ಬಳ್ಳಾರಿ

ಚರಂಡಿ ನೀರಿನಿಂದಾಗಿ ಕಾಣದಾಗಿದೆ ರಸ್ತೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 25
ನಮ್ಮ ಬಳ್ಳಾರಿ 'ಸ್ವಚ್ಛ ಬಳ್ಳಾರಿ' ಎಂದು ಹೇಳುವ ಮಹಾನಗರ ಪಾಲಿಕೆಗೆ ಹಲವು ದಿನಗಳಿಂದ ನಗರದ ಹೃದಯ ಭಾಗದಲ್ಲಿರುವ ರಸ್ತೆಯ ಮೇಲೆ ನಿಂತಿರುವ ಚರಂಡಿ ನೀರು ಕಾಣದಾಗಿದೆ.
ನಗರದ ಹಳೆ ಬಸ್ ನಿಲ್ದಾಣದಿಂದ ದುರ್ಗಮ್ಮ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬರುವ ಕಾಸ್ಮೋಪೊಲಿಟನ್ ಕ್ಲಬ್ ಮುಂದುಗಡೆ ಚರಂಡಿ ನೀರು ನಿಂತು ಕೊಳಚೆಯಂತಾದರೂ ಪಾಲಿಕೆ ಜಾಣಕುರುಡತನ ಪ್ರದರ್ಶಿಸುತ್ತಿದೆ. ಕಣ್ಣಿಗೆ ಕಾಣುವುದನ್ನೇ ಸ್ವಚ್ಛಮಾಡದ ಪಾಲಿಕೆ, ಇನ್ನು ಬಡಾವಣೆಗಳ ರಸ್ತೆಯನ್ನು ಹೇಗೆ ಸ್ವಚ್ಛ ಮಾಡೀತು ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ರಸ್ತೆಯೋ, ಚರಂಡಿಯೋ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಡಬ್ಬಲ್ ರಸ್ತೆಯಲ್ಲಿ ಬರುವ ಕಾಸ್ಮೋಪಾಲಿಟನ್ ಕ್ಲಬ್ ಮುಂಭಾಗದ ಚರಂಡಿಯಲ್ಲಿ ಕಸಕಡ್ಡಿ ತುಂಬಿ, ಕಳೆದ ಹಲವು ದಿನಗಳಿಂದ ಚರಂಡಿ ನೀರು ರಸ್ತೆಯಲ್ಲಿ ನಿಂತು, ರಸ್ತೆಯೋ ಅಥವಾ ಚರಂಡಿಯೋ ಎನ್ನುವಂತೆ ಭಾಸವಾಗುತ್ತಿದೆ. ಜಿಲ್ಲೆಯ ಬಹುತೇಕ ಅಧಿಕಾರಿಗಳು ಇದೇ ರಸ್ತೆಯಿಂದ ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗುತ್ತಿದ್ದರೂ ಈ ರಸ್ತೆಯ ಅವ್ಯವಸ್ಥೆ ಮಾತ್ರ ಇವರ ಕಣ್ಣಿಗೆ ಕಾಣುತ್ತಿಲ್ಲ.
ಸಾಂಕ್ರಾಮಿಕ ರೋಗಗಳ ಕುರಿತಾಗಿ ಮಹಾನಗರದ ಜನತೆಗೆ ನೀತಿ ಪಾಠ ಹೇಳುವ ಪಾಲಿಕೆ, ನೀರು ನಿಂತಿರುವುದರಿಂದ ಸೊಳ್ಳೆಗಳ ಅವಾಸಸ್ಥಾನವಾಗಿರುವ ಈ ಪ್ರದೇಶದಲ್ಲಿ ಸ್ವಚ್ಛತೆಗೆ ಮುಂದಾಗಿರುವುದು ಮಾತ್ರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಸ್ತೆ ಬದಿಯಲ್ಲಿ ನಡೆದು ಹೋಗುವಂಥವರು ಮೂಗಿ ಮುಚ್ಚಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲ ಆರಂಭವಾಗಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ರಸ್ತೆ ಬದಿಯಲ್ಲಿರುವ ಅಂಗಡಿಗಳು ಪ್ಲಾಸ್ಟಿಕ್ ಮತ್ತಿತರೆ ಸಾಮಗ್ರಿಗಳನ್ನು ಹಾಗೂ ಹೋಟೆಲ್‌ಗಳು, ತಿಂಡಿ ಮಾರುವ ಬಂಡಿಗಳು ಉಪಯೋಗಿಸಿದ ತರಕಾರಿ, ಮಾಂಸ ಮತ್ತಿತರೆ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೇ ಹಾಗೆ ಚರಂಡಿಗಳಿಗೆ ಎಸೆಯುವುದರಿಂದ ಕಸ ತುಂಬಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸೂಕ್ತ ಎಚ್ಚರಿಕೆ ವಹಿಸಿ, ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

 ವೈ.ಎಂ. ಸಿದ್ದಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.