ಕಪ್ಪಗಲ್ ರಸ್ತೆ ಅಭಿವೃದ್ಧಿ ಕಾರ್ಯ ಆರಂಭ
ಬಳ್ಳಾರಿ: ಬಹುದಿನಗಳಿಂದ ಅಭಿವೃದ್ಧಿ ಕಾಣದೆ ನೆನೆಗುದ್ದಿಗೆ ಬಿದ್ದಿದ್ದ ಬಹು ಬೇಡಿಕೆಯ ಬಳ್ಳಾರಿಯ ಕಪ್ಪಗಲ್ ರಸ್ತೆ ಅಗಲೀಕರಣ ಕಾರ್ಯಕ್ಕೆ ಕೊನೆಗೂ ಮಹಾನಗರ ಪಾಲಿಕೆ ಗುರುವಾರ ಚಾಲನೆ ನೀಡಿದೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನ ರು. 100 ಕೋಟಿ ವೆಚ್ಚದಲ್ಲಿ ಕೆಲ ರಸ್ತೆಗಳ ಅಗಲೀಕರಣ, ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೆ ನಗರದ ಕೋಟೆ ರಸ್ತೆ ಅಗಲೀಕರಣಗೊಳಿಸಲಾಗಿದೆ. ಇದೀಗ ಎರಡನೆಯದಾಗಿ ಕಪ್ಪಗಲ್ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ.
ರು. 2.76 ಕೋಟಿ ವೆಚ್ಚ: 45 ಅಡಿ ಅಗಲದಲ್ಲಿ ಈ ರಸ್ತೆಯನ್ನು ಅಗಲೀಕರಣಗೊಳಿಸಲಿದ್ದು, ಅತಿಕ್ರಮವಾಗಿ ಚರಂಡಿ ಮುಂಭಾಗದವರೆಗೂ ಕಟ್ಟಲಾದ ಕಟ್ಟಡಗಳನ್ನು ಜೆಸಿಬಿ, ಕ್ರೇನ್ಗಳ ಸಹಾಯದಿಂದ ತೆರವುಗೊಳಿಸಿ ಅಗಲೀಕರಣಗೊಳಿಸಲಾಯಿತು. ನಗರದ ದುರ್ಗಮ್ಮ ವೃತ್ತದಿಂದ ಸುಮಾರು 1.50 ಕಿ.ಮೀ ಇರುವ ರಸ್ತೆಯನ್ನು ಈ ಮೊದಲು ನಿಗದಿಗೊಳಿಸಿದಂತೆ 45 ಅಡಿಗಳಷ್ಟು ರು. 2.76 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ರಸ್ತೆ ಅಗಲೀಕರಣಕ್ಕೆ ಬೇಕಾದ ಸ್ಥಳ ಪರಿಶೀಲನೆ ಮಾಡಿ, ಗುರುತಿಸಲಾಗಿದೆ. ಈ ಕುರಿತು ಕಪ್ಪಗಲ್ ರಸ್ತೆಯ ಅಂಗಡಿ ಮುಂಗಟ್ಟುಗಳು, ಕೆಲ ಬೃಹತ್ ಕಟ್ಟಡ, ಅಪಾರ್ಟ್ಮೆಂಟ್ಗಳ ಮಾಲೀಕರಿಗೆ ಎರಡು ದಿನಗಳ ಹಿಂದೆಯೇ ನೊಟೀಸ್ ನೀಡಲಾಗಿದ್ದು, ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಿರುವುದಾಗಿ ಪಾಲಿಕೆ ಆಯುಕ್ತ ನಾರಾಯಣ ತಿಳಿಸಿದರು.
45 ಅಡಿ ಮಾತ್ರ: 60 ಅಡಿ ಅಗಲದಲ್ಲಿ ರಸ್ತೆ ನಿರ್ಮಾಣ ಮಾಡಬೇಕೆಂಬುದು ಸಾರ್ವಜನಿಕರ ಆಪೇಕ್ಷೆಯಾಗಿತ್ತು. ಆದರೆ ಸರ್ಕಾರ ಈ ಮೊದಲು 45 ಅಡಿಗಳಿಗೆ ಮಾತ್ರ ನಿಗದಿಗೊಳಿಸಿದೆ. ಹೆಚ್ಚುವರಿಯಾಗಿ ಕಟ್ಟಡಗಳನ್ನು ತೆರವುಗೊಳಿಸಿದಲ್ಲಿ ಹೆಚ್ಚಿನ ಪರಿಹಾರ ನೀಡಬೇಕು. ಆದರೆ, ಅಷ್ಟು ಹಣ ನಮ್ಮ ಬಳಿ ಇಲ್ಲದ ಕಾರಣ 45 ಅಡಿಗಳಿಗೆ ಸೀಮಿತಗೊಳಿಸಿ ಅಭಿವೃದ್ಧಿ ಮಾಡಲಾಗುವುದು. ರಸ್ತೆ ಅಕ್ಕ ಪಕ್ಕದ ನಿವಾಸಿಗಳು, ಅಂಗಡಿ ಮುಂಗಟ್ಟುಗಳು, ಅಪಾರ್ಟ್ಮೆಂಟ್ಗಳು ರಸ್ತೆ, ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ಕಟ್ಟಡ, ತಡೆಗೋಡೆ, ಮನೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಉತ್ತಮ ಕಾರ್ಯ: ಸ್ಥಳೀಯ ನಿವಾಸಿ ವೇಣುಗೋಪಾಲ ರೆಡ್ಡಿ ಮಾತನಾಡಿ, ಕಪ್ಪಗಲ್ ರಸ್ತೆ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿದ್ದು ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು, ಶಾಲಾ ಬಸ್ ಈ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆ ಅಭಿವೃದ್ಧಿ ಕಾಣದೇ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿತ್ತು. ಜತೆಗೆ ಇತ್ತೀಚೆಗೆ ಆರಂಭವಾಗಿರುವ ನಗರ ಸಾರಿಗೆ ಭುವನ ವಿಜಯ ಬಸ್ಗಳು ಸಹ ಈ ರಸ್ತೆಗೆ ಬರುತ್ತಿರಲಿಲ್ಲ. ರಸ್ತೆಯೂ ಸಂಪೂರ್ಣ ತಗ್ಗು, ಗುಂಡಿಗಳಿಂದ ಕೂಡಿದ್ದು, ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ರಸ್ತೆ ಅಗಲೀಕರಣ ಕೈಗೊಂಡಿರುವ ಪಾಲಿಕೆ ಕಾರ್ಯ ಉತ್ತಮವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

