ಭೂ ಪರಿಹಾರ ನೀಡಿ
ಬಳ್ಳಾರಿ: ಎನ್ಎಂಡಿಸಿಯವರು ಕೈಗಾರಿಕೆ ಸ್ಥಾಪಿಸಲು ಬಳ್ಳಾರಿ ತಾಲೂಕಿನಲ್ಲಿ ಭೂ ಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಿದರೂ ಕೆಐಎಡಿಬಿ ನಿರ್ಲಕ್ಷ್ಯ ಧೋರಣೆಯಿಂದಾಗಿ ರೈತರಿಗೆ ಪರಿಹಾರದ ಹಣವೂ ಸಿಗುತ್ತಿಲ್ಲ. ಇತ್ತ ಭೂ ಸ್ವಾಧೀನ ಆದೇಶವನ್ನು ಹಿಂಪಡೆಯುತ್ತಿಲ್ಲ ಎಂದು ಭೂಮಿ ಕಳೆದುಕೊಂಡಿರುವ ಕಾಂಗ್ರೆಸ್ ಮುಖಂಡ ಎನ್. ಪ್ರತಾಪ್ ರೆಡ್ಡಿ, ನ್ಯಾಯವಾದಿ ಆರ್.ಎಸ್. ಬಸವರಾಜ್ ಸೇರಿದಂತೆ ಹಲವರು ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆ ಎನ್ಎಂಡಿಸಿಯು ಕಬ್ಬಿಣ ಉತ್ಪಾದನಾ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ 2011ರಲ್ಲಿ ತಾಲೂಕಿನ ವೇಣಿವೀರಾಪುರ, ಜಾನಕುಂಟೆ ಗ್ರಾಮದಲ್ಲಿ 2,800 ಎಕರೆ ಭೂ ಸ್ವಾಧೀನಕ್ಕೆ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಐಎಡಿಬಿಯು ಕೆಐಎಡಿ ಕಾಯ್ದೆ 28(1)ರಡಿ ಅಧಿಸೂಚನೆ ಹೊರಡಿಸಿತ್ತು, ನಂತರ ಕೆಲ ರೈತರು ನ್ಯಾಯಾಲಯದಲ್ಲಿ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ತಂದಿದ್ದಾರೆ. ಆದರೆ ಉಳಿದ ರೈತರಿಗೆ ಪರಿಹಾರ ವಿತರಣೆ ಮಾಡಿಲ್ಲ ಎಂದು ದೂರಿದರು.
ರು. 145 ಕೋಟಿ ಮುಂಗಡ ಹಣ ನೀಡಿ ಭೂಸ್ವಾಧೀನಕ್ಕಾಗಿ ಎನ್ಎಂಡಿಸಿ ಕೆಐಎಡಿಬಿಗೆ ರು. 145 ಕೋಟಿ ಮುಂಗಡ ನೀಡಿದ್ದಾರೆ. ಆದರೂ ರೈತರಿಗೆ ಪರಿಹಾರದ ಹಣ ವಿತರಿಸಿಲ್ಲ. ಕೆಲವೇ ಕೆಲವು ರೈತರು ಕೋರ್ಟ್ನಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಷಯ ಮುಂದಿಟ್ಟುಕೊಂಡು ಪರಿಹಾರ ನೀಡಿಲ್ಲ. 2,800 ಎಕರೆ ಪೈಕಿ ಕೇವಲ 300 ಎಕರೆ ಜಮೀನುಗಳ ಮಾಲೀಕರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಉಳಿದ ರೈತರಿಗೆ ಪರಿಹಾರ ನೀಡದೇ ಕೆಐಎಡಿಬಿ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಕಿಡಿ ಕಾರಿದರು.
ನಿರ್ಬಂಧ ಇಲ್ಲದಿದ್ದರೂ ನಿರ್ಲಕ್ಷ್ಯ: ಧಾರವಾಡ ಹೈಕೋರ್ಟ್ ಸಂಚಾರಿ ಪೀಠವು 2012ರ ಜುಲೈನಲ್ಲಿ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ನೀಡಿದೆ. ಈ ನಿಟ್ಟಿನಲ್ಲಿ ಕಾನೂನಿನಡಿ ಪರಿಹಾರ ಕಂಡುಕೊಳ್ಳುವಲ್ಲಿ ಕೆಐಎಡಿಬಿ ಹಾಗೂ ಎನ್ಎಂಡಿಸಿ ಆಗಲಿ ಯಾವುದೇ ಪ್ರಕ್ರಿಯೆಗೆ ಮುಂದಾಗಿಲ್ಲ ಎಂದರು.
ಭೂಮಿ ಇದ್ದು ಇಲ್ಲದಂಥ ಪರಿಸ್ಥಿತಿ: ಕೆಲ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ, ತಮ್ಮ ಜಮೀನು ಇದ್ದೂ ಇಲ್ಲದಂತಾಗಿ ಮಾರಾಟ ಮಾಡದಂಥ ಪರಿಸ್ಥಿತಿಯಲ್ಲಿದ್ದಾರೆ. ಕಾರಣ ಈಗಾಗಲೇ ಕೆಐಎಡಿಬಿ ಅವರು ಭೂ ಸ್ವಾಧೀನಕ್ಕೆ ಪ್ರಿಲಿಮಿನರಿ ನೋಟಿಫಿಕೇಷನ್ ಹೊರಡಿಸಿರುವುದರಿಂದ ರೈತರಿಗೆ ತಮ್ಮ ಜಮೀನು ಇದ್ದರೂ ಬೇರೊಬ್ಬರಿಗೆ ಮಾರುವಂತಿಲ್ಲ. ಕೂಡಲೇ ಕೆಐಎಡಿಬಿ ಅವರು ರೈತರಿಗೆ ಸೂಕ್ತ ಪರಿಹಾರವನ್ನು ವಿತರಣೆ ಮಾಡಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಎನ್. ಪ್ರತಾಪ ರೆಡ್ಡಿ, ಭೂಮಿ ನೀಡಿದ ರೈತರಾದ ನ್ಯಾಯವಾದಿ ಜೆ.ಎಸ್. ಬಸವರಾಜ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

