ಭರವಸೆ ಸಾಕು, ಸಮಸ್ಯೆಗಳಿಗೆ ಸ್ಪಂದಿಸಬೇಕು
ಹೂವಿನಹಡಗಲಿ: ಆರಂಭದಲ್ಲಿ ಅಬ್ಬರಿಸಿ, ಮಿಂಚಿ ಮರೆಯಾದಂತೆ ಜಿಲ್ಲಾ ಉಸ್ತುವಾರಿ ಮಂತ್ರಿ ಪಿ.ಟಿ. ಪರಮೇಶ್ವರನಾಯ್ಕರ ಭರವಸೆಗಳು ಭರಪೂರ. ಆದರೆ, ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ಇನ್ನೂ ಭರವಸೆಗಳೇ ಕಣ್ಮುಂದೆ ಇವೆ..!
ಆರಂಭದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಬ್ಬರಿಸಿದ ರಾಜ್ಯ ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಪಿ.ಟಿ. ಪರಮೇಶ್ವರನಾಯ್ಕ, ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಲು ವಿವಿಧ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಮೊದಲು ಆದ್ಯತೆ ನೀಡಿ, ರೈತರ ಸಮಸ್ಯೆಗಳಿಗೆ ಬೇಗನೆ ಸ್ಪಂದಿಸಿ, ಜನರ ಜತೆಗೆ ಸೌಜನ್ಯದಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಪಾಠ ಮಾಡಿದ್ದರು.
ಸಮಸ್ಯೆಗಳ ಪರಿಹಾರಕ್ಕೆ ನೇರವಾಗಿ ಜನರು ತಮ್ಮ ದೂರವಾಣಿಗೆ ಕರೆ ಮಾಡಬಹುದು ಎನ್ನುವ ಸಚಿವರ ಕ್ಷೇತ್ರದಲ್ಲೇ ಅನ್ನದಾತನಿಗೆ ಸಂಕಟ ಶುರುವಾಗಿದೆ. ಬಿತ್ತನೆ ಮಾಡಿರುವ ಮೆಕ್ಕೆಜೋಳ ಕಾಯ್ದರೂ ಬಿಡಾಡಿ ದನಗಳು ನೂರಾರು ಎಕರೆ ಪ್ರದೇಶದಲ್ಲಿನ ಮೆಕ್ಕೆಜೋಳ, ಶೇಂಗಾ ಸೇರಿದಂತೆ ಇತರೆ ಬೆಳೆಗಳನ್ನು ರಾತ್ರೋ ರಾತ್ರಿ ತಿಂದು ಹಾಕಿದ್ದರಿಂದ ರು. ಲಕ್ಷಾಂತರ ನಷ್ಟ ಉಂಟಾಗಿದೆ.
ದನ ಕಾಯಲು ಜಾಗರಣೆ: ತಾಲೂಕಿನ ಹಿರೇಹಡಗಲಿ, ಮಾಗಳ, ಕಾಳೇನಹಳ್ಳಿ, ಹಗರನೂರು, ಹೊಸಹಳ್ಳಿ ಸೇರಿದಂತೆ ಸುತ್ತಲಿನ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಬಿಡಾಡಿ ದನಗಳ ಕಾಟದಿಂದ ನೂರಾರು ಎಕರೆ ಪ್ರದೇಶ ಬಿತ್ತನೆಗೆ ಸಿದ್ಧವಾಗಿದ್ದರೂ ಬಿಡಾಡಿ ದನಗಳ ಕಾಟಕ್ಕೆ ಕಂಗಾಲಾಗಿದ್ದು ಬಿತ್ತನೆ ಮಾಡಲು ಅಸಾಧ್ಯವಾಗಿದೆ. ಮೆಕ್ಕಜೋಳ ಬಿತ್ತನೆ ಮಾಡಿದ್ದರೂ ಬೆಳೆ ರಕ್ಷಣೆ ಮಾಡಲು ನಿತ್ಯ ಹಗಲು-ರಾತ್ರಿ ಹರಸಾಹಸ ಮಾಡಿ ರಾತ್ರಿಯೆಲ್ಲ ಜಾಗರಣೆ ಮಾಡುತ್ತಾ ಬಿಡಾಡಿ ದನಗಳನ್ನು ಕಾಯುತ್ತಿದ್ದೇವೆ. ರಾತ್ರಿ ಸಮಯದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳವನ್ನೆಲ್ಲ ತಿಂದು ಹಾಕಿವೆ. ಇದರಿಂದ ರು. ಲಕ್ಷಾಂತರ ನಷ್ಟ ಉಂಟಾಗಿದೆ ಎನ್ನುತ್ತಾರೆ ರೈತರು. ಈ ಕುರಿತು ರಾಜ್ಯ ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕರನ್ನು ಪ್ರಶ್ನಿದಾಗ, ಅರಣ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿಯೇ ಹತ್ತಾರು ದಿನಗಳು ಕಳೆದವು. ಆದರೆ ಈ ವರೆಗೂ ಯಾವುದೇ ಕ್ರಮವಿಲ್ಲ. ಈ ಬಿಡಾಡಿ ದನಗಳ ಕಾಟದಿಂದ ಮುಕ್ತರಾಗಲು ರೈತರು ಯಾವ ಕ್ರಮ ತೆಗೆದುಕೊಳ್ಳದೇ ಅಸಹಾಯಕನಾಗಿ ಕೈ ಕಟ್ಟಿ ಕುಳಿತುಕೊಂಡಿದ್ದಾನೆ.
ಸಚಿವರೇ ಗಮನ ಹರಿಸುವಿರಾ?: ತಾಲೂಕಿನ ಮಾಗಳ ಗ್ರಾಮದ ಕೊಕ್ಕರಗೊಂದಿ ನಿಂಗಪ್ಪ, ತೆಂಗಿನಕಾಯಿ ಮಲ್ಲಪ್ಪ, ಹನುಮಂತರೆಡ್ಡಿ, ಮೇದಾರ ಗಿರಿಜಮ್ಮ ಇವರಿಗೆ ಸೇರಿದ್ದ 20 ಎಕರೆಗೂ ಹೆಚ್ಚು ಮೆಕ್ಕೆಜೋಳವನ್ನು ಬಿಡಾಡಿ ದನಗಳು ರಾತ್ರಿ ಸಮಯದಲ್ಲಿ ತಿಂದು ಭಾರಿ ಪ್ರಮಾಣದ ನಷ್ಟ ಮಾಡಿವೆ. ಅದೇ ರೀತಿ ಹಿರೇಹಡಗಲಿ ಗ್ರಾಮದ ರೈತರ ಹತ್ತಾರು ಎಕರೆ ಪ್ರದೇಶದಲ್ಲಿನ ಮೆಕ್ಕಜೋಳ ಮತ್ತು ಶೇಂಗಾ ಬೆಳೆಯನ್ನು ತಿಂದು ಹಾಕಿವೆ. ಪ್ರತಿ ವರ್ಷ ಇದೇ ರೀತಿ ಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ. ಅನ್ನದಾತನ ಸಮಸ್ಯೆಗೆ ಬೇಗನೆ ಸ್ಪಂದಿಸುತ್ತೇವೆಂಬ ನಿಮ್ಮ ಭರವಸೆ ಇದೇನಾ? ಹೀಗೆಂದು ರೋಸಿ ಹೋದ ರೈತರ ನೋವಿನ ಮಾತು. ಈವರೆಗೂ ಸಚಿವರು ಬಿಡಾಡಿ ದನಗಳನ್ನು ಸೆರೆ ಹಿಡಿಯಲು ಯಾವ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿಲ್ಲ, ಅನಂತರ ಕ್ರಮಕ್ಕೂ ಮುಂದಾಗಿಲ್ಲ. ಇದೇ ರೀತಿಯಾದರೆ ಆ ಭಾಗದಲ್ಲಿರುವ ರೈತರ ಗತಿಯೇನು? ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳ ಪಡುವುದಿಲ್ಲ ಎನ್ನುತ್ತಾರೆ. ಪಶು ಸಂಗೋಪನಾ ಇಲಾಖೆಯ ಉತ್ತರವೂ ಇದೆ. ಹಾಗಾದರೆ ಈ ಬಿಡಾಡಿ ದನಗಳಿಗೆ ಯಾವುದಾದರೂ ಇಲಾಖೆ ಇದೇನಾ ಹೀಗೆಂದು ರೈತರು ಪ್ರಶ್ನಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

