ಬಳ್ಳಾರಿ

ದೂರು ನೀಡಿದ್ದಕ್ಕೆ ಎಸ್‌ಐನಿಂದ ಥಳಿತ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 11
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುರುಗೋಡು ಪಿಎಸ್‌ಐ ತಮಗೆ ಅನಗತ್ಯವಾಗಿ ಥಳಿಸಿದ್ದಾರೆ. ಅವರು ಕ್ವಾರಿಯವರ ಪರ ಕೆಲಸ ಮಾಡುತ್ತಾರೆ ಎಂದು ಪಿಎಸ್‌ಐ ವಿರುದ್ಧವೇ ಕುರುಗೋಡು ಸಮೀಪದ ಲಕ್ಷ್ಮೀಪುರದ ಎಂ. ಮಲ್ಲಿಕಾರ್ಜುನ ಎಂಬವರು ಉಪ ಲೋಕಾಯುಕ್ತ ಸುಭಾಷ್ ಆದಿ ಅವರೆದುರು ಹೇಳಿಕೊಂಡರು.
ಇದಕ್ಕೆ ಸ್ಪಂದಿಸಿದ ಉಪಲೋಕಾಯುಕ್ತರು, ಇಂದಿನ ದಿನಗಳಲ್ಲಿ ಪೊಲೀಸರ ಮುಂದೆ ಜನಸಾಮಾನ್ಯರು ಬರಲು ಹೆದರುತ್ತಾರೆ. ಇಂತಹ ಸಭೆಯಲ್ಲಿ ಒಬ್ಬ ವ್ಯಕ್ತಿ ಬಂದು ನೇರವಾಗಿ ಪಿಎಸ್‌ಐ ಮೇಲೆ ಆರೋಪ ಮಾಡುತ್ತಾನೆ ಎಂದರೆ ಅದರಲ್ಲಿ ಸತ್ಯ ಇದ್ದೆ ಇರುತ್ತದೆ. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವ ಪೊಲೀಸರು ತಪ್ಪಿಲ್ಲದವರನ್ನು ಹೊಡೆದರೆ ಹೇಗೆ? ಆತನಲ್ಲಿ ಕ್ಷಮೆ ಕೇಳುವಂತೆ ಪಿಎಸ್‌ಐಗೆ ತಿಳಿಸಿದರು. ಲೋಕಾಯುಕ್ತರಿಗೆ ದೂರು ನೀಡಿದ್ದಾನೆ ಎಂದು ಹೇಳಿ ಅವರಿಗೆ (ದೂರುದಾರನಿಗೆ) ಅನಗತ್ಯ ಕಿರುಕುಳ ನೀಡಬಾರದು ಎಂದು ಹೇಳುವ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿದರು.
ಈ ಪ್ರಸಂಗ ನಡೆದದ್ದು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಗುರುವಾರ ಉಪ ಲೋಕಾಯುಕ್ತರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ. ಲೋಕಾಯುಕ್ತ ಕಚೇರಿಯಲ್ಲಿ ನೆನೆಗುದಿಗೆ ಬಿದ್ದ ದೂರುಗಳ ವಿಲೇವಾರಿ, ಸಾರ್ವಜನಿಕರ ದೂರು ಇತ್ಯರ್ಥ ಕಾರ್ಯಕ್ರಮದಲ್ಲಿ ಜೆಸ್ಕಾಂ, ಪೊಲೀಸ್, ಕಂದಾಯ ಇಲಾಖೆ ಮೇಲಿನ ದೂರುಗಳೇ ಹೆಚ್ಚಾಗಿದ್ದವು.
ಸ್ಥಳದಲ್ಲೇ ಸಮಸ್ಯೆ ಇತ್ಯರ್ಥ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಕ್ಕೆ ಮುಂದಾದರೆ, ಕೆಲ ದೂರುಗಳ ಕುರಿತು ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸೂಚಿಸಿದರೆ, ಇನ್ನು ಕೆಲ ದೂರುಗಳ ಕುರಿತು ವರದಿ ಸಲ್ಲಿಸಲು ಉಪಲೋಕಾಯುಕ್ತ ಸುಭಾಷ್ ಆದಿ ತಾಕೀತು ಮಾಡಿದರು.
ಪ್ರತಿ ದೂರುದಾರನ ದೂರುಗಳು ಒಂದೊಂದು ರೀತಿಯಲ್ಲಿದ್ದವು. ಬಹುತೇಕ ದೂರುದಾರರು ನೆನಗುದಿಗೆ ಬಿದ್ದ ಪ್ರಕರಣ ಕುರಿತು, ನೆನೆಗುದಿಗೆ ಬೀಳಲು ಕಾರಣವಾದ ಅಧಿಕಾರಿಗಳನ್ನು ಬೊಟ್ಟು ಮಾಡಿ ತೋರಿಸುವ ಮೂಲಕ, ತಮ್ಮ ದೂರುಗಳನ್ನು ದಾಖಲೆ ಸಮೇತ ತಿಳಿಸುವ ಮೂಲಕ ಅಧಿಕಾರಿಗಳ ಮುಜುಗರಕ್ಕೆ ಕಾರಣವಾದರು. ಕೆಲ ಅಧಿಕಾರಿಗಳಿಗೆ ಟೈಂ ಕೊಡಬೇಡಿ, ಅನಗತ್ಯವಾಗಿ ವಿಳಂಬ ಮಾಡುವ ಪ್ರಯತ್ನ ಮಾಡುತ್ತಾರೆ ಎಂಬ ಆರೋಪಗಳು ಕೂಡ ದೂರುದಾರರಿಂದ ಕೇಳಿಬಂದವು.
ಕಂಬನಿ ಮಿಡಿದ ದಂಪತಿ: ಕೆಲ ಪ್ರಭಾವಿಗಳು ವಿಷಯವೊಂದಕ್ಕೆ ಸಂಬಂಧಿಸಿದಂತೆ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವೆಂಕಟೇಶ್ ಹಾಗೂ ಅವರ ಪತ್ನಿ ದೂರಿ,  ಕಂಬನಿ ಸುರಿಸಿ, ಉಪಲೋಕಾಯುಕ್ತರ ಮುಂದೆ ಅಹವಾಲು ಸಲ್ಲಿಸಿದರು. ಉಪ ಲೋಕಾಯುಕ್ತರು ಅವರನ್ನು ವೇದಿಕೆ ಮೇಲೆ ಕರೆದು, ನನ್ನ ಅಕ್ಕ ಪಕ್ಕದಲ್ಲಿ ಎಸ್ಪಿ, ಡಿಸಿ ಇದ್ದಾರೆ, ನೀವೇನೂ ಹೆದರಬೇಡಿ, ಎಂತಹ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ಮೇಲೆ ಕ್ರಮ ಜರುಗಿಸಲಾಗುತ್ತದೆ. ಮೊದಲು ದೂರು ಏನೆಂದು ಹೇಳಿ ಎಂದಾಗ, ತಮ್ಮ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಆಗ ಆದಿಯವರು, ಈ ದೂರನ್ನು ಪರಿಶೀಲಿಸಿ, ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸುವ ಮೂಲಕ ದಂಪತಿಗೆ ಸಾಂತ್ವನ ಹೇಳಿದರು.
ಸಾರ್ವಜನಿಕರ ದುಡ್ಡು: ನಗರದ ಇಂದಿರಾ ಸರ್ಕಲ್‌ನಿಂದ ಸತ್ಯನಾರಾಯಣ ಪೇಟೆಯ 1ನೇ ಕ್ರಾಸ್‌ವರೆಗೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಮರಗಳನ್ನು ಕಡಿಯಲಾಗಿದೆ. ಅಷ್ಟು ದುಡ್ಡು ಖರ್ಚು ಮಾಡಿ, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಹಣ ವ್ಯಯ ಮಾಡಿದ್ದಾರೆ ಎಂದು ಪ್ರೊ. ಸತ್ಯನಾರಾಯಣ ಆರೋಪಿಸಿದರು. ಆಗ ರಸ್ತೆ ಅಭಿವೃದ್ಧಿ ಕಾಮಗಾರಿ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಬಾಲಸುಬ್ರಹ್ಮಣ್ಯಂ ಅವರು, ಶಾಸಕರು ಅಭಿವೃದ್ಧಿ ಕಾಮಗಾರಿ ಕುರಿತು ಕ್ರಿಯಾಯೋಜನೆ ತಯಾರಿಸುವಂತೆ ತಿಳಿಸಿದ್ದರು, ಅದರಂತೆ ಸಲ್ಲಿಸಿದ್ದು, ಎಚ್‌ಕೆಎಡಿಬಿಯು ಹಣ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಅಧಿಕಾರಿ ಉತ್ತರಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತರು, ಅದು ಸಾರ್ವಜನಿಕರ ಹಣ, ಯಾವುದೇ ಒಬ್ಬ ವ್ಯಕ್ತಿಯ ಹಣವಲ್ಲ, ಅಂತಹ ಅಭಿವೃದ್ಧಿ ಮಾಡುವಂತೆ ಯಾರು ಹೇಳಿದರೂ ಈ ರಸ್ತೆಗೆ ಇಷ್ಟು ಹಣ ಖರ್ಚು ಮಾಡುವ ಅಗತ್ಯವಿರಲಿಲ್ಲ. ರಸ್ತೆ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಿ, ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸುಭಾಷ್ ಆದಿ ಡಿಸಿಗೆ ಸೂಚಿಸಿದರು.
ಹೀಗೆ ವಿಭಿನ್ನ ದೂರುಗಳು ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ಉಪ ಲೋಕಾಯುಕ್ತರ ಮುಂದೆ ಬಂದವು. ಈ ವೇಳೆ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಎಸ್ಪಿ ಡಾ. ಚೇತನ್ ಸಿಂಗ್ ರಾಥೋಡ್ ಸೇರಿದಂತೆ ಇತರರು ಇದ್ದರು.

ತಪ್ಪು ತೋರಿಸಿದವನೇ ಜೈಲು ಪಾಲಾದ!
ಸಂಡೂರು ತಾಲೂಕು ಭುಜಂಗನಗರ ಗ್ರಾಪಂಗೆ ಸ್ಪರ್ಧಿಸಿದ್ದ ತಾಯಪ್ಪ ರೌಡಿಶೀಟರ್, ಆತನ ಮೇಲೆ ಕ್ರಿಮಿನಲ್ ಪ್ರಕರಣಗಳು ಇವೆ. ಆತನ ನಾಮಪತ್ರ ತಿರಸ್ಕೃತಗೊಳಿಸಿ ಎಂದು ಹೋರಾಟ ಮಾಡಿದ ನನಗೆ ಜಾತಿ ನಿಂದನೆ ಮೇಲೆ ಜೈಲಿಗೆ ಹಾಕಿದರು. ಆದರೆ 4 ವರ್ಷದಿಂದ ನನ್ನ ಹೋರಾಟ ನಿಲ್ಲಿಸಿಲ್ಲ ಎಂದು ಸಂಡೂರು ವಕೀಲ ಮಂಜುನಾಥ್ ಅಳಲನ್ನು ತೋಡಿ ಕೊಂಡರು. ರೌಡಿಶೀಟರ್ ಹಣೆಪಟ್ಟಿ ಇದ್ದ ತಾಯಪ್ಪ ಚುನಾವಣೆಯಲ್ಲಿ ಗೆದ್ದ, ಈತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮೇಲಧಿಕಾರಿಗಳ ಆದೇಶವಿದ್ದರೂ ಸಂಡೂರು ತಹಸೀಲ್ದಾರ್ ವಿಳಂಬ ಮಾಡಿದರು. ದೂರು ಹಿಂದಕ್ಕೆ ಪಡೆಯುವಂತೆ ತಮಗೆ ಬೆದರಿಕೆ, ಹಲ್ಲೆ ನಡೆಸಿದರು. ಈ ಕುರಿತು ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ನನ್ನ ಮೇಲೆಯೇ ಜಾತಿ ನಿಂದನೆ ಕೇಸು ಹಾಕಿ, 3 ದಿನ ಜೈಲಿಗೆ ತಳ್ಳಿದರು. ಅಂದಿನ ತಹಸೀಲ್ದಾರ್ ಶಿವಪ್ಪ ಲಮಾಣಿ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಮಾಡಬೇಕೆಂದು ಪಟ್ಟುಹಿಡಿದರು. ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಈ ರೀತಿ ಕ್ರಮ ಕೈಗೊಳ್ಳಲು ಆಗದು. ಈ ಕುರಿತು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ಲೋಕಾಯುಕ್ತರು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.