ಬಳ್ಳಾರಿ

ಎಂಪಿಪಿ ಸಿಎಂ ಆಗಬೇಕಿತ್ತು: ಸಿದ್ದರಾಮಯ್ಯ

Published On :

ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುಮಾರಸ್ವಾಮಿ ಬದಲು ಎಂ.ಪಿ.ಪ್ರಕಾಶ್ ಅವರು ಮುಖ್ಯಮಂತ್ರಿಯಾಗಬೇಕಿತ್ತು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯ. ಎಲ್ಲ ಸಾಮರ್ಥ್ಯ, ಗುಣ ಹಾಗೂ ವ್ಯಕ್ತಿತ್ವವನ್ನು ಹೊಂದಿದ್ದರೂ ಪ್ರಕಾಶ್ ಅವರು ದುರದೃಷ್ಟವಶಾತ್ ಸಿಎಂ ಆಗಲಿಲ್ಲ. ಆದರೆ ಈ ಬಗ್ಗೆ ಎಂದೂ ಬೇಸರ ವ್ಯಕ್ತಪಡಿಸದೆ ಅವರು ಕುಮಾರಸ್ವಾಮಿ ಅವರ ಜತೆ ನಿಗರ್ವವಾಗಿ ಕೆಲಸ ಮಾಡಿದರು. ಇದು ಪ್ರಕಾಶ್ ಅವರಿಂದ ಮಾತ್ರ ಸಾಧ್ಯ, ಅಪರೂಪ ರಾಜಕಾರಣಿಯ ಹೆಗ್ಗಳಿಕೆ ಕೂಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ 73ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ನಾನು ಸಿಎಂ ಆಗಿರುವುದನ್ನು ನೋಡಿದ್ದರೆ ಎಂ.ಪಿ. ಪ್ರಕಾಶ್ ಹೆಚ್ಚು ಖುಷಿಪಡುತ್ತಿದ್ದರು. ನನ್ನ ಕಾರ್ಯವೈಖರಿಯನ್ನು ತಿದ್ದಿಕೊಳ್ಳಲು ಸಹಾಯವಾಗುತ್ತಿತ್ತು. ಇಂದಿನ ರಾಜಕಾರಣಕ್ಕೆ ಪ್ರಕಾಶ್ ಅವರ ಅನಿವಾರ್ಯತೆಯಿತ್ತು. ದೊಡ್ಡವರ ಜತೆ ದೊಡ್ಡವರಾಗಿ, ಚಿಕ್ಕವರ ಜತೆ ಚಿಕ್ಕವರಾಗಿ ಬದುಕುವಂತಹ ಮಗುವಿನ ವ್ಯಕ್ತಿತ್ವವನ್ನು ಪ್ರಕಾಶ್ ಹೊಂದಿದ್ದರು ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ರಾಜಕೀಯ ಜೀವನದ ಅಂತ್ಯದವರೆಗೆ ಮೌಲ್ವಿಕವಾಗಿ ಬೆಳೆದು ಎಲ್ಲರಿಗೂ ಆದರ್ಶಪ್ರಾಯರಾದರು. ಇದಲ್ಲದೆ ಅಪರೂಪವಾಗಿ ಕೊನೆಯವರೆಗೂ ಪ್ರಾಮಾಣಿಕವಾಗಿಯೆ ಉಳಿದರು. ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಹೊಂದಿರಲಿಲ್ಲ. ಇದೇ ಸಂದರ್ಭದಲ್ಲಿ ಇತರರ ಏಳ್ಗೆಯ ಬಗ್ಗೆ ಅಸೂಯೆಪಡದ ರಾಜಕಾರಣಿಯಾಗಿದ್ದರು ಎಂದು ಸಿಎಂ ಸ್ಮರಿಸಿದರು.
ರಾಮಕೃಷ್ಣ ಹೆಗಡೆ, ದೇವೇಗೌಡ, ಬೊಮ್ಮಾಯಿ, ಜೆ.ಎಚ್. ಪಟೇಲ್ ಕಾಲದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ಉತ್ತಮ ಯೋಜನೆಗಳ ಹರಿಕಾರರಾಗಿ ಪ್ರಕಾಶ್ ಕೆಲಸ ಮಾಡಿದರು. ಸರ್ಕಾರದ ಮೇಲಿನ ನಿಷ್ಠೆ ಹಾಗೂ ಜ್ಞಾನದಿಂದ ಮುಖ್ಯಮಂತ್ರಿಗಳಿಗೆ ಆಪತ್ಬಾಂಧವರಾಗಿ ಇರುತ್ತಿದ್ದರು. ಸದನಗಳಲ್ಲಿ ಯಾವುದೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸುವ ಚಾಕಚಕ್ಯತೆ ಅವರಲ್ಲಿತ್ತು. ಅವರ ಉತ್ತರಕ್ಕೆ ಯಾರೂ ಮರುಪ್ರಶ್ನೆ ಕೇಳುತ್ತಿರಲಿಲ್ಲ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಎಸ್. ಮಹಾದೇವಪ್ರಸಾದ್, ಶಾಮನೂರು ಶಿವಶಂಕರಪ್ಪ, ಸಂತೋಷ್ ಲಾಡ್, ಪರಮೇಶ್ವರ ನಾಯ್ಕ್, ಪ್ರಕಾಶ್ ಪುತ್ರ, ಶಾಸಕ ಎಂ.ಪಿ. ರವೀಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.