ಬಳ್ಳಾರಿ

ಮಾರೆಮ್ಮ ಕೊಲೆ ಪ್ರಕರಣ: ಸಿಓಡಿ ತನಿಖೆಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಜು. 23
ಪಟ್ಟಣದ ನಂ.10 ಮುದ್ದಾಪುರ ಗ್ರಾಮದಲ್ಲಿ ಏ. 29ರಂದು ನಡೆದ ಉಪ್ಪಾರ ಮಾರೆಮ್ಮನವರ ಕೊಲೆ ಪ್ರಕರಣವನ್ನು ಸಿಓಡಿ ತನಿಖೆಗೊಳಪಡಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಘಟಕಾಧ್ಯಕ್ಷೆ ಕೆ. ನಾಗರತ್ನಮ್ಮ ಆಗ್ರಹಿಸಿದ್ದಾರೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರು, ಕೊಲೆಯಾದ ಉಪ್ಪಾರ ಮಾರೆಮ್ಮನ ತಾಯಿ ನಾಗಮ್ಮ, ತಮ್ಮ ಹೊನ್ನೂರುಸ್ವಾಮಿ, ಮಗ ಹೊನ್ನೂರುಸ್ವಾಮಿ, ಸೊಸೆ ರೇಖಾ ಇತರರ ಉಪಸ್ಥಿತಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಲ್ಲಮ್ಮ ಕ್ಯಾಂಪ್ ನಿವಾಸಿ ಉಪ್ಪಾರ ಮಾರೆಮ್ಮ(45)ಳನ್ನು ಕೆಲಸದ ನಿಮಿತ್ತ ರಿಕ್ಷಾ ಬಸಪ್ಪ ಎನ್ನುವ ವ್ಯಕ್ತಿ ಕರೆದುಕೊಂಡು ಹೋಗಲು ಮಾರೆಮ್ಮಳ ಮನೆಗೆ ಬಂದ ಸಂದರ್ಭದಲ್ಲಿ ಪಲ್ಲೇದ್ ಲಕ್ಷ್ಮಿಪತಿ, ಬಿ.ಲಿಂಗಪ್ಪ, ಬಾಳಪ್ಪ ಎನ್ನುವವರಿದ್ದರು. ಕಾಣೆಯಾದ ಮಾರೆಮ್ಮ ಮರುದಿನ ಬೆಳಗ್ಗೆ ರಿಕ್ಷಾ ಬಸಪ್ಪನ ಮನೆಯಲ್ಲಿ ಕೊಲೆಯಾಗಿದ್ದಳು. ಮಾರೆಮ್ಮನ ಹೆಣ ತೀವ್ರಗಾಯಗಳಿಂದಲೂ, ರಕ್ತಸ್ರಾವದಿಂದಲೂ, ಹರಿದ ವಸ್ತ್ರಗಳಿಂದ ಕೂಡಿತ್ತು.
ಶವ ಪರೀಕ್ಷೆಯಲ್ಲೂ ಗುಪ್ತಾಂಗ, ಎದೆ ಸೇರಿ ದೇಹದ ಅನೇಕ ಭಾಗಗಳು ರಕ್ತಸಿಕ್ತ ಗಂಭೀರ ಸ್ವರೂಪದ ಗಾಯಗಳಿಂದ ಕೂಡಿವೆ ಎಂದು ದಾಖಲಿಸಿದೆ. ಮಾರೆಮ್ಮಳ ಮೇಲೆ ಅನೇಕರು ಅತ್ಯಾಚಾರವೆಸಗಿ ಕೊಲೆ ಮಾಡಿದ ಶಂಕೆಯಿದ್ದು, ಪೊಲೀಸರು ಕೇವಲ ರಿಕ್ಷಾ ಬಸಪ್ಪನನ್ನು ಮಾತ್ರ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳಾದ ತಿಮ್ಮಪ್ಪ ತಂದೆ ರಿಕ್ಷಾ ಬಸಪ್ಪ, ಪಲ್ಲೇದ್ ಲಕ್ಷ್ಮಿಪತಿ, ಬಿ. ನಿಂಗಪ್ಪ, ಬಾಳಪ್ಪ ಎನ್ನುವವರನ್ನು ಪೊಲೀಸರು ರಾಜಕೀಯ ಒತ್ತಡಗಳಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ಹೂಡಿದ್ದಾರೆ. ಇದರಿಂದ ಮಾರೆಮ್ಮಳ ಅತ್ಯಾಚಾರ ಹಾಗೂ ಕೊಲೆ ಮಾಡಿದವರು ಕಾನೂನಿಂದ ತಪ್ಪಿಸಿಕೊಳ್ಳುವಂತಾಗಿದೆ. ಪೊಲೀಸರಿಂದ ನಿಷ್ಪಕ್ಷಪಾತವಾದ ತನಿಖೆ ಸಾಧ್ಯವಿಲ್ಲದಾಗಿದೆ. ನಂ.10 ಮುದ್ದಾಪುರ ಗ್ರಾಮ ಪಂಚಾಯ್ತಿ ಆಡಳಿತ ಈ ಕುರಿತು ನಿರ್ಲಕ್ಷ್ಯವಹಿಸಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಈ ಕುರಿತು ಮುಖ್ಯಮಂತ್ರಿ, ಮಹಿಳಾ ಆಯೋಗ ಸೇರಿ ಎಲ್ಲ ಶ್ರೇಣಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೊಳಪಡಿಸಬೇಕು ಮತ್ತು ಮಾರೆಮ್ಮಳ ಸಮಗ್ರ ಪ್ರಕರಣವನ್ನು ಸಿಓಡಿ ತನಿಖೆಗೊಳಪಡಿಸುವಲ್ಲಿ ಜಿಲ್ಲಾಡಳಿತ ಮುಂದಾಗಬೇಕಿದೆ. 15 ದಿನದೊಳಗಾಗಿ ಸಿಓಡಿ ತನಿಖೆಗೊಳಪಡಿಸದಿದ್ದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ನೆರವಿನೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.  
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಘಟಕದ ಸದಸ್ಯೆಯರಾದ ಯಲ್ಲಮ್ಮ, ಎಚ್. ಮಂಜುಳಾ, ಹಂಪಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.