ಎಪಿಎಂಸಿ ನಾಮನಿರ್ದೇಶನ ಸದಸ್ಯತ್ವಕ್ಕೆ ಪೈಪೋಟಿ
ಹಗರಿಬೊಮ್ಮನಹಳ್ಳಿ: ನಿಗಮ, ಮಂಡಳಿಗಳ ನೇಮಕಾತಿಗೆ ಹಿಂಡುಗಟ್ಟಲೆ ಕಾಂಗ್ರೆಸ್ ಮುಖಂಡರ ಒತ್ತಡ ರಾಜಧಾನಿ ಬೆಂಗಳೂರಿನಲ್ಲಿ ಶುರುವಾಗಿರುವಾಗಲೇ ಇತ್ತ ಹಗರಿಬೊಮ್ಮನಹಳ್ಳಿ ಎಪಿಎಂಸಿಗೆ ಸರ್ಕಾರದಿಂದ ನಾಮನಿರ್ದೇಶನಗೊಳ್ಳಲು ಕೈ ಪಾಳೆಯದಲ್ಲಿ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಾಗಿದೆ.
ಲಭ್ಯ ಇರುವ ಮೂರು ಸ್ಥಾನಗಳಿಗೆ ನಾಮನಿರ್ದೇಶನವಾಗಲು 40ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮ ಸ್ವವಿವರ ಹಿಡಿದು ಸರದಿಯಲ್ಲಿ ನಿಂತಿದ್ದಾರೆ. ಹನುಮಂತನ ಬಾಲದಂತೆ ಬೆಳೆದು ನಿಂತಿರುವ ಆಕಾಂಕ್ಷಿಗಳ ಯಾದಿ ಸಹಜವಾಗಿಯೇ ಪಕ್ಷದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ಕ್ಷೇತ್ರದಲ್ಲಿ ಪಕ್ಷದಿಂದ ಚುನಾವಣೆಯಲ್ಲಿ ಸೋಲನುಭವಿಸಿರುವ ಪಕ್ಷದ ಅಭ್ಯರ್ಥಿಯ ಶಿಫಾರಸು ಮೇರೆಗೆ ನಿಗಮ- ಮಂಡಳಿಗಳಿಗೆ ನಾಮನಿರ್ದೇಶನ ಮಾಡಬೇಕೆಂದು ಈ ಮಧ್ಯೆ ಕೆಪಿಸಿಸಿ ಸ್ಪಷ್ಟಪಡಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲನುಭವಿಸಿದ್ದು, ಸೋತ ಅಭ್ಯರ್ಥಿ ಎಲ್. ಮಾರೆಣ್ಣ ಅವರ ಶಿಫಾರಸು ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಅವರತ್ತ ದೌಡಾಯಿಸಿದ್ದಾರೆ. ಈ ನಡುವೆ ಹಲವರು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಪಿ. ರವೀಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಅರ್ಜಿ ಸಲ್ಲಿಸಿ, ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾಗುವ ಕನಸು ಕಾಣುತ್ತಿದ್ದಾರೆ.
ಆಕಾಂಕ್ಷಿಗಳ ಪಟ್ಟಿ: ಎಪಿಎಂಸಿ ಮಾಜಿ ಸದಸ್ಯ ಪಿ. ಛತ್ರಪ್ಪ, ಮುಖಂಡರಾದ ಬಾಲಕೃಷ್ಣಬಾಬು, ಮುತ್ಕೂರು ಪಾಂಡುರಂಗ, ಗ್ರಾಪಂ ಮಾಜಿ ಅಧ್ಯಕ್ಷ ಮಾದೂರು ಮಲ್ಲಪ್ಪ, ಕೋರಿ ಸಿದ್ದಲಿಂಗಪ್ಪ, ಸಿಗೇನಹಳ್ಳಿ ಮಾರುತೆಪ್ಪ ಹೀಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳು ನಾಮನಿರ್ದೇಶಿತರಾಗಲು ತುದಿಗಾಲ ಮೇಲೆ ನಿಂತಿದ್ದಾರೆ.
ಇಲ್ಲಿನ ಎಪಿಎಂಸಿ ವಾರ್ಷಿಕ ಸುಮಾರು ಒಂದೂವರೆ ಕೋಟಿ ರುಪಾಯಿಗಳಷ್ಟು ವ್ಯವಹಾರ ಹೊಂದಿ, ಜಿಲ್ಲೆಯಲ್ಲಿ ಸದೃಢ ಎಪಿಎಂಸಿಯಾಗಿದೆ. ಅರ್ಥಿಕವಾಗಿ ಸಬಲವಾಗಿರುವ ಸಂಸ್ಥೆಗಳಿಗೆ ನಾಮನಿರ್ದೇಶನವಾಗಲು ಸಹಜವಾಗಿಯೇ ಎಲ್ಲರೂ ಬಯಸುತ್ತಾರೆ. ಇಲ್ಲಿ ಆಗಿರುವುದು ಅದೇ.
ಹೀಗಾಗಿ ಇವತ್ತು ಹಗರಿಬೊಮ್ಮನಹಳ್ಳಿ ಎಪಿಎಂಸಿಗೆ ನಾಮನಿರ್ದೇಶನಗೊಳ್ಳಲು ಇಷ್ಟೊಂದು ಸಂಖ್ಯೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆದು ನಿಂತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

