ಸೀಳು ತುಟಿಗೆ ಉಚಿತ ಚಿಕಿತ್ಸೆ: ಶ್ಲಾಘನೆ
ಕನ್ನಡಪ್ರಭ ವಾರ್ತೆ, ಬಳ್ಳಾರ, ಜ. 21
ಸೀಳುತುಟಿ ಸಮಸ್ಯೆ ಎದುರಿಸುತ್ತಿರುವ ಚಿಕ್ಕ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಿ ನಿವಾರಣೆ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಹೇಳಿದರು.
ಭಾನುವಾರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಚಿತ ಸೀಳುತುಟಿ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟಿನಿಂದಲೇ ಸೀಳುತುಟಿ, ಗಂಟಲು ಸೀಳುವಿಕೆಗಳ ಸಮಸ್ಯೆಗಳನ್ನು ಎದುರಿಸುತ್ತಿರುವವರು ವಯಸ್ಸಿಗೆ ಬಂದಾಗ ಜೀವನದಲ್ಲಿ ತೊಂದರೆಯಗಳನ್ನು ಎದುರಿಸುತ್ತಾರೆ. ಲಯನ್ಸ್ ಕ್ಲಬ್ ಸೀಳುತುಟಿ, ಗಂಟಲು ಸೀಳುವಿಕೆಯ ಸಮಸ್ಯೆ ಇರುವವರನ್ನು ಗುರುತಿಸಿ, ಚಿಕ್ಕವಯಸ್ಸಿನಲ್ಲಿ ಇಂತಹ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು ಶ್ಲಾಘನೀ ಕಾರ್ಯ ಎಂದರು.
ಐದಾರು ವರ್ಷಗಳಿಂದ ಉಚಿತ ಸೀಳುತುಟಿ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಕ್ಲಬ್ ಹಮ್ಮಿಕೊಳ್ಳತ್ತಿದ್ದು, 400ಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳುವಂತೆ ತಿಳಿಸಿದರಲ್ಲದೆ, ಈ ನಿಟ್ಟಿನಲ್ಲಿ ಬೇಕಾಗುವ ಆರ್ಥಿಕ ನೆರವನ್ನು ಸಂಸದರ, ಶಾಸಕರ ನಿಧಿ, ಪಾಲಿಕೆ ಅನುದಾನ ಅಥವಾ ವೈಯಕ್ತಿಕವಾಗಿ ಬೇಕಾದರೂ ಒದಗಿಸಲಾಗುತ್ತದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೈಲಾಸ್ ಜೈನ್ ಮಾತನಾಡಿ, 7 ವರ್ಷಗಳಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೆ 400 ಮಕ್ಕಳಿಗೆ ಉಚಿತವಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಡಿಸಲಾಗಿದ್ದು, ದೇಶದ ಯಾವುದೇ ಮೂಲೆಗಳಿಂದ ಸಂಪರ್ಕಿಸಿ ಬಂದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬಾರಿಯ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಂಧ್ರಪ್ರದೇಶದ ಪೆನುಗೊಂಡ, ರಾಯದುರ್ಗಂ, ಮೊಳಕಾಲ್ಮೂರು, ಹಗರಿಬೊಮ್ಮನಹಳ್ಳಿ, ಹುಬ್ಬಳ್ಳಿ, ಇತರೆ ಜಿಲ್ಲೆಗಳಿಂದ ಶಿಬಿರಕ್ಕೆ ಆಗಮಿಸಿದ್ದಾರೆ ಎಂದು ವಿವರಿಸಿದರು.
ಸಂಸದೆ ಜೆ. ಶಾಂತಾ, ಪಾಲಿಕೆ ಮೇಯರ್ ಇಬ್ರಾಹಿಂಬಾಬು, ಮಾಜಿ ಉಪಮೇಯರ್ ಶಶಿಕಲಾ ಮಾತನಾಡಿದರು. 160ಕ್ಕೂ ಹೆಚ್ಚು ಮಕ್ಕಳಿಗೆ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಪಮೇಯರ್ ಗೋವಿಂದರಾಜುಲು, ಜುವಾರಿ ಸಿಮೆಂಟ್ ಪ್ರಾದೇಶಿಕ ವ್ಯವಸ್ಥಾಪಕ ಚೇಳ್ಳಗುರ್ಕಿ ಪಂಪನಗೌಡ ಮತ್ತಿತರೆ ಲಯನ್ಸ್ ಕ್ಲಬ್ನ ಸದಸ್ಯರು ಇದ್ದರು. ಕಾರ್ಯದರ್ಶಿ ಕೈಲಾಸ್ ಜೈನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

