ ಟನ್ ಇನ್ನುಳಿದಂತೆ ಎನ್‌ಎಂಡಿಸಿಯಲ್ಲಿ ಉತ್ಪಾದಿಸಿದ 10.08 ಮಿಲಿಯನ್ ಮೆಟ್ರಿಕ್ ಟನ್ ಅದಿರನ್ನು ಮಾರಾಟ ಮಾಡಲಾಗಿದೆ.
ಸರ್ಕಾರಕ್ಕೆ ಹರಿದು ಬಂದ ಆದಾಯ: 103 ಬಾರಿ ನಡೆದ ಇ-ಹರಾಜಿನಲ್ಲಿ 37.93 ಮಿಲಿಯನ್ ಮೆಟ್ರಿಕ್ ಟನ್ ಮಾರಾಟದಿಂದಾಗಿ ಸರ್ಕಾರಕ್ಕೆ ರಾಜಸ್ವ ರೂಪದಲ್ಲಿ 842.27 ಕೋಟಿ, ಅರಣ್ಯ ಅಭಿವೃದ್ಧಿ ತೆರಿಗೆ 833.87 ಕೋಟಿ, ವಾಣಿಜ್ಯ ತೆರಿಗೆ 815.77 ಕೋಟಿ ಆದಾಯ ಹರಿದು ಬಂದಿದೆ. ಇ-ಹರಾಜಿನಲ್ಲಿ ಪ್ರತಿ ಟನ್ ಅದಿರು ಸರಾಸರಿ 2455ಗಳಿಗೆ ಮಾರಾಟವಾಗಿದೆ. ಇನ್ನು ಇ-ಹರಾಜಿನ ಪೂರ್ವದ ಮುಕ್ತ ಮಾರಾಟದಲ್ಲಿ ಪ್ರತಿ ಟನ್ ಅದಿರಿಗೆ 179 ರಾಜಸ್ವ ನಿಗದಿಯಾಗಿದ್ದರೆ, ಇ-ಹರಾಜಿನ ಮಾರಾಟದಲ್ಲಿ ಪ್ರತಿ ಟನ್ ಅದಿರಿಗೆ 340ಗೆ ನಿಗದಿ ಮಾಡಲಾಗಿದೆ. 2010-11ರಲ್ಲಿ 33.75 ಮಿಲಿಯನ್ ಟನ್ ಅದಿರು ಮಾರಾಟದಿಂದಾಗಿ ಕೇವಲ 434.764 ಕೋಟಿ ರಾಜಸ್ವ ಸರ್ಕಾರಕ್ಕೆ ಬಂದಿತ್ತು. ಇದೀಗ ಅದು ದುಪ್ಪಟ್ಟಾಗಿದೆ.
ಇ-ಹರಾಜಿನ ಮೂಲಕವೇ ಮಾರಾಟ: ಎ ಮತ್ತು ಬಿ ಕೆಟಗರಿಯಲ್ಲಿ ಬರುವ ಗಣಿ ಕಂಪನಿಗಳು ಉತ್ಪಾದಿಸುವ ಅದಿರನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಬೇಕು, ಇದು ಮಾನಿಟರಿಂಗ್ ಕಮಿಟಿಯ ಉಸ್ತುವಾರಿಯಲ್ಲಿ ನಡೆಯಬೇಕು ಅಂದಾಗ ಮಾತ್ರ ತೆರಿಗೆಗಳ್ಳತನ, ಅಂಡರ್ ಇನ್ವಾಯಿಸ್, ಓವರಲೋಡ್ ತಡೆಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇ-ಹರಾಜಿನಲ್ಲಿ ಪ್ರಕ್ರಿಯೆ ಮಾರಾಟ ಮಾಡುವುದಕ್ಕೆ ಸೂಚನೆ ನೀಡಬೇಕೆಂದು ಸಿಇಸಿ ಸುಪ್ರೀಂ ಕೋರ್ಟ್‌ಗೆ ಫೆ.15ರಂದು ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. ಇದೀಗ ಆರಂಭವಾಗಿರುವ ಗಣಿ ಕಂಪನಿಗಳಿಂದ ಉತ್ಪಾದಿಸಿದ ಅದಿರನ್ನು ಕೂಡ ಇ-ಹರಾಜಿನಲ್ಲಿ ಮಾರಾಟ ಮಾಡಬೇಕು ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಮುಂಗಡ ಇ-ಹರಾಜು ಪ್ರಕ್ರಿಯೆ: ರಾಷ್ಟ್ರೀಯ ಖನಿಜಾಭಿವೃದ್ಧಿ ಮಂಡಳಿ (ಎನ್‌ಎಂಡಿಸಿ)ಯಲ್ಲಿ ಉತ್ಪಾದಿಸುವ ಅದಿರನ್ನು ಮುಂಗಡ ಇ-ಹರಾಜಿನ ಮೂಲಕ ಮಾರಾಟ ವ್ಯವಸ್ಥೆ ಮಾಡಬೇಕು, ಜ.29ರಂದು ನವದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಮುಂಗಡ ಇ-ಹರಾಜಿನ ಮಾರಾಟದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಡೂರಿನ ದೋಣಿಮಲೈನ ಎನ್‌ಎಂಡಿಸಿ ಇತರ ಕಡೆಗಳಲ್ಲಿ ಇಂಥ ವ್ಯವಸ್ಥೆ ಬಗ್ಗೆ ಸಿಇಸಿ ತನ್ನ ವರದಿಯಲ್ಲಿ ತಿಳಿಸಿದೆ. ಗಣಿ ಕಂಪನಿಗಳ ಪ್ರದೇಶದಲ್ಲಿರುವ ಡಂಪ್‌ನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಬೇಕು ಎಂಬ ವಿಷಯವನ್ನು ಸಿಇಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಈ ಕುರಿತಾದ ವಿಚಾರ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಯ ಹಂತದಲ್ಲಿದೆ. ಒಟ್ಟಾರೆಯಾಗಿ ಗಣಿಗಾರಿಕೆಯು ಸರ್ಕಾರದ ಆದಾಯದ ಮೂಲದಲ್ಲಿ ಒಂದಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

