ಬಳ್ಳಾರಿ

ಶಾಸಕರ ಅಧಿಕಾರದಲ್ಲಿ ಹಸ್ತಕ್ಷೇಪ ಇಲ್ಲ

Published On :

ಹಗರಿಬೊಮ್ಮನಹಳ್ಳಿ: ಶಾಸಕರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ತಾಲೂಕು ಮಟ್ಟದ ಕಳಂಕಿತ ಅಧಿಕಾರಿಗಳ ಮುಂದುವರಿಕೆಗೆ ಸಮ್ಮತಿಸುವುದಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ಸ್ಥಾಪನೆಯೇ ನಮ್ಮ ಮುಂದಿರುವ ಗುರಿ ಎಂದು ಕಾಂಗ್ರೆಸ್ ಮುಖಂಡ ಎಲ್. ಮಾರೆಣ್ಣ ಹೇಳಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ  ಮತ್ತು ಅಧಿಕಾರಿಗಳ ವರ್ಗಾವಣೆ ಸಂಬಂಧ ಸೋತ ಅಭ್ಯರ್ಥಿಗಳ ಅಭಿಪ್ರಾಯವನ್ನು ಮುಖ್ಯವಾಗಿ ಪರಿಗಣಿಸಬೇಕೆಂದು ಕೆಪಿಸಿಸಿ ಸ್ಪಷ್ಟವಾಗಿ ಈಗಾಗಲೆ ಸರ್ಕಾರಕ್ಕೆ ಸೂಚಿಸಿದೆ. ಕ್ಷೇತ್ರದಲ್ಲಿನ ಕಳಂಕಿತ ಅಧಿಕಾರಿಗಳಿಗೆ ಗೇಟ್‌ಪಾಸ್ ನೀಡುವ ಮೂಲಕ ಹಳಿತಪ್ಪಿರುವ ಆಡಳಿತಯಂತ್ರವನ್ನು ಮತ್ತೆ ಸರಿದಾರಿಗೆ ತರಲಾಗುವುದು ಎಂದರು.
ಅಧಿಕಾರಿ ಸೇವೆ ಬೇಡ: ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣ, ಸುವರ್ಣಗ್ರಾಮ ಯೋಜನೆ ಜಾರಿ ಸೇರಿದಂತೆ ಸರ್ಕಾರದಿಂದ ಮಂಜೂರಾಗಿದ್ದ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿವೆ. 3 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಭೂಸೇನಾ ನಿಗಮದ ಅಧಿಕಾರಿ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಈಗ ಇಂತಹ ಅಧಿಕಾರಿಯ ಸೇವೆಯನ್ನು ಮತ್ತೆ ತಾಲೂಕಿನಲ್ಲಿ ಮುಂದುವರಿಸಲು ಹಲವರು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಯಾವುದೆ ಕಾರಣಕ್ಕೂ ಆ ಅಧಿಕಾರಿಯನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಹೇಳಿದರು.
ಸನ್ಮಾನ: ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸೇರಿದಂತೆ ಕಾಂಗ್ರೆಸ್‌ನಿಂದ ಆಯ್ಕೆಯಾದ ಜಿಲ್ಲೆಯ ನೂತನ ಶಾಸಕರನ್ನು ಸನ್ಮಾನಿಸಲಾಗುವುದು. ಸೋಮವಾರ ಬೆಂಗಳೂರಿಗೆ ನಿಯೋಗದೊಂದಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಚರ್ಚಿಸಿದ ಬಳಿಕ ಸನ್ಮಾನ ಕಾರ್ಯಕ್ರಮದ ದಿನ ನಿಗದಿಪಡಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಇದ್ದರು.

ರೇಲ್ವೆ ಮಂತ್ರಿ ಬಳಿ ನಿಯೋಗ...
ಶೀಘ್ರದಲ್ಲೇ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಹೊಸಪೇಟೆ- ಹಗರಿಬೊಮ್ಮನಹಳ್ಳಿ- ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಅಡ್ಡಿಯಾಗಿರುವ ಸ್ಟೀಫರ್ ಗ್ರೇಡಿಯಂಟ್ ಕಾಮಗಾರಿಗೆ ಅಗತ್ಯವಿರುವ ರು. 42.36 ಕೋಟಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು ಎಂದರು ಎಲ್. ಮಾರೆಣ್ಣ. ಭಾನುವಾರ ಬೆಂಗಳೂರಿಗೆ ನಿಯೋಗವೊಂದನ್ನು ತೆಗೆದುಕೊಂಡು ಹೋಗಿ ಸಚಿವರನ್ನು ಭೇಟಿಯಾಗಿ, ಸ್ವಾತಂತ್ರ್ಯಪೂರ್ವದಲ್ಲೇ ನಿರ್ಮಾಣವಾಗಿರುವ ಈ ರೈಲು ಮಾರ್ಗದ ಅಗತ್ಯ ಮತ್ತು ಅದರ ಮಹತ್ವದ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು. ಕಾಮಗಾರಿ ಬಗ್ಗೆ 'ಕನ್ನಡಪ್ರಭ' ಜು. 17ರ ಸಂಚಿಕೆಯಲ್ಲಿ ಪ್ರಕಟಿಸಿದ್ದ ವಿಶೇಷ ವರದಿ ಪ್ರಸ್ತಾಪಿಸಿದ ಮಾರೆಣ್ಣ, ಮಾಧ್ಯಮಗಳು ಮತ್ತು ಹೋರಾಟಗಾರರ ಅಭಿಪ್ರಾಯಗಳನ್ನು ಸಚಿವರ ಗಮನಕ್ಕೆ ತಂದು, ಅಗತ್ಯ ಇರುವ ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು. ಅದರಂತೆ ಕ್ಷೇತ್ರದ ಏಕೈಕ ಜಲಾಶಯ ಮಾಲ್ವಿ ಡ್ಯಾಂಗೆ ಶಾಶ್ವತ ನೀರು ಕಲ್ಪಿಸಿ ಡ್ಯಾಂಗೆ ನೀರು ತುಂಬಿಸುವ ಯೋಜನೆಗೆ ಜಾರಿಗೆ ಸಂಬಂಧಿಸಿದಂತೆ ಸಿಎಂಗೆ ಮನವಿ ಅರ್ಪಿಸಿ, ಯೋಜನೆಯ ಜಾರಿಗೆ ಒತ್ತಾಯಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.