ಜಿಲ್ಲಾಧ್ಯಕ್ಷರ ಆಯ್ಕೆ: ಬಿಜೆಪಿ ತಂತ್ರಗಾರಿಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 20
ಒಂದು ಕಡೆ ಬಿಜೆಪಿಯಿಂದ ದೂರ ಸರದಿರುವ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಬಿಜೆಪಿಗೆ ಬರುವ ಅರ್ಥಾತ್ ಕರೆತರುವ ಬೆಳವಣಿಗೆ ಭರದಿಂದ ಸಾಗಿದ್ದರೆ, ಇನ್ನೊಂದು ಕಡೆ ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷರ ಘೋಷಣೆ ಜು. 21ಕ್ಕೆ ಮುಹೂರ್ತ ಫಿಕ್ಸ್ ಮಾಡಿರುವುದು ಕುತೂಹಲ ಕೆರಳಿಸಿದೆ.
ಶ್ರೀರಾಮುಲು, ರೆಡ್ಡಿ ಸಹೋದರರು ಬಿಜೆಪಿಗೆ ಬರುವ ಪೂರ್ವದಲ್ಲಿ ಜಿಲ್ಲಾಧ್ಯಕ್ಷರ ಘೋಷಣೆ ಮಾಡಿ ಪಕ್ಷವನ್ನು ಯಾವುದೇ ವ್ಯಕ್ತಿಗಳ ಕೈಗೆ ನೀಡದೆ, ಪಕ್ಷದ ನಿಲುವು ಭದ್ರಪಡಿಸುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಶ್ರೀರಾಮುಲು ಅವರನ್ನು ಬಿಜೆಪಿಗೆ ಆಹ್ವಾನಿಸುವ ಮಾತುಕತೆ ಈಗಾಗಲೇ ಬಿರುಸಿನಿಂದ ನಡೆದಿದೆ. ಇವರು ಬಿಜೆಪಿಗೆ ಬಂದಿದ್ದೆಯಾದರೆ ಬಿಜೆಪಿಯಲ್ಲಿ ಮೊದಲಿನಷ್ಟು ಪ್ರಾಬಲ್ಯ ಸಾಧಿಸುತ್ತಾರೆಯೇ ಎಂಬುದು ಕುತೂಹಲದ ವಿಷಯವಾಗಿದೆ. ಕಾರಣ ಈಗಾಗಲೇ ರಾಜ್ಯಾದ್ಯಂತ ಬಿಜೆಪಿ ಜಿಲ್ಲಾಧ್ಯಕ್ಷರ ಹಾಗೂ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಂತೆಯೇ ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಾದ ಕೊಪ್ಪಳ, ಚಿತ್ರದುರ್ಗ, ರಾಯಚೂರು ಜಿಲ್ಲಾಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಇದರಿಂದಾಗಿ ಬಳ್ಳಾರಿಯೊಂದಿಗೆ ಇತರ ಜಿಲ್ಲೆಗಳಲ್ಲಿ ಪ್ರಾಬಲ್ಯ ಸಾಧಿಸುವ ಮನೋಭಾವನೆ ಮೊದಲಿನಿಂದ ಹೊಂದಿದ್ದ ಶ್ರೀರಾಮುಲು ಬಳಗಕ್ಕೆ ಜಿಲ್ಲಾಧ್ಯಕ್ಷರ ಘೋಷಣೆ ಕೊಂಚ ಇರುಸು-ಮುರುಸಿಗೆ ಕಾರಣವಾಗಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಬೇಡಿಕೆ ಮುಂದಿಟ್ಟು ಸೇರ್ಪಡೆ: ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಬಿಜೆಪಿಗೆ ಬರಬೇಕಾದರೂ ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ರಾಯಚೂರು ಜಿಲ್ಲೆಗಳ ಉಸ್ತುವಾರಿಯನ್ನು ತಮಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರು ಘೋಷಣೆಯಾದರೆ, ರೆಡ್ಡಿಗಳು ಬಿಜೆಪಿಗೆ ಆಗಮಿಸಿದ ಮೇಲೆ ಜಿಲ್ಲಾಧ್ಯಕ್ಷ ಶ್ರೀರಾಮುಲು ಅಣತಿಯಂತೆ ನಡೆಯದಿದ್ದರೆ ಬದಲಾಯಿಸಬಹುದೇ ಅಥವಾ ಶ್ರೀರಾಮುಲು ಬಳಗಕ್ಕೆ ಈಗಾಗಲೇ ಈ ಹಿಂದೆ ಪಕ್ಷದಲ್ಲಿ ಕೆಲವೊಂದು ನಿರ್ಧಾರಗಳ ಕೈಗೊಳ್ಳಲು ಸ್ವಾತಂತ್ರ್ಯ ನೀಡಿ, ಕೈ ಸುಟ್ಟುಕೊಂಡಿರುವ ಫಲವಾಗಿಯೇ ಬಿಜೆಪಿ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ರೆಡ್ಡಿ ಸಹೋದರರು ಬಿಜೆಪಿಗೆ ಬರುವ ಲಕ್ಷಣಗಳು ಇದ್ದರೂ, ರೆಡ್ಡಿ ಸಹೋದರರ ಬೇಡಿಕೆಯ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷ ನೇಮಕಕ್ಕೆ ಮುಂದಾಗಿದ್ದಾರೆ.
ಮೊದಲಿನ ಪ್ರಾಬಲ್ಯ ಗಳಿಸುವರೇ?: ಈ ಹಿಂದೆ ಬಿಜೆಪಿಯಲ್ಲಿ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಇದ್ದಾಗ, ಬಿಜೆಪಿಯ ಪ್ರಮುಖ ನಿರ್ಧಾರಗಳಲ್ಲಿ ಇವರು ಪ್ರಮುಖ ಪಾತ್ರವಹಿಸುವ ಮೂಲಕ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ದರೂ ಇದೀಗ ಶ್ರೀರಾಮುಲು ಬಳಗ ಬಿಜೆಪಿಗೆ ಸೇರಿದ್ದೆ ಆದಲ್ಲಿ ಮೊದಲಿನ ಪ್ರಾಬಲ್ಯ ಗಳಿಸುವುದು ಕಷ್ಟಸಾಧ್ಯ. ಏಕೆಂದರೆ ಶ್ರೀರಾಮುಲು, ರೆಡ್ಡಿ ಸಹೋದರರ ಬಳಗಕ್ಕೂ ಬಿಜೆಪಿ ಅನಿವಾರ್ಯವಾಗಿದ್ದರಿಂದ ಇದೀಗ ಅವರನ್ನು ಅಷ್ಟು ಮಹತ್ವ ಕೊಟ್ಟು ನೋಡುವುದು ಕಷ್ಟಸಾಧ್ಯ. ಶ್ರೀರಾಮುಲು ಬಳಗಕ್ಕೆ ಮಹತ್ವ, ಪ್ರಾಶಸ್ತ್ಯ ನೀಡುವುದಿಲ್ಲ ಎನ್ನುವಂತಿಲ್ಲ. ಆದರೆ, ಮೊದಲಿನಷ್ಟು ನೀಡುವುದು ತೀರಾ ಕಷ್ಟ.
ಜಿಲ್ಲಾಧ್ಯಕ್ಷರ ಆಯ್ಕೆ ಸಹಜ ಪ್ರಕ್ರಿಯೆ
ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತು ಬಿಜೆಪಿಯ ಹಿರಿಯ ಮುಖಂಡರೊಬ್ಬರನ್ನು 'ಕನ್ನಡಪ್ರಭ' ಮಾತನಾಡಿಸಿದಾಗ, ಶ್ರೀರಾಮುಲು, ರೆಡ್ಡಿ ಸಹೋದರರು ಬಿಜೆಪಿಗೆ ಬರುವುದಕ್ಕೂ ಹಾಗೂ ಜಿಲ್ಲಾಧ್ಯಕ್ಷರ ನೇಮಕಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಬಿಜೆಪಿಗೆ ಬರುವ ಮಾತುಕತೆ ನಡೆಯುತ್ತಿರುವುದು ಸತ್ಯ. ಆದರೆ, ರಾಜ್ಯಾದ್ಯಂತ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಂತೆ, ಬಳ್ಳಾರಿಯಲ್ಲೂ ಆಗಲಿದೆ. ಅವರು ಬರುವ ಪೂರ್ವದಲ್ಲಿಯೇ ಜಿಲ್ಲಾಧ್ಯಕ್ಷ ನೇಮಕ ಮಾಡಬೇಕೆಂಬ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ.
ಇಂದು ಬಳ್ಳಾರಿ ಜಿಲ್ಲಾಧ್ಯಕ್ಷರ ಘೋಷಣೆಗೆ ಮುಹೂರ್ತ
ಬಳ್ಳಾರಿ ಜಿಲ್ಲಾಧ್ಯಕ್ಷರ ಘೋಷಣೆ ಮಾಡಲು ಈಗಾಗಲೇ ಬಿಜೆಪಿಯು ಮುಹೂರ್ತ ಫಿಕ್ಸ್ ಮಾಡಿದೆ. ಇದು ಶ್ರೀರಾಮುಲು, ರೆಡ್ಡಿ ಬಳಗದ ಆಶ್ಚರ್ಯಕ್ಕೆ ಕಾರಣವಾಗಿದೆ. ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಬಿಜೆಪಿಗೆ ಆಗಮಿಸಲಿದ್ದಾರೆ ಎಂಬ ಲಕ್ಷಣಗಳು ಗೋಚರಿಸುವುದರ ನಡುವೆಯೂ ಬಳ್ಳಾರಿ ಜಿಲ್ಲಾಧ್ಯಕ್ಷ ಘೋಷಣೆಗೆ ಬಿಜೆಪಿ ಮುಂದಾಗಿದೆ. ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕರಾದ ನೇಮಿರಾಜ ನಾಯ್ಕ ಹಾಗೂ ಎಂ.ಎಸ್. ಸೋಮಲಿಂಗಪ್ಪ ಹೆಸರು ಕೇಳಿಬರುತ್ತಿದ್ದು, ಹಗರಿಬೊಮ್ಮನಹಳ್ಳಿಯ ಮಾಜಿ ಶಾಸಕ ನೇಮಿರಾಜ ನಾಯ್ಕ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

