ಬಳ್ಳಾರಿ

ಪಕ್ಷೇತರ ಶಾಸಕನಿಂದಲೂ ಹೆಚ್ಚು ಕಾರ್ಯ

Published On :

ಕೂಡ್ಲಿಗಿ: ಪಕ್ಷೇತರ ಶಾಸಕನಾಗಿರುವುದರಿಂದ ಕೆಲಸ ಕಡಿಮೆಯಾಗುತ್ತವೆ ಎಂದು ಭಾವಿಸಬೇಡಿ. ಕಳೆದ ಬಾರಿಗಿಂತ ಹತ್ತು ಪಟ್ಟು ಹೆಚ್ಚು ಕ್ಷೇತ್ರದಲ್ಲಿ ಕೆಲಸ ಮಾಡುವೆ. ಹೀಗಾಗಿ ಅಧಿಕಾರಿಗಳು ಯಾವುದೇ ರಾಜಕೀಯ ಮಾಡದೇ ಅಭಿವೃದ್ಧಿ ಕಾರ್ಯ ಮಾಡಲು ಎಲ್ಲರೂ ಕೈ ಜೋಡಿಸಿ. ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ ಎಂದು ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ಹೇಳಿದರು.
ಅವರು ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಅತ್ಯಂತ ಹಿಂದುಳಿದ ತಾಲೂಕು ಆಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ತಾಲೂಕುಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಎಲ್ಲ ರೀತಿಯಿಂದಲೂ ಅನುದಾನ ತರುವೆ. ನಿಮಗೆ ಯಾವುದೇ ಗೊಂದಲ ಬೇಡ. ಕೆಲಸ ಮಾಡಲು ನೀವು ಸಿದ್ಧರಾಗಿರಿ ಎಂದು ಅಧಿಕಾರಿಗಳಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದರು.
ಕ್ಷೇತ್ರದಲ್ಲಿ ಸಂಚರಿಸಿ: ತಾಲೂಕು ಮಟ್ಟದ ಅಧಿಕಾರಿಗಳ ಕ್ರಿಯಾಶೀಲ ಕರ್ತವ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಅಧಿಕಾರಿ ಕ್ಷೇತ್ರಾದ್ಯಂತ ಸಂಚರಿಸಿ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಬೇಕು. ಎರಡನೇ ಬಾರಿ ಶಾಸಕನಾಗಿದ್ದು, ಕಳೆದ ಸಲಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಶುದ್ಧ ಕುಡಿವ ನೀರು, ರಸ್ತೆ, ನೈರ್ಮಲ್ಯ, ವಸತಿ, ಆರೋಗ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ತೀವ್ರಗತಿಯಲ್ಲಿ ಸಾಗಬೇಕಿದೆ. ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಮಗಾರಿಯತ್ತ ಆಸಕ್ತಿ ವಹಿಸಿ: ಸ್ವತಂತ್ರ ಅಭ್ಯರ್ಥಿ ಶಾಸಕನಾದರೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸುವ ಭರವಸೆಯಿದೆ. ಹೆಚ್ಚಿನ ಆಸಕ್ತಿಯಿಂದ ಅಭಿವೃದ್ಧಿ ಕಾಮಗಾರಿಗಳತ್ತ ಗಮನ ಹರಿಸಬೇಕು. ಕಳೆದ ಸಲ ಕ್ಷೇತ್ರಕ್ಕೆ ಬಸವ, ಇಂದಿರಾ ಆವಾಸ್ ಯೋಜನೆ ಸೇರಿ ಅನೇಕ ಯೋಜನೆಗಳಲ್ಲಿ ನಾಲ್ಕು ಸಾವಿರ ಮನೆಗಳು ಮುಂಜೂರು ಮಾಡಿಸಲಾಗಿತ್ತು. ಆಯ್ಕೆಪಟ್ಟಿ ಗೊಂದಲದಿಂದ ಕುಂಠಿತಗೊಂಡಿರುವುದು, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಹತ್ತು ದಿನಗಳಲ್ಲಿ ಎಲ್ಲ ಗ್ರಾಪಂಗಳಲ್ಲಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ವೃದ್ಧಿಗಾಗಿ ಚೆಕ್‌ಡ್ಯಾಂ ನಿರ್ಮಾಣಕ್ಕೆ ಬೇಕಾದ ಅನುದಾನ ಕಲ್ಪಿಸಲು ಸಿದ್ಧರಿದ್ದು, ತಾಲೂಕಿನ ಹಳ್ಳ, ಕೊಳ್ಳಗಳ ಸರ್ವೇ ಮಾಡಿ ವರದಿ ಸಲ್ಲಿಸಿದರೆ ಪ್ರತಿ 5 ಕಿ.ಮೀ. ಗೊಂದು ಚೆಕ್‌ಡ್ಯಾಂ ನಿರ್ಮಿಸಬಹುದು ಎಂದರು.
ತಾಲೂಕಿನ ಅನೇಕ ಹಳ್ಳಿಗಳಲ್ಲಿ ಕಲುಷಿತ ನೀರು ಸೇವನೆಯಿಂದ ಕಾಲರಾ ಕಾಣಿಸಿಕೊಂಡಿದೆ. ಅದಕ್ಕೆ ಅಗತ್ಯ ಕ್ರಮ ಕೈಗೊಂಡು ಕುಡಿವ ನೀರಿನ ಹಳೇ ಪೈಪ್‌ಲೈನ್ ದುರಸ್ತಿಗೊಳಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುಂಠಿತಗೊಂಡಿದೆ. ಬಾಕಿ ಇರುವ ರು. 3 ಕೋಟಿ ಬಿಡುಗಡೆಗೆ ಕ್ರಮ ಕೈಗೊಂಡು, ಮತ್ತೆ ಯೋಜನೆ ಸದುಪಯೋಗಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ತಾಪಂ ಇಓ ಸೈಯದ್‌ಹಜರತ್ ಷಾಹ, ತಹಸೀಲ್ದಾರ್ ಜವರೇಗೌಡ, ತಾಪಂ ಸದಸ್ಯರಾದ ರಾಮದುರ್ಗ ರಾಜಣ್ಣ, ವಿಶಾಲಾಕ್ಷಿ ರಾಜಣ್ಣ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾಪಂಗಳ ಪಿಡಿಓಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.