ಬಳ್ಳಾರಿ

ಮುಳುಗಿದ ಕಂಪ್ಲಿ ಸೇತುವೆ: ಜನಜೀವನ ಅಸ್ತವ್ಯಸ್ತ

Published On :

ಬಳ್ಳಾರಿ(ಕಂಪ್ಲಿ): ತುಂಗಭದ್ರಾ ಜಲಾಶಯದಿಂದ ನದಿಗೆ 1.40 ಲಕ್ಷ ಕ್ಯುಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ನದಿಯ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿವೆ.
ಭಾನುವಾರ ಸಂಜೆ ನೀರಿನ ಪ್ರಮಾಣ ಇನ್ನು ಹೆಚ್ಚಾಗಿದ್ದು, ಕಂಪ್ಲಿ-ಗಂಗಾವತಿ ಸೇತುವೆ ಸಂಪೂರ್ಣ ಮುಳುಗಿದೆ. ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಪಾತ್ರದಲ್ಲಿರುವ ಕೆಲವು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನರಲ್ಲಿ ವಿಷ ಜಂತುಗಳ ಭೀತಿ ಉಂಟಾಗಿದೆ. ಕಂಪ್ಲಿ ಕೋಟೆಯಲ್ಲಿರುವ ಪ್ರಸನ್ನ ವೆಂಕಟರಮಣ, ತುಳಸಿ ಕಟ್ಟೆ, ಹೊಳೆ ಆಂಜನೇಯ ದೇವಸ್ಥಾನಗಳು ಜಲಾವೃತಗೊಂಡಿವೆ. ಬನವಾಸಿ ಮಾಗಾಣಿ ರಸ್ತೆಯ ತಾರಾತಳ್ಳ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಕಂಪ್ಲಿ, ಕೋಟೆ, ಬೆಳಗೋಡು ಹಾಳ್, ನಂ.3. ಸಣಾಪುರ, ಇಟಿಗಿ, ರಾಮಸಾಗರ, ಬುಕ್ಕಸಾಗರ ಗ್ರಾಮಗಳ ನದಿ ಪಾತ್ರದ ಬತ್ತ, ಕಬ್ಬು, ಬಾಳೆ ತೋಟಗಳು ಜಲಾವೃತಗೊಂಡಿವೆ. ನದಿ ನೀರು ಕೋಟೆ ಹೊಳೆ ಆಂಜನೇಯ ದೇವಸ್ಥಾನದವರೆಗೆ ಬಂದಿರುವುದರಿಂದ ಕಂಪ್ಲಿ-ಕೋಟೆ ರಸ್ತೆಯ ಸಂಪರ್ಕ ಸ್ಥಗಿತಗೊಂಡಿದೆ. ಹೊಸ ನೀರು ಬಂದಿರುವುದರಿಂದ ಹೆಣ್ಣು ಮಕ್ಕಳು  ಗಂಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾಡ ತಹಸೀಲ್ದಾರ್ ಕೆ. ಬಾಲಪ್ಪ, ಪುರಸಭೆ ಮುಖ್ಯಾಧಿಕಾರಿ ಕೆ.ಬಿ. ಬೀರಣಗಿ, ಕಂದಾಯ, ಪುರಸಭೆ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ನದಿ ಪಾತ್ರದ ಜನತೆಗೆ ಎಚ್ಚರಿಕೆ ನೀಡುವ ಮೂಲಕ ಯಾವುದೇ ಅನಾಹುತ ಆಗದಂತೆ ಜಾಗ್ರತೆ ವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.