ಬಳ್ಳಾರಿ

ವಿಎಸ್‌ಕೆ ವಿವಿ: ಅಧಿಕಾರಕ್ಕಾಗಿ ಕಿತ್ತಾಟ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 29
ಈ ಭಾಗದ ಶೈಕ್ಷಣಿಕ ಅಭಿವೃದ್ಧಿಯ ಆಶಯ ಹೊತ್ತಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸದ್ಯ ಅಂತಹ ಯಾವುದೇ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊರಟಿಲ್ಲ ಎಂಬ ಅನೇಕ ಅನುಮಾನಗಳು ಕಾಡತೊಡಗಿವೆ.
ಇದಕ್ಕೆ ಕಾರಣಗಳು ಇಲ್ಲದಿಲ್ಲ. ಸದ್ಯ ಕುಲಸಚಿವ ಹಾಗೂ ಕುಲಪತಿಗಳ ನಡುವೆ ನಡೆದಿರುವ ಪತ್ರ ಸಮರ ಮುಂದುವರೆಯುತ್ತಲೇ ಇದೆ. ನಮ್ಮ ಭಾಗಕ್ಕೂ ಒಂದು ವಿಶ್ವವಿದ್ಯಾಲಯ ಬಂದಿದೆ. ಅದರಿಂದ ತಮ್ಮ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಶೈಕ್ಷಣಿಕವಾಗಿ ನಾವು ಮುಂದುವರೆಯುತ್ತೇವೆ ಎಂಬ ಜನತೆಯ ಆಶಯಕ್ಕೆ ಈ ಇಬ್ಬರ ಪತ್ರ ಸಮರ ಎಳ್ಳು ನೀರು ಬಿಟ್ಟಂತಾಗಿದೆ. ಇದರಿಂದಾಗಿ ಈ ಭಾಗದ ಜನರಲ್ಲಿ ಕೊಂಚ ಬೇಸರ ಮೂಡಿಸಿದೆ.
ಅಧೀನ ಕಾರ್ಯದರ್ಶಿಗೆ ಪತ್ರ: ವಿಶ್ವವಿದ್ಯಾಲಯ ಕುಲಸಚಿವ ಡಾ. ಕಾಟೆಪಾಗ ವಿಜಯಕುಮಾರ್ ಅವರು ಉನ್ನತ ಶಿಕ್ಷಣ ಸಚಿವರ ಅಧೀನ ಕಾರ್ಯದರ್ಶಿ ಅವರಿಗೆ ಜು. 29ರ ಸೋಮವಾರ ಪತ್ರ ಬರೆದು, ವಿವಿಯಲ್ಲಿ ಕುಲಪತಿಗಳು ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದಾರೆ ಹಾಗೂ ಹಣಕಾಸು ಪತ್ರ ವ್ಯವಹಾರವನ್ನು ನೇರವಾಗಿ ನಿಭಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಕುಲಸಚಿವರ ಇಂತಹ ನಿರ್ಧಾರದಿಂದ ಕುಲಪತಿ ಮಂಜಪ್ಪ ಹೊಸಮನಿ ಅವರು, ಕುಲಸಚಿವರು ತಮ್ಮ ಅನುಮೋದನೆ ಇಲ್ಲದೆ ಪತ್ರ ವ್ಯವಹಾರ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿವಿಯ ಎಲ್ಲಾ ಕಚೇರಿಯ ಕಡತಗಳನ್ನು ಕುಲಸಚಿವ ವಿಜಯಕುಮಾರ್‌ಗೆ ಸಲ್ಲಿಸುವುದನ್ನು ಸ್ಥಗಿತಗೊಳಿಸಿ, ಮೌಲ್ಯಮಾಪನ ಕುಲಸಚಿವ ರಂಗರಾಜ ವನದುರ್ಗ ಅವರನ್ನು ಹಂಗಾಮಿ ಕುಲಸಚಿವರನ್ನಾಗಿಸಿ ಅಧಿಸೂಚನೆ ಹೊರಡಿಸಿದ್ದರು.
ಕುಲಸಚಿವರಿಂದ ಸುತ್ತೋಲೆ:  ಇದೀಗ ಕುಲಪತಿಗಳ ಇಂತಹ ಆದೇಶದಿಂದ ಕೆರಳಿದ ಕುಲಸಚಿವ ವಿಜಯಕುಮಾರ್ ಅವರೊಂದು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ತಮ್ಮನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ 3 ವರ್ಷ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಿದೆ. ಇದರಿಂದಾಗಿ ನನಗೆ ನೀಡಿರುವ ಎಲ್ಲಾ ಅಧಿಕಾರವನ್ನು ವರ್ಗಾಯಿಸುವ ಅಧಿಕಾರ ಸರ್ಕಾರಕ್ಕಿದೆ. ಈ ಅಧಿಕಾರ ಕುಲಪತಿಗಳಿಗಿಲ್ಲ. ಇನ್ನು ಮುಂದೆ ಎಲ್ಲಾ ಕಡತಗಳನ್ನು ತಮ್ಮ ಮುಖಾಂತರವೇ ಸಲ್ಲಿಸಲು ತಿಳಿಸಲಾಗಿದೆ. ಕುಲಪತಿಗಳ ಕ್ರಮವನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಆದೇಶದ ಪ್ರತಿಯನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಧೀನ ಕಾರ್ಯದರ್ಶಿಗಳು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿದ್ದಾರೆ.
ಸದಾ ಸುದ್ದಿಯಲ್ಲಿ ವಿವಿ: ಈ ಹಿಂದೆ ಸಂಡೂರು ಕನ್ನಡ ಅಧ್ಯಯನ ಪೀಠದ ನಿರ್ದೇಶಕರ ವರ್ಗಾವಣೆ ಕುರಿತು ವಿಜಯನಗರ ವಿವಿ ರಾಜ್ಯಾದ್ಯಂತ ಸುದ್ದಿಯಲ್ಲಿತ್ತು. ಇದಲ್ಲದೇ ಕುಲಸಚಿವರು ಮತ್ತು ಕುಲಪತಿಗಳ ನಡುವೆ ಶೀತಲ ಸಮರ ನಡೆದೇ ಇತ್ತು. ಇವರ ವಿರುದ್ಧ ಅವರು, ಅವರ ವಿರುದ್ಧ ಇವರು ಸರ್ಕಾರದ ಉನ್ನತ ಶಿಕ್ಷಣ ಕಾರ್ಯದರ್ಶಿಗಳಿಗೆ ಪತ್ರ ಬರೆದು ಪರಸ್ಪರ ದೂರುತ್ತಲೇ ಸಾಗಿದ್ದಾರೆ. ವಿವಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವಶ್ಯಕರುವ ಸೌಲಭ್ಯ, ಶಿಕ್ಷಣ, ಪ್ರಯೋಗಾಲಯ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಅಭಿವೃದ್ಧಿ ವಿಷಯಗಳ ಬಗ್ಗೆ ಹೋರಾಡುವುದನ್ನು ಬಿಟ್ಟು, ವೈಯಕ್ತಿಕ ಸ್ಥಾನಮಾನಕ್ಕಾಗಿ ಈ ರೀತಿ ಕಚ್ಚಾಡುತ್ತಿರುವುದು ಜಿಲ್ಲೆ ಸೇರಿದಂತೆ ವಿವಿ ವ್ಯಾಪ್ತಿಯ ಜಿಲ್ಲೆಯ ಜನತೆ, ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ವಿವಿಯಲ್ಲಿ ಉತ್ತಮ ಆಡಳಿತ ನೀಡಬೇಕಾದವರೇ ಈ ರೀತಿ ಪತ್ರ ಸಮರ ನಡೆಸಿದರೆ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯವೇ ಎಂಬುದು ಚಿಂತಕರ ಚಾವಡಿಯಲ್ಲಿ ಚರ್ಚೆಯಾಗುತ್ತಿದೆ. ಉನ್ನತ ಹುದ್ದೆಯಲ್ಲಿರುವ ಇಬ್ಬರು ಅಧಿಕಾರಿಗಳು ಪತ್ರ ಸಮರ ನಿಲ್ಲಿಸಿ ವಿವಿಯ ಉದ್ಧಾರ, ಉನ್ನತಿಗಾಗಿ ಶ್ರಮಿಸಲಿ ಎಂಬುದೇ ಜನತೆಯ ಅಶಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.