ಬಳ್ಳಾರಿ

ವೀರಶೈವರದ್ದು ಅನ್ಯರ ಮನೆ ಕಾಯೋ ಸ್ಥಿತಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 1
ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ವೀರಶೈವ ಸಮಾಜದವರು ಇದೀಗ ಬೇರೆಯವರ ಮನೆ ಕಾಯುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ರಾಯಚೂರು ನಗರ ಶಾಸಕ ಡಾ.ಎಸ್. ಶಿವರಾಜ್ ಪಾಟೀಲ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಸೋಮವಾರ ನಗರದ ಬಸವ ಭವನದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಲಾಳಗೊಂಡರ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಬೃಹತ್ ಸಮಾವೇಶ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ವೀರಶೈವ ಸಮಾಜವೇ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತಿತ್ತು. ಆದರೆ ಇದೀಗ ವೀರಶೈವ ಸಮಾಜದವರು ರಾಜಕೀಯದಲ್ಲಿ ಬೇರೆಯವರ ಮನೆ ಬಾಗಿಲನ್ನು ಕಾಯುವ ಪರಿಸ್ಥಿತಿ ಬಂದಿರುವುದು ಶೋಚನೀಯ. ರಾಜ್ಯದಲ್ಲಿ ವೀರಶೈವ ಸಮಾಜಕ್ಕೆ ದೊಡ್ಡ ಶಕ್ತಿ ಇದೆ. ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.
ಮತದಾನ ಮಾಡಿ: ವೀರಶೈವರು ಮತ ಚಲಾಯಿಸಲು ಆಸಕ್ತಿ ತೋರಬೇಕು. ಶೇ. 100ರಷ್ಟು ಮತದಾನ ಮಾಡಿದರೆ ಮಾತ್ರ ನಮ್ಮ ಸಮಾಜದ ಅಸ್ತಿತ್ವ ಏನೆಂಬುದು ಗೊತ್ತಾಗುತ್ತದೆ. ಮತಗಟ್ಟೆಗಳಿಗೆ ಹೋಗಿ ಮತ ಹಾಕದಿರುವುದು ಅನ್ಯರಿಗೆ ಅನುಕೂಲವಾಗಿ, ಸಮಾಜ ರಾಜಕೀಯವಾಗಿ ಹಿಂದುಳಿಯಲು ಕಾರಣ. ಸಮಾಜವರು ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗಿ, ವೀರಶೈವ ಧರ್ಮ ಗಟ್ಟಿಗೊಳಿಸಲು ಸಮಾಜದವರು ಪ್ರಯತ್ನಿಸಬೇಕು ಎಂದರು.
ನಿರ್ಲಕ್ಷ್ಯ ಬೇಡ: ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಸಂಗನಬಸವ ಸ್ವಾಮೀಜಿ ಮಾತನಾಡಿ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಲಾಳಗೊಂಡ ಸಮಾಜವನ್ನು ವೀರಶೈವ ಮಠಾಧಿಪತಿಗಳು, ಮಹಾಸಭಾ ಗುರುಗಳು ನಿರ್ಲಕ್ಷ್ಯ ಮಾಡಿರುವುದು ವಿಷಾದನೀಯ ಸಂಗತಿ. ವೀರಶೈವ ಒಳಪಂಗಡಗಳಲ್ಲಿ ಸಾಕಷ್ಟು ಹಿಂದುಳಿದವರು ಇದ್ದಾರೆ. ಅದರಲ್ಲೂ ಲಾಳಗೊಂಡ ಸಮಾಜ ತೀರಾ ಹಿಂದುಳಿದಿದೆ. ಕೆಲವರು ದಯನೀಯ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ವೀರಶೈವ ಸಮಾಜ ಚಿಂತನೆ ಮಾಡಬೇಕಿತ್ತು ಎಂದು ತಿಳಿಸಿದರು.
ಡಾ.ಎಸ್. ಶಿವರಾಜ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಲಾಳಗೊಂಡರ ಸಂಘದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ ಮಾತನಾಡಿದರು. ಸಂಡೂರಿನ ಶ್ರೀ ಪ್ರಭುಸ್ವಾಮಿ, ಕಲ್ಯಾಣಸ್ವಾಮಿ ಸ್ವಾಮೀಜಿ, ಕಂಪ್ಲಿಯ ಶ್ರೀ ಅಭಿನವ ಪ್ರಭುಸ್ವಾಮಿ, ಅರಳಹಳ್ಳಿಯ ಶ್ರೀ ಗವಿಸಿದ್ದಯ್ಯ ತಾತ, ಸಿಂಧನೂರಿನ ಶ್ರೀ ಸಿದ್ದರಾಮೇಶ್ವರ ಶರಣರು, ಸಮಾಜದ ಮುಖಂಡರಾದ ಅರವಿ ಶಂಕರಗೌಡ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಜಿಪಂ ಸದಸ್ಯ ಗೋನಾಳ ರಾಜಶೇಖರಗೌಡ, ವಸಂತಕುಮಾರ್, ವೀವಿ ಸಂಘದ ಕಾರ್ಯದರ್ಶಿ ಗುರು ಸಿದ್ದಸ್ವಾಮಿ, ಡಾ.ಸಿ. ಎರ್ರೆಪ್ಪ, ಲಾಳಗೊಂಡರ ಸಂಘದ ಜಿಲ್ಲಾಧ್ಯಕ್ಷ ಎಂ.ಎಸ್. ಸೋಮಲಿಂಗನಗೌಡ, ಜಿ. ಮಹಾಲಿಂಗಯ್ಯ, ಎಚ್. ಮಲ್ಲನಗೌಡ, ಮೇಟಿ ಪಂಪನಗೌಡ, ಗೆಣಿಕೆಹಾಳ ಶಾಂತಪ್ಪ, ದರೂರು ಪುರುಷೋತ್ತಮಗೌಡ, ಎಚ್. ಬಾಳನಗೌಡ, ಆರ್. ರಾಮನಗೌಡ, ಆರ್. ಎರ್ರೆಣ್ಣ, ಮೀನಳ್ಳಿ ವೀರಭದ್ರಪ್ಪ, ಮೀನಳ್ಳಿ ಚಂದ್ರಶೇಖರಗೌಡ ಇತರರು ಇದ್ದರು.
ಯಲ್ಲನಗೌಡ ಶಂಕರ ಬಂಡೆ ತಂಡ ಗಾಯನ ನಡೆಸಿಕೊಟ್ಟರು. ನಿಹಾರಿಕಾ ಭರತನಾಟ್ಯ ಪ್ರದರ್ಶನ ನೀಡಿದರು. ಡಾ.ಎ. ಚನ್ನಪ್ಪ ಸ್ವಾಗತಿಸಿ, ನಿರೂಪಿಸಿದರು. ಅಸುಂಡಿ ನಾಗರಾಜಗೌಡ ವಂದಿಸಿದರು. ಗೊಂಡ್ವಾನ ಸಂಸ್ಕೃತಿ (ಸಿಂಧು ಸಂಸ್ಕೃತಿ) ಗ್ರಂಥ ಪುನರ್ ಲೋಕಾರ್ಪಣೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.