ಬಳ್ಳಾರಿ

ಶಂಕಿತ ಡೆಂಘೀಗೆ ಬಾಲಕ ಬಲಿ: ಗ್ರಾಪಂಗೆ ಬೀಗ

Published On :

ಹಗರಿಬೊಮ್ಮನಹಳ್ಳಿ: ಶಂಕಿತ ಡೆಂಘೀಗೆ ಬಾಲಕನೋರ್ವ ಬಲಿಯಾಗಿದ್ದು, ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲೀಕರಣದ ವಿಚಾರದಲ್ಲಿ ನೀರ್ಲಕ್ಷ್ಯ ತೋರಿದ್ದೆ ಗ್ರಾಮದಲ್ಲಿ ಡೆಂಘೀ ಸೊಂಕು ಹರಡಿ ಬಾಲಕನ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಹಂಪಸಾಗರದಲ್ಲಿ ಬುಧವಾರ ಜರುಗಿದೆ.
ಶಂಕಿತ ಡೆಂಘೀಗೆ ಬಲಿಯಾದ ಬಾಲಕನನ್ನು ಗ್ರಾಮದ ನಾಗಲಾಪುರ ವಾರ್ಡ್‌ಗೆ ಸೇರಿದ ಪರಶುರಾಮ (12) ಎಂದು ಗುರುತಿಸಲಾಗಿದೆ. ವಿಪರೀತ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ನಾಲೈದು ದಿನಗಳ ಹಿಂದೆಯೇ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್ಸೆಸ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ 12ರ ಸುಮಾರಿಗೆ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಬೀಗ ಜಡಿದು ಪ್ರತಿಭಟನೆ: ಬಾಲಕ ಸಾವನ್ನಪ್ಪಿರುವ ವಿಷಯ ತಿಳಿಯುತ್ತಲೆ ಗ್ರಾಮದಲ್ಲಿ ಕಳೆದೈದು ತಿಂಗಳಿನಿಂದಲೂ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ, ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಮನವಿ ಮಾಡಿಕೊಂಡರೂ ಸಾರ್ವಜನಿಕರ ಮನವಿ ಕಿವಿಗೊಡದೇ ನಿರ್ಲಕ್ಷ್ಯ ತೋರಿಸಿದ್ದೇ ಡೆಂಘೀ ಹರಡಲು ಕಾರಣ ಎಂದು ಆರೋಪಿಸಿ, ಸಿಟ್ಟಿಗೆದ್ದ ಸಾರ್ವಜನಿಕರು ಗ್ರಾಮ ಪಂಚಾಯಿತಿ ಆವರಣದಲ್ಲಿ ಜಮಾವಣೆಗೊಂಡು ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಜಡಿದು ಪಂಚಾಯಿತಿ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಗ್ರಾಮಸ್ಥರು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣವಿತ್ತು. ಕೊನೆಗೆ ಮೃತ ಬಾಲಕನ ಕುಟುಂಬ ವರ್ಗಕ್ಕೆ ಗ್ರಾಪಂ ವತಿಯಿಂದ ಪರಿಹಾರ ಧನ ನೀಡಿ, ಸ್ವಚ್ಛತೆ ಕಾಪಾಡುವ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಉಲ್ಲಂಘನೆ: ಗ್ರಾಮದಲ್ಲಿ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಕೂಡಲೇ ಚರಂಡಿ ಸ್ವಚ್ಛ ಮಾಡಿ, ನಿತ್ಯ ಫಾಗಿಂಗ್ ಹೊಡೆಸಿ ಸೊಳ್ಳೆ ನಿರ್ಮೂಲನೆ ಕೈಗೊಳ್ಳಿ ಎಂದು ಐದಾರು ಸಲ ಆರೋಗ್ಯ ಇಲಾಖೆಯಿಂದ ಜ್ಞಾಪನಾ ಪತ್ರ ನೀಡಿದ್ದರೂ ಆರೋಗ್ಯ ಇಲಾಖೆ ಪತ್ರಕ್ಕೆ ಪಂಚಾಯಿತಿ ಕ್ಯಾರೆ ಎಂದಿಲ್ಲ. ಇವತ್ತು ಸೊಳ್ಳೆಗಳು ಜಾಸ್ತಿಯಾಗಿ ಗ್ರಾಮದಲ್ಲಿ ಡೆಂಘೀ ಹಾವಳಿ ವಿಪರೀತವಾಗಿದೆ. ಇದಕ್ಕೆಲ್ಲ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಆಡಳಿತ ಮಂಡಳಿಯೇ ಹೊಣೆ ಎಂದು ಗ್ರಾಮಸ್ಥರು ದೂರಿದರು. ತಕ್ಷಣ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದಾಗಿ ಪಿಡಿಓ ಭರವಸೆ ನೀಡಿದರು. ಗ್ರಾಮದ ಮುಖಂಡರಾದ ಶಂಕರಗೌಡ, ನಾಗರಾಜ, ಹನುಮಂತಪ್ಪ, ಫಕ್ಕಿರಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.