ಬಳ್ಳಾರಿ

ರೈತರಿಗೆ ಬೇಗ ಸಿಗಲಿದೆ ತುಂಗಭದ್ರೆ ನೀರು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 4
ಪ್ರತಿವರ್ಷ ನಿಗದಿತ ಸಮಯದಲ್ಲಿ ತುಂಗಭದ್ರಾ ಜಲಾಶಯದಿಂದ ನೀರು ಬಿಡುವುದಿಲ್ಲ ಎಂಬ ಕೊರಗು ಈ ಭಾಗದ ರೈತರಲ್ಲಿ ಮನೆ ಮಾಡಿತ್ತು. ಆದರೆ, ಈ ವರ್ಷ ಬೇಗ ನೀರು ಸಿಗುವ ಸಾಧ್ಯತೆ ಇದೆ.
ಜು. 9ರಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಮುನಿರಾಬಾದ್‌ನಲ್ಲಿ ನಡೆಸಲು ಈಗಾಗಲೇ ಸಿದ್ಧತೆ ನಡೆದಿದೆ. ನೀರು ಬಿಡಲು ಸಭೆ ಒಪ್ಪಿದರೆ ಎರಡು ವರ್ಷ ಬರದಿಂದ ತತ್ತರಿಸಿದ್ದ ರೈತರು ಸಂತಸದಿಂದ ಬಿತ್ತನೆಯಲ್ಲಿ ತೊಡಗಲಿದ್ದಾರೆ.
ಕಳೆದ ಬಾರಿ ಕಡಿಮೆ ಮಳೆಯಿಂದಾಗಿ ಆಗಸ್ಟ್‌ನಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗಿತ್ತು. ಈ ವರ್ಷ ಆಂಧ್ರಪ್ರದೇಶದ ಅಧಿಕಾರಿಗಳು ಕೂಡ ನೀರು ಬಿಡುವುದಕ್ಕೆ ಬೇಡಿಕೆ (ಇಂಟೆಂಡ್) ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಕಾಲುವೆ ಭಾಗದ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಜಲಾಶಯದಲ್ಲಿ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಜು. 9ರಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ಸಾಧ್ಯತೆ ಹೆಚ್ಚಾಗಿದೆ.
ನೀರಿನ ಪ್ರಮಾಣ ಅಧಿಕ: ಕಳೆದ ವರ್ಷ ಜು. 2ಕ್ಕೆ 1581.80 ಅಡಿ ನೀರು ಇದ್ದರೆ, ಈ ವರ್ಷ ಈಗಾಗಲೇ 1603.29 ಅಡಿ ಸಂಗ್ರಹವಾಗಿದೆ. ಇನ್ನು ಒಳಹರಿವು ಕಳೆದ ವರ್ಷ 3,805 ಕ್ಯುಸೆಕ್ ಇದ್ದರೆ, ಈ ವರ್ಷ 15,929 ಕ್ಯುಸೆಕ್ ಇದೆ. ಕಳೆದ ವರ್ಷ 940 ಕ್ಯುಸೆಕ್ ಹೊರಹರಿವು ಇದ್ದರೆ, ಈ ವರ್ಷ 100 ಕ್ಯುಸೆಕ್ ಇದೆ. ಸಾಮಾನ್ಯವಾಗಿ ಜಲಾಶಯದಲ್ಲಿ 1,590 ಅಡಿ ನೀರು ಸಂಗ್ರಹವಾಗಿದ್ದರೆ ಎಲ್‌ಎಲ್‌ಸಿಗೆ ಹಾಗೂ 1,605 ಅಡಿಗಳಷ್ಟು ನೀರು ಬಂದರೆ ಎಚ್‌ಎಲ್ ಕಾಲುವೆಗೆ ನೀರು ಬಿಡಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಈ ಬಾರಿ ಏರಿಕೆಯಾಗಿದೆ. ಕಳೆದ ವರ್ಷ ಆ. 3ರಂದು ಎಲ್‌ಎಲ್‌ಸಿ ಹಾಗೂ ಎಚ್‌ಎಲ್‌ಸಿಗೆ ನೀರು ಬಿಡಲಾಗಿತ್ತು.
ನೀರಾವರಿ ಸಲಹಾ ಸಮಿತಿಗೆ ಸಿಎಂ ಸೂಚನೆ: ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜು. 9ರಂದು ಸಲಹಾ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಬಳ್ಳಾರಿ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಗೌಡ ಪಾಟೀಲ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ಹಾಗೂ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ನೀರಾವರಿ ಸೌಲಭ್ಯ ಇರುವ ಕ್ಷೇತ್ರಗಳ ಶಾಸಕರು, ಸಂಸದರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
10ರಂದು ನೀರು ಬಿಡುವ ಸಾಧ್ಯತೆ: ಈ ಬಾರಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಉತ್ತಮವಾಗಿದ್ದರಿಂದ ರೈತರು ಹರ್ಷದಿಂದಲೇ ಜಮೀನು ಹದಗೊಳಿಸುವಲ್ಲಿ ನಿರತರಾಗಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಈಗಾಗಲೇ ಸಿದ್ಧತೆ ಕೈಗೊಂಡಿದ್ದಾರೆ. ಬತ್ತದ ನಾಟಿಗೆ ಬೇಕಾಗುವ ಸಸಿಗಳನ್ನು ಬೆಳೆಸುವಲ್ಲಿ ರೈತರು ತೊಡಗಿಕೊಂಡಿದ್ದಾರೆ. ಜು. 9ರಂದು ಸಭೆ ನಡೆದು, ಜು. 10ರಂದು ಎಲ್‌ಎಲ್ ಕಾಲುವೆಗೆ ನೀರು ಬಿಟ್ಟರೆ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ.
ಬೇಗ ಬಿಟ್ಟರೆ ಹೆಚ್ಚು ನೀರು ಸಂಗ್ರಹ: ಜಲಾಶಯದ ನೀರಿನ ಸಾಮರ್ಥ್ಯ 133 ಟಿಎಂಸಿಯಿಂದ 100.855 ಟಿಎಂಸಿಗೆ ಬಂದು ನಿಂತಿದೆ. ಹೀಗಾಗಿ ಜಲಾಶಯದ ನೀರು ಸಂಗ್ರಹ ಪ್ರಮಾಣ ಹೆಚ್ಚಿಸಲು ಗಂಭೀರ ಚಿಂತನೆ ನಡೆದಿದೆ. ಕಾಲುವೆಗಳಿಗೆ ಬೇಗನೆ ನೀರು ಬಿಟ್ಟರೆ ಖರ್ಚಿಲ್ಲದೆ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದು. ಬೇಗನೆ ನೀರು ಬಿಡುವುದರಿಂದ ನೀರಿನ ಹಂಚಿಕೆಯ ಪ್ರಮಾಣ ನೀಗಿಸುವ ಜತೆಗೆ ಉತ್ತಮ ಮಳೆಯಾಗಿ ಹೆಚ್ಚುವರಿ ನೀರು ಬಂದಾಗ ಅದನ್ನು ಅನಗತ್ಯವಾಗಿ ಹರಿದು ಬಿಡದೆ, ಜಲಾಶಯದಲ್ಲಿ ಸಂಗ್ರಹಿಸಿ ಬೇಸಿಗೆ ಹಾಗೂ ಹಿಂಗಾರಿನಲ್ಲಿ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಈಗ ಕಾಲುವೆಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಿರುವುದು ಖೇದಕರ ಸಂಗತಿ.
-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.