ವೈದ್ಯರ ಕೊರತೆ: ಸೊರಗಿದ ಆರೋಗ್ಯ ಕೇಂದ್ರಗಳು
ಹಗರಿಬೊಮ್ಮನಹಳ್ಳಿ: ಜನತೆಯ ಆರೋಗ್ಯ ರಕ್ಷಣೆ ಮಾಡಬೇಕಾದರೆ ಆಸ್ಪತ್ರೆಗಳಲ್ಲಿ ಅಗತ್ಯವಿರುವ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿ ಮುಖ್ಯ. ಆದರೆ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ವಿವಿಧ ನೂರು ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ತಾಲೂಕಿನ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಹೌದು, ತಾಲೂಕಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಅರವಳಿಕೆ, ಮಕ್ಕಳ, ಮಹಿಳಾ ತಜ್ಞವೈದ್ಯರು, ವೈದ್ಯಾಧಿಕಾರಿಗಳು, ಶುಶ್ರೂಷಕಿಯರು, ಸಿಬ್ಬಂದಿ ಸೇರಿದಂತೆ 100 ಹುದ್ದೆಗಳು ಖಾಲಿ ಇವೆ. ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಅವರ ಹೂವಿನಹಡಗಲಿ ಕ್ಷೇತ್ರದ ವ್ಯಾಪ್ತಿಗೆ ಸೇರುವ ತಾಲೂಕಿನ ಹಂಪಸಾಗರ ಸಮುದಾಯ ಆಸ್ಪತ್ರೆಯಲ್ಲೇ ಓರ್ವ ಮಹಿಳಾ ವೈದ್ಯೆ ಸೇರಿ ನಾಲ್ಕು ವೈದ್ಯ ಹುದ್ದೆ, 5 ಶುಶ್ರೂಷಕಿಯರು, 8 ಗ್ರೂಪ್ ಡಿ ನೌಕರರು, ಫಾರ್ಮಸಿಸ್ಟ್, ಕಚೇರಿ ಅಧೀಕ್ಷಕ, ಪ್ರಥಮ ದರ್ಜೆ ಸಹಾಯಕ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ.
ಖಾಸಗಿ ಆಸ್ಪತ್ರೆಯೇ ಗತಿ: ಪ್ರತಿ ಸಲದ ತಾಪಂ ಸಭೆಯಲ್ಲಿ ವೈದ್ಯರ ಸಮಸ್ಯೆ ನಿವಾರಿಸುವ ಕುರಿತು ಸಾಕಷ್ಟು ಚರ್ಚೆಗಳಾದರೂ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. 5-6 ವರ್ಷಗಳಿಂದ ಹುದ್ದೆಗಳು ಖಾಲಿ ಇದ್ದು, ಜನತೆಗೆ ಆಸ್ಪತ್ರೆಗಳು ಇದ್ದು ಇಲ್ಲದಂತಾಗಿವೆ. ಇದರಿಂದಾಗಿ ರೋಗಿಗಳಿಗೆ ಪಟ್ಟಣ ಸೇರಿದಂತೆ ಹೊಸಪೇಟೆ, ದಾವಣಗೆರೆ, ಮಣಿಪಾಲ್, ಹುಬ್ಬಳ್ಳಿ, ಧಾರವಾಡ ನಗರಗಳಲ್ಲಿರುವ ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳೇ ಗತಿ. ಹಣವಿದ್ದವರೇನೋ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ. ಆದರೆ ದಿನಗೂಲಿಗಳು, ಹಮಾಲರು, ಕೂಲಿ ಕಾರ್ಮಿಕರು, ಗುಮಾಸ್ತರು ಸೇರಿದಂತೆ ಮಧ್ಯಮ ವರ್ಗದ ಜನತೆಗೆ ದೂರದೂರಿನ ಆಸ್ಪತ್ರೆ ಬಲು ದುಬಾರಿ.
ವೈದ್ಯಾಧಿಕಾರಿಗಳ ಕೊರತೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 6 ಹಿರಿಯ ತಜ್ಞವೈದ್ಯರು, ಅರವಳಿಕೆ, ಮಕ್ಕಳ, ಮಹಿಳಾ, ದಂತ ತಲಾ ಒಬ್ಬ ವೈದ್ಯರು, ಬಾಚಿಗೊಂಡನಹಳ್ಳಿ, ಕೋಗಳಿ, ಅಲಬೂರು ಹಾಗೂ ಮಾಗಿಮಾವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಓರ್ವ ವೈದ್ಯಾಧಿಕಾರಿ ಹುದ್ದೆ ಖಾಲಿ. ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆ ತುಂಬಲು ತಾಲೂಕು ಆರೋಗ್ಯಾಧಿಕಾರಿಗೆ ತಲೆನೋವಾಗಿದೆ. ಸದ್ಯ ಲಭ್ಯವಿರುವ ವೈದ್ಯರನ್ನೇ ವಾರದಲ್ಲಿ 2 ದಿನ ಒಂದೊಂದು ಆಸ್ಪತ್ರೆಯಂತೆ 2-3 ಆಸ್ಪತ್ರೆಗಳಿಗೆ ನಿಯೋಜನೆ ಮಾಡಿ ವೈದ್ಯರ ಕೊರತೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಆದರೆ ಶಾಶ್ವತ ಪರಿಹಾರ ಮಾತ್ರ ಗಗನ ಕುಸುಮ.
ವೈದ್ಯರಂತೆ ಮುಖ್ಯವಿರುವ ಶುಶ್ರೂಷಕಿಯರು ಹಾಗೂ ಹಿರಿಯ-ಕಿರಿಯ ಆರೋಗ್ಯ ಸಹಾಯಕರ ಒಟ್ಟು 35 ಹುದ್ದೆಗಳು ಹಲವು ವರ್ಷಗಳಿಂದ ತಾಲೂಕಿನಲ್ಲಿ ಖಾಲಿ ಇವೆ. ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 9 ಹಾಗೂ ಮಾಗಿಮಾವಿನಹಳ್ಳಿ ಆರೋಗ್ಯ ಕೇಂದ್ರದಲ್ಲಿ ಒಂದು ಶುಶ್ರೂಷಕಿ ಹುದ್ದೆ ಖಾಲಿ ಇದ್ದರೆ. ತಾಲೂಕಿನ ಮೋರಗೇರಿ, ಅಲಬೂರು, ತಂಬ್ರಹಳ್ಳಿ, ಕೋಗಳಿ, ಹಂಪಸಾಗರ, ಮಾಗಿಮಾವಿನಹಳ್ಳಿ, ಬಾಚಿಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆ ಹಾಗೂ ಪುರುಷ ಸೇರಿ ಒಟ್ಟು 5 ಹಿರಿಯ ಹಾಗೂ 15 ಕಿರಿಯ ಆರೋಗ್ಯ ಸಹಾಯಕರ ಹುದ್ದೆ ಖಾಲಿ. ಕಿರಿಯ ಆರೋಗ್ಯ ಸಹಾಯಕರು ಗ್ರಾಮೀಣ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಬೇಕು. ಬಹುದಿನಗಳಿಂದಲೂ ಈ ಹುದ್ದೆಗಳು ಖಾಲಿ ಇರುವುದರಿಂದ ಹಳ್ಳಿಗಾಡಿನಲ್ಲಿ ಜನತೆ ನಿತ್ಯ ತೊಂದರೆ ಅನುಭವಿಸಬೇಕಿದೆ. ಉಳಿದಂತೆ ಡಿ ಗ್ರೂಪ್ ನೌಕರರ 22 ಹುದ್ದೆಗಳು ಖಾಲಿ ಇವೆ. ಡಿ ಗ್ರೂಪ್ ನೌಕರರೆ ಇಲ್ಲ ಎಂದ ಮೇಲೆ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಎಂಬ ಮಾತೇ ಕೇಳಿಸದು. ಸಮಸ್ಯೆ ನಿವಾರಣೆಗೆ ಹಲವು ಬಾರಿ ತಾಲೂಕಿನಲ್ಲಿ ಪ್ರತಿಭಟನೆಗಳಾಗಿವೆ. ಆದರೆ ಪರಿಹಾರ ಮಾತ್ರ ಶೂನ್ಯ.
ಎಷ್ಟು ಹುದ್ದೆ ಖಾಲಿ?
ತಜ್ಞವೈದ್ಯರು ............................................ 8
ದಂತ ವೈದ್ಯ .............................................. 1
ವೈದ್ಯಾಧಿಕಾರಿಗಳು .................................... 9
ಶುಶ್ರೂಷಕಿಯರು ..................................... 15
ಬಿಎಚ್ಇಒ ............................................ 1
ಹಿರಿಯ ಆರೋಗ್ಯ ಸಹಾಯಕ .................... 5
(ಪುರುಷ-2, ಮಹಿಳೆ-3)
ಕಿರಿಯ ಆರೋಗ್ಯ ಸಹಾಯಕರು ................ 15
(ಮಹಿಳೆ-9, ಪುರುಷ-6)
ಹಿರಿಯ ಫಾರ್ಮಸಿಸ್ಟ್ .............................. 2
ಫಾರ್ಮಸಿಸ್ಟ್ ........................................... 4
ನರ್ಸಿಂಗ್ ಸೂಪರಿಂಟೆಂಡೆಂಟ್ .................. 1
ಕಾರ್ಯದರ್ಶಿ ........................................... 1
ಕಚೇರಿ ಅಧಿಕ್ಷಕ ......................................... 1
ಪ್ರಥಮ ದರ್ಜೆ ಸಹಾಯಕರು ..................... 6
ಬೆರಳಚ್ಚುಗಾರ, ಸಹಾಯಕ ........................ 2
ಕಂಪ್ಯೂಟರ್ ಆಪರೇಟರ್ .......................... 1
ವಾಹನ ಚಾಲಕ ........................................ 4
ಗ್ರೂಪ್ ಡಿ ನೌಕರರು .................................. 22
ಹಳ್ಳಿಗರಿಗೆ ಸಮಸ್ಯೆ...
ವೈದ್ಯರ ಸಮಸ್ಯೆ ಹಳ್ಳಿಗಾಡಿನ ಜನತೆಗೆ ತೊಂದರೆಯನ್ನುಂಟು ಮಾಡಿದೆ. ಗ್ರಾಮದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಸೇರಬೇಕು. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿನ ವೈದ್ಯರ ಕೊರತೆ ನಿವಾರಿಸುವ ಮೂಲಕ ಹಳ್ಳಿಗರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು.
- ಜಿ. ಅಜ್ಜಯ್ಯ, ನಾಗರಿಕ
- ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

