ಟ್ರ್ಯಾಕ್ಟರ್‌ಗೆ ಪರವಾನಗಿ ನೀಡಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 30
ರೈತರು ತಮ್ಮ ಟ್ರ್ಯಾಕ್ಟರ್‌ಗಳ ಮೂಲಕ ಮರಳು, ಬೆಂಚಿ, ಕಲ್ಲು ಸಾಗಿಸಲು ಜಿಲ್ಲಾಡಳಿತ ಕನಿಷ್ಟ ಶುಲ್ಕ ವಿಧಿಸಿ ಪರವಾನಗಿ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಟ್ರ್ಯಾಕ್ಟರ್ ಮಾಲೀಕರ ಸಂಘದ ಸಂಚಾಲಕ ಎಂ. ತಿಮ್ಮಪ್ಪ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಸಾವಿರಾರು ಟ್ರ್ಯಾಕ್ಟರ್‌ಗಳು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಆಶ್ರಯ, ಅಂಬೇಡ್ಕರ್, ಬಸವ, ಇಂದಿರಾ ಆವಾಸ್ ಮನೆಗಳು ಮತ್ತು ಬಡ, ಮಧ್ಯಮ ವರ್ಗದ ಜನರು ನಿರ್ಮಾಣ ಮಾಡುತ್ತಿರುವ ಸಣ್ಣಪುಟ್ಟ ಮನೆಗಳ ನಿರ್ಮಾಣಕ್ಕಾಗಿ ಅವಶ್ಯವಿರುವ ಮರಳು (ಉಸುಕು), ಇಟ್ಟಿಗೆ, ಕಲ್ಲು, ಬೆಂಚಿ, ಮಣ್ಣು ಇನ್ನಿತರೆ ಸಾಮಾಗ್ರಿಗಳು ಅಗತ್ಯವಾಗಿ ಬೇಕಿರುವುದರಿಂದ ಟ್ರ್ಯಾಕ್ಟರ್‌ಗಳ ಮೂಲಕ ಸಾಗಟ ಮಾಡಲು ರೈತರು ಮುಂದಾದಾಗ ಅದನ್ನು ಕಾನೂನು ಬಾಹಿರ ಚಟುವಟಿಕೆ ಎಂದು ಟ್ರ್ಯಾಕ್ಟರ್ ಮಾಲೀಕರ ಮೇಲೆ ಕೇಸ್ ಹೂಡುವುದು ಮತ್ತು ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು, ಅನೇಕ ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಳ್ಳುವುದು, ಜತೆಗೆ ಸಾವಿರಾರು ರು. ದಂಡ ವಿಧಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ಜಿಲ್ಲಾದ್ಯಂತ ಮರಳು ಲಭ್ಯವಿದ್ದು, ಮರಳು ನೀತಿಯ ಭಾಗವಾಗಿ ಹರಾಜು ಪ್ರದೇಶಗಳನ್ನು ಗುರುತಿಸಿ ಮರಳು ಸಾಗಾಟವನ್ನು ಲಾರಿಗಳ ಮೂಲಕ ಮಾಡಲಾಗುತ್ತಿದೆ. ಒಂದು ಲೋಡ್ ಲಾರಿಗೆ ಐದರಿಂದ ಆರು ಸಾವಿರ ರು. ನೀಡಬೇಕಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಣ್ಣಪುಟ್ಟ ಮನೆಗಳ ನಿರ್ಮಾಣಕ್ಕಾಗಿ ತೊಂದರೆಯಾಗುತ್ತದೆ. ಆದರೆ ಟ್ರ್ಯಾಕ್ಟರ್‌ಗಳ ಮೂಲಕ ಸಾಗಾಟ ಮಾಡಿದರೆ ಸಾಮಾನ್ಯ ಜನರಿಗೆ ಹಣ ಉಳಿತಾಯವಾಗುತ್ತದೆ. ಈ ನಿಟ್ಟಿನಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ಸಾಗಾಣಿಕೆಗೆ ಅವಕಾಶ ಕಲ್ಪಿಸಬೇಕು ಹಾಗೂ ಅವೈಜ್ಞಾನಿಕ ಮರಳು ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ನಾಳೆ ಸಮಾವೇಶ: ವಾಹನ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು, ಮನೆ, ಚರಂಡಿ, ಸಿಸಿ ರಸ್ತೆಗಳ ನಿರ್ಮಾಣಕ್ಕಾಗಿ ಅವಶ್ಯಕತೆ ಇರುವ ಮರಳು, ಬೆಂಚಿ, ಕಲ್ಲು, ಮಣ್ಣು, ಇನ್ನಿತರೆ ಸಾಮಗ್ರಿಗಳನ್ನು ಟ್ರ್ಯಾಕ್ಟರ್ ಮೂಲಕ ಸಾಗಾಟ ಮಾಡಲು ಜಿಲ್ಲಾಡಳಿತ ಪರವಾನಗಿ ನೀಡಬೇಕೆಂದು ಒತ್ತಾಯಿಸಿ ಆಗಸ್ಟ್ 1ರಂದು ಗುರುವಾರ ಬೆಳಗ್ಗೆ 11ಕ್ಕೆ ಗಾಂಧಿಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಆ. 1ರಂದು ನಡೆಯುವ ಸಮಾವೇಶದಲ್ಲಿ ನಿರ್ಣಯಗಳನ್ನು ಅಂಗೀಕರಿಸಿ, ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗುವುದು. ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿದಾಗ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಸಂಚಾಲಕ ಶ್ರೀನಿವಾಸ ರೆಡ್ಡಿ, ನರಸಿಂಹರೆಡ್ಡಿ, ಗುರುಲಿಂಗಪ್ಪ ಮತ್ತು ಬಿಸಿಲಹಳ್ಳಿ ಬಸವರಾಜ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

