ಸ್ಥಳಾಂತರ ಎಡವಟ್ಟು ಅಭಿವೃದ್ಧಿಗೆ ಬಿಕ್ಕಟ್ಟು
ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 24
ನೆರೆ ಸಂತ್ರಸ್ತರಿಗೆ ಆಸರೆಯಾಗಬೇಕಿದ್ದ ಸರ್ಕಾರದ ಯೋಜನೆ ಮೂರು ವರ್ಷ ಕಳೆದರೂ ನಿರ್ಮಾಣಗೊಂಡಿಲ್ಲ. ಸಂತ್ರಸ್ತರು ಅಳಿದುಳಿದ ಮನೆಗಳಲ್ಲೇ ಆಸರೆ ಪಡೆದುಕೊಳ್ಳಬೇಕಿದೆ.
ತಾಲೂಕಿನ ಮಾಗಳ ಗ್ರಾಮದ ಬಸ್ತಿ ಓಣಿ ಮತ್ತು ಬ್ಯಾಡರಗೇರಿ ಓಣಿಗಳ ಸಂತ್ರಸ್ತರಿಗೆ ಅತ್ತ ಆಸರೆಯೂ ಇಲ್ಲ, ಇತ್ತ ಮೂಲ ಗ್ರಾಮದಲ್ಲಿ ಚರಂಡಿ, ರಸ್ತೆ, ಬೀದಿ ದೀಪ, ಕುಡಿವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಗ್ರಾಪಂ ಕೈಗೊಂಡಿಲ್ಲದ ಕಾರಣ ಬಸ್ತಿ ಓಣಿ, ಬ್ಯಾಡರಗೇರಿ ಸಂತ್ರಸ್ತರು ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ.
ತಾಲೂಕಿನ ಮಾಗಳ ಗ್ರಾಮವನ್ನು ಸುವರ್ಣ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಕೆಲ ಕಡೆಗಳಲ್ಲಿ ಮಾತ್ರ ಸಿಸಿ ರಸ್ತೆ, ಚರಂಡಿಗಳನ್ನು ಮಾಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ಬಸ್ತಿ ಓಣಿ, ಬ್ಯಾಡರಗೇರಿ ಗ್ರಾಮಗಳಲ್ಲಿ ಚರಂಡಿ, ಸಿಸಿ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾಡಿಲ್ಲ.
ಅದೇ ಕೊಳಗೇರಿಯಂತಿರುವ ಪ್ರದೇಶವೇ ಸಂತ್ರಸ್ತರಿಗೆ ಗತಿಯಾಗಿದೆ. ಈ ಕುರಿತು ಅನೇಕ ಬಾರಿ ಸಂತ್ರಸ್ತರು ಅಭಿವೃದ್ಧಿ ಮಾಡಲು ಪಂಚಾಯ್ತಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
ಮನೆ ಕಟ್ಟಲು ಅನುಮತಿ ಇಲ್ಲ: ಇಡೀ ಎರಡು ಓಣಿಗಳಲ್ಲಿನ ಸಂತ್ರಸ್ತರು ತಮ್ಮ ಆಸ್ತಿ ಬಿಟ್ಟು ಹೋಗಲು ನಿರಾಕರಿಸಿದ್ದಾರೆ. ಆಸರೆ ಯೋಜನೆಯಡಿ ಸ್ಥಳಾಂತರ ಬೇಡ, ತಾವು ಮನೆ ಮಠ ಬಿಟ್ಟು ಹೋಗುವುದಿಲ್ಲ, ಸರ್ಕಾರ ತಮ್ಮ ಆಸ್ತಿಗಳಿಗೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸುತ್ತೇವೆಂದು ಸಂತ್ರಸ್ತರಾದ ಎಸ್.ಆರ್. ಹಿರೇಗೌಡರ್, ಅಣ್ಣಾಜಿ ಯಶೋಧರಗೌಡ, ಕವಸರ ಮಂಜುನಾಥ, ಕೆ. ಸತ್ಯನಾರಾಯಣ ರೆಡ್ಡಿ ಸೇರಿದಂತೆ ಇತರರು 'ಕನ್ನಡಪ್ರಭ'ದ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಸರ್ಕಾರ ಮಂಜೂರು ಮಾಡಿರುವ ಬಸವ ವಸತಿ ಮನೆಗಳು ಮತ್ತು ಕೆಲವರು ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಗ್ರಾಪಂ ಪರವಾನಿಗೆ ನೀಡುತ್ತಿಲ್ಲ. ಕುಡಿವ ನೀರಿನ ನಳ ಸಂಪರ್ಕ ನೀಡುತ್ತಿಲ್ಲ, ರಸ್ತೆ ಅಭಿವೃದ್ಧಿ ಇಲ್ಲ, ಚರಂಡಿ ವ್ಯವಸ್ಥೆ ಮಾಡಿಲ್ಲ, ಒಟ್ಟಾರೆ ಯಾವುದೇ ಅಭಿವೃದ್ಧಿ ಮಾಡಿಲ್ಲ, ಓಣಿ ಅಭಿವೃದ್ಧಿಗೆ ಬಂದ ಅನುದಾನವನ್ನು ಬೇರೆಡೆ ವರ್ಗಾಯಿಸಿದ್ದಾರೆಂದು ಸಂತ್ರಸ್ತರು ದೂರಿದ್ದಾರೆ.
ಸಂತ್ರಸ್ತರ ನೋವು ಆಲಿಸಿಲ್ಲ: ಸಂತ್ರಸ್ತರ 556 ಆಸರೆ ಮನೆಗಳಲ್ಲಿ 100 ಮನೆಗಳು ಮಾತ್ರ ಪೂರ್ಣವಾಗಿವೆ. ಉಳಿದ 456 ಮನೆಗಳ ನಿರ್ಮಾಣದ ಹೊಣೆಯನ್ನು ಸರ್ಕಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಿದೆ. ಸ್ಥಳಾಂತರಕ್ಕೆ ತೀವ್ರ ವಿರೋಧದ ನಡುವೆಯೂ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಈವರೆಗೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಂತ್ರಸ್ತರ ನೋವು ಆಲಿಸಿಲ್ಲ.
ಆದ್ದರಿಂದ ಗ್ರಾಪಂಗೆ ಬೀಗ ಹಾಕಿ ಪ್ರತಿಭಟಿಸುವ ನಿರ್ಧಾರಕ್ಕೆ ಬರಲಾಗಿದೆ ಎನ್ನುತ್ತಾರೆ. ಈ ಕುರಿತಾಗಿ ತಹಸೀಲ್ದಾರ್ ಇಜಾಜ್ ಬೇಗ್ ಅವರನ್ನು ಸಂಪರ್ಕಿಸಿದಾಗ, ಈಗಾಗಲೇ 100 ಮನೆಗಳು ನಿರ್ಮಾಣ ಮಾಡಲಾಗಿದೆ.
ಉಳಿದ ಮನೆಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಅವರು ನಿರ್ಮಾಣ ಮಾಡುತ್ತಿದ್ದಾರೆ. ವಾರದೊಳಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ಮಾಡುತ್ತೇವೆ ಎನ್ನುತ್ತಾರೆ. ಪ್ರಭಾರಿ ಇಓ ಹನುಮಂತ ರೆಡ್ಡಿ, ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸುತ್ತೇವೆ, ಅವರು ಕ್ರಮ ಕೈಗೊಳ್ಳುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

